Tuesday, August 30, 2022

"ಅಣ್ಣನ ನೆನಪು" ಓದಿದ್ದು-ಅನ್ಸಿದ್ದು.

                                                                               ಸಂದೀಪ್ ಎಸ್ ರಾವಣೀಕರ್.

        

    ಕುವೆಂಪು ಅವರನ್ನು ಹತ್ತಿರದಿಂದ ತಿಳಿದವರೆಷ್ಟೋ, ನೋಡಿದವರೆಷ್ಟೋ, ಅರಿತುಕೊಂಡವರೆಷ್ಟೋ. ಪ್ರಾಧ್ಯಾಪಕರಾಗಿ, ಮೈಸೂರು ವಿ.ವಿ ಕುಲಪತಿಗಳಾಗಿ ಕುವೆಂಪು ಅವರು ಪರಿಚಯವಾಗುವುದಕ್ಕಿಂತ ಒಬ್ಬ ಶ್ರೇಷ್ಠ ಕವಿಯಾಗಿ, ವೈಚಾರಿಕತೆಯ ದಾರ್ಶನಿಕರಾಗಿ ಎಲ್ಲರಿಗೂ ಬಲ್ಲವರಾಗಿದ್ದಾರೆ. ಆದರೆ ಕುವೆಂಪು ಮಗನಾಗಿ ತೇಜಸ್ವಿಯವರು ತಮ್ಮ ತಂದೆಯೊಟ್ಟಿಗೆ ಕಂಡುಂಡ ಹಲವು ವಿಚಾರಗಳ ತಮ್ಮ ಅನುಭವವನ್ನು ಸಂದರ್ಭ ಸಹಿತ  "ಅಣ್ಣನ ನೆನಪು" ಪುಸ್ತಕದ ಮೂಲಕ ಪರಿಚಯಿಸಲು ಪ್ರಯತ್ನಿಸಿದ್ದಾರೆ.

        ತಮ್ಮ ಕುಟುಂಬದ ಎಷ್ಟೋ ಖಾಸಗಿ ಒಡನಾಟವನ್ನು ಹೇಳುವ ತೇಜಸ್ವಿಯವರು, ಪ್ರೌಢಾವಸ್ಥೆಗೆ ತಲುಪಿ ಕಾಲೇಜಿನ ಮಟ್ಟಕ್ಕೆ ಏರುವ ತನಕ, ವಯಸ್ಸಿನಲ್ಲಿ ಮಾಡಬಹುದಾದ ಚೇಷ್ಟೆ-ಕುಚೇಷ್ಟೇಗಳನ್ನೆಲ್ಲ ತೆರೆದಿಡುತ್ತಾರೆ. ಅಣ್ಣನ ಮೌನ, ಧ್ಯಾನ, ಓದು, ಬರಹ, ವಿಚಾರಗಳನ್ನೆಲ್ಲ ಗಮನಿಸುತ್ತಾ ಪ್ರತಿಯೊಂದನ್ನು ಚರ್ಚಿಸುತ್ತಲೇ, ತಮಗಿಷ್ಟವಾದುದನ್ನೇ ಆರಿಸಿಕೊಳ್ಳಲು ಪ್ರಯತ್ನಿಸುವ ತೇಜಸ್ವಿ, ತಮಗೆ ಪ್ರಭಾವ ಬೀರುವ ಪ್ರತಿಯೊಂದು ಸಂದರ್ಭಗಳು ಮತ್ತು ಅವುಗಳಿಗೆ ಬರುವ ಅಣ್ಣನ ಪ್ರತಿಕ್ರಿಯೆಗಳನ್ನು ಇಲ್ಲಿ ಯಥಾವತ್ತಾಗಿ ನಮೂದಿಸಿದ್ದಾರೆ.

     ತಮ್ಮ ಕಾಲಾವಧಿಯಲ್ಲಿ ಘಟಿಸಿರಬಹುದಾದ ಪ್ರತಿಯೊಂದು ಘಟನೆಗಳನ್ನು ಮತ್ತು ಅದರ ಸುತ್ತಲಿನ ಕಾರಣ-ಪರಿಣಾಮಗಳನ್ನು ಹೇಳುವಾಗ, ನಮ್ಮೆದುರೆ ಎಲ್ಲವುಗಳು ನಡೆಯುತ್ತಿವೆ ಎಂದೆನಿಸದಿರಲಾರದು. ಮೈಸೂರು ಬಲ್ಲ ಪ್ರತಿಯೊಬ್ಬರೂ ಸಹ ಎಲ್ಲಾ ಸಂದರ್ಭಗಳನ್ನು ಕಲ್ಪನಾ ಚಿತ್ರಕ್ಕೆ ಇಳಿಸಿಕೊಳ್ಳದೆ ಮುಂದಕ್ಕೆ ಓದಲಾಗುವುದಿಲ್ಲ. 70-80 ದಶಕದ ಅಂದಿನ ಗಲ್ಲಿ, ಸರ್ಕಲ್, ಪ್ರದೇಶಗಳು ಇಂದಿಗೂ ಹಾಗೆ ಹೆಸರಾಗಿರುವುದು ಇದಕ್ಕೆ ಕಾರಣ.

   ನವೋದಯ ಕನ್ನಡ ಸಾಹಿತ್ಯ ಕಾಲದ ಕುವೆಂಪುರವರು ಎದುರಿಸಿದ ಸೈದ್ಧಾಂತಿಕ ಮತ್ತು ವರ್ಗ ಸಂಘರ್ಷಗಳನ್ನು, ನವ್ಯ-ಪ್ರಗತಿಶೀಲದಂತಹ ಮುಂದುವರಿದ ಸಾಹಿತ್ಯಕ ಪ್ರಕಾರಗಳ ವಸ್ತುನಿಷ್ಠತೆಯನ್ನು ಮತ್ತು ಅವು ತಾಳಿದ ಬದ್ಧತೆಗಳನ್ನು ವಿಮರ್ಶಾತ್ಮಕವಾಗಿ ಇಲ್ಲಿ ಹೇಳಲಾಗಿದೆ. ಕಲ್ಪನಾ ಜಗತ್ತಿನ ಕವಿಯಾಗಿ ವಿಚಾರಶೀಲ ಮತ್ತು ವೈಚಾರಿಕ ವ್ಯಕ್ತಿಯಾಗಿಯೂ ಕುವೆಂಪುರವರು ತಾಳಿದ್ದ ಹಲವು ಬಹುತ್ವದ ಪರಿಕಲ್ಪನೆಗಳು ಮಾಂಸಹಾರ, ಮೌಢ್ಯ ವಿರೋಧಿ ಆಚರಣೆಗಳು, ಬೂಸ ಪ್ರಕರಣ, 70 ದಶಕದ ಹೋರಾಟ, ಚಳುವಳಿಗಳು, ಅಖಂಡ ಕರ್ನಾಟಕ, ಲೋಹಿಯರ ಪ್ರಭಾವ, ಮಂತ್ರ ಮಾಂಗಲ್ಯದಂತಹ ಹಲವು ವಿಷಯಗಳಲ್ಲಿ ಯಾರ ಮರ್ಜಿಗೂ ಒಳಗಾಗದೆ ಗಟ್ಟಿತನ ಹೊಂದಿದ್ದರು ಎಂಬುದು ಅಣ್ಣನ ಬಗೆಗಿನ ತೇಜಸ್ವಿವರ ನಿರೂಪಣೆ.

 ಅಣ್ಣನ ಪರಿಕಲ್ಪನೆಯಲ್ಲಿದ್ದ ಒಂದಷ್ಟು ವಿಷಯಗಳಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ ಪ್ರತಿಕ್ರಯಿಸುವ ತೇಜಸ್ವಿಯವರು ಮಠ, ಚಳುವಳಿ, ಆಚರಣೆಗಳ ಬಗೆಗಿನ ವಿಷಯಗಳಲ್ಲಿ ತುಸು ಖಾರವಾಗಿ ಇದ್ದುದನ್ನು ಹೇಳಿಕೊಂಡಿದ್ದಾರೆ. ತಮ್ಮ ಬರಹ ಮತ್ತು ವಿಷಯಗಳ ಪ್ರಸ್ತಾವನೆಯಲ್ಲಿ ಯಾರ ಪ್ರಭಾವ ಮತ್ತು ಮುಲಾಜಿಗೂ ಒಳಗಾಗದ ತೇಜಸ್ವಿಯವರು ಅಣ್ಣನ ಬಗೆಗಿನ ಹಲವು ಶ್ರೇಷ್ಠತೆಗಳನ್ನು ಮುಕ್ತವಾಗಿ ಶ್ಲಾಘಿಸಿದ್ದಾರೆ. ಅಂತೆಯೇ ಅಂದಿನ ಒಡನಾಡಿಗಳಾದ ಪ್ರೊಫೆಸರ್ ನಂಜುಂಡಸ್ವಾಮಿ, ರಾಮದಾಸರು, ಕಡಿದಾಳರನ್ನು ಮತ್ತು ಇನ್ನಿತರ ಸ್ನೇಹಿತರನ್ನು ನೆನಪಿಸಿಕೊಳ್ಳಲು ಮರೆತಿಲ್ಲ.

     ಬಾಲ್ಯದಿಂದ ಕೊನೆಯವರೆಗೆ ಅಣ್ಣನ ಜೊತೆಗಿನ ಅದೆಷ್ಟೋ ಇಷ್ಟದ ನೆನಪಿನ ಘಟನೆಗಳನ್ನು ಅಕ್ಷರಕ್ಕಿಳಿಸಿದ ತೇಜಸ್ವಿಯವರು, ಕುವೆಂಪುರವರನ್ನು ತಿಳಿಯಲೆತ್ನಿಸುವ ನಮ್ಮಂತವರಿಗೆ "ಅಣ್ಣನ ನೆನಪು" ಪುಸ್ತಕಗಳ ಮಧ್ಯೆ ಇರಲೇಬೇಕಾದ ಹೊತ್ತಿಗೆಯಾಗಿದೆ.

Tuesday, February 1, 2022

'ನನ್ನ ತೇಜಸ್ವಿ' - ಓದಿದ್ದು ಅನ್ಸಿದ್ದು

 


                                                                                        ಸಂದೀಪ್ ಎಸ್ ರಾವಣೀಕರ್

                

     "ನನ್ನ ತೇಜಸ್ವಿ" ಶ್ರೀಮತಿ ರಾಜೇಶ್ವರಿ ತೇಜಸ್ವಿಯವರು ಬರೆದಿರುವ ತೇಜಸ್ವಿ ಎಂಬ ಮೇರು ವ್ಯಕ್ತಿತ್ವದ ವೈಯಕ್ತಿಕ ಬದುಕನ್ನು ತೆರೆದಿಡುವ ಅಪರೂಪದ ಪುಸ್ತಕ. ತೇಜಸ್ವಿಯ ಬಗೆಗೆ ಕೇಳಿ ತಿಳಿದು, ಓದಿ ಅರಿತು ಒಂದಷ್ಟು ಪ್ರಭಾವಕ್ಕೆ ಒಳಗಾಗಿರುವೆ. ಆದರೆ ವ್ಯಕ್ತಿ ಅದೇಗೆ ಬದುಕಿದ್ದರು? ಅದೇಗೆ ಅಷ್ಟೆಲ್ಲಾ ವಿಷಯಗಳನ್ನು ಅರಿತಿದ್ದರು? ಅವರ ತಿರುಗಾಟಗಳೇನು? ಹವ್ಯಾಸಗಳೇನು? ಸಹಪಾಠಿ ಮತ್ತು ಸಹವಾಸಿಗಳಾರು? ಎಂಬಿತ್ಯಾದಿ ಹಲವುಗಳನ್ನು ಚಿಕ್ಕಂದಿನಿಂದ ಬದುಕಿನ ಕೊನೆ ದಿನಗಳವರೆಗೆ ಅವರನ್ನು ತಿಳಿಯುವ ಹೆಬ್ಬಯಕೆಯನ್ನು ತೇಜಸ್ವಿಯವರು ಓದುಗರೊಟ್ಟಿಗೆ ಇರುವರೆಂಬಂತೆಯೇ ಮೇಡಂ ಈ ಪುಸ್ತಕದ ಮೂಲಕ ಪೂರ್ಣಗೊಳಿಸಿದ್ದಾರೆ.

          ಮೇಡಂ ರವರು ಹೇಳಿರುವಂತೆ, ವಿದ್ಯಾರ್ಥಿ ಕಾಲದಿಂದಲೇ ವ್ಯಕ್ತಿತ್ವ, ಬರಹ ಮತ್ತು ವಿಚಾರಗಳಿಂದ ಮಹಾರಾಜ ಕಾಲೇಜಿನ ಕ್ಯಾಂಪಸ್ ನಲ್ಲಿ ತೇಜಸ್ವಿಯವರದ್ದೇ ಮಾತು. ಕಾರಣಕ್ಕೋ ಏನೋ ತೇಜಸ್ವಿಯವರ ಪ್ರಭಾವ ರಾಜೇಶ್ವರಿ ಮೇಡಂರವರ ಮೇಲೆ ಗೊತ್ತಾಗದಂತೆ ಆವರಿಸುತ್ತದೆ. ಸ್ನೇಹಿತ/ತೆಯರಾಗಿ ಪರಿಚಿತರಾಗುವ ಇಬ್ಬರು ದಿನಕಳೆದಂತೆ ಪ್ರೀತಿಗೊಳಗಾಗುತ್ತಾರೆ. ಅಂದಿನ ಪರಿಸ್ಥಿತಿಯಲ್ಲಿ ಅವರಿಗಿದ್ದ ಒಂದೇ ಸಂವಹನ ಸಾಧನ ಅಂದರೆ, ಪತ್ರ ವಿನಿಮಯ. ಅಂತೆಯೇ ಅದೆಷ್ಟೋ ವೈಯಕ್ತಿಕ ವಿಚಾರಗಳ ಪತ್ರಗಳನ್ನು ಪುಸ್ತಕದಲ್ಲಿ ಯಥಾವತ್ತಾಗಿ ಮುದ್ರಿಸಲಾಗಿದೆ. ಇವರ ಜಾತಿ ಮೀರಿದ ಮದುವೆಗೆ ಎರಡು ಕುಟುಂಬದವರು ನೀಡುವ ಒಪ್ಪಿಗೆ, ಹಾಗೆ ಕುವೆಂಪುರವರು ಸಿದ್ಧಪಡಿಸಿದ ಸರಳ ಮತ್ತು ಮೊತ್ತಮೊದಲ "ಮಂತ್ರ ಮಾಂಗಲ್ಯ" ಮದುವೆ ಸಂದರ್ಭವನ್ನು ಓದುವಾಗ ಮದುವೆಯಲ್ಲಿ ನಾವು ಇದ್ದವೆಂಬ ಅನುಭವವಾಗುವುದು.

          ಯಾವುದೇ ಕೆಲಸಕ್ಕೂ ಸೇರದ ತೇಜಸ್ವಿಯವರು ಮತ್ತು ಅವರ ಆಸೆಯಂತೆ ಮಾಡುವ ಕಾಡಿನ ಸಂಗ, ದಿನಂಪ್ರತಿ ನಡೆಯುವ ಶಿಕಾರಿ ಅದಕ್ಕೆ ಜೊತೆಯಾಗುವ ಕಿವಿ (ನಾಯಿ), ಅಚ್ಚುಕಟ್ಟಾಗಿಸುವ ತೋಟದ ಕಾರ್ಯ, ಒಂದಷ್ಟು ಕಾಡು-ಮೇಡುಗಳ ಅಲೆದಾಟ, ದೂರದೂರಿಗೆ ತಮ್ಮದೇ ಸ್ಕೂಟರ್ ಕಾರ್ ಗಳಲ್ಲಿ ಜೊತೆಗೂಡಿ ಹೋಗುವ ಸಂದರ್ಭಗಳು ಒಂದೆಡೆಯಾದರೆ,ಬಂಧು-ಸ್ನೇಹಿತರುಗಳ ಮನೆಗೆ ಹೋಗುವ ಮತ್ತು ಇವರ ಮನೆಗೆ ಬರುವವರ ಸತ್ಕಾರ ಹೀಗೆ, ವಯಕ್ತಿಕವಾಗಿ ತೇಜಸ್ವಿ ತಮ್ಮಿಷ್ಟದಂತೆ ಕಳೆದುಹೋಗುತ್ತಾರೆ.

          ಜೆ.ಪಿ ಪ್ರಭಾವ ಮತ್ತು ಚಳುವಳಿ, ಕೃಷಿಕರ ಸಮಸ್ಯೆಗಳ ಸುತ್ತ ಚರ್ಚೆ ಮತ್ತು ಅರಿವು ಕಾರ್ಯಕ್ರಮಗಳು, ಅಂತರ್ಜಾತಿ ವಿವಾಹಗಳಿಗೆ ರಕ್ಷಣೆ ನೀಡಲು ಯುವಪಡೆ ನಿರ್ಮಾಣ, ಹಲವು ವಿಷಯಗಳ ಚರ್ಚೆಗಳಿಗಾಗಿಯೇ ಹಾಜರಾಗುವ ಅಭಿಮಾನಿಗಳು, ಕರ್ನಾಟಕದ ಮೂರನೇ ರಾಜಕೀಯ ಶಕ್ತಿಯಾಗಿ "ಕರ್ನಾಟಕ ಪ್ರಗತಿರಂಗ" ಶುರುವಿಗೆ ಚರ್ಚೆ ಹಾಗೂ ಯಾವುದೇ ಮರ್ಜಿಗೆ ಒಳಗಾಗದೆ ಸಾಮಾಜಿಕ ಮೌಲ್ಯವನ್ನು ಮತ್ತು ಸರಿ ಅನಿಸುವ ಕಾರ್ಯಗಳಿಗೆ ಅಂದಿನ ಜೊತೆಗಾರರು ಒಡಗೂಡಿ ಎಲ್ಲರನ್ನೂ ಎಚ್ಚರಿಸುವ, ಸಂಘಟಿಸುವ ಕಾರ್ಯಕ್ರಮಗಳಿಗೇನು ಕಡಿಮೆ ಇಲ್ಲದಂತೆ ಪ್ರತಿಯೊಂದನ್ನು ಪುಸ್ತಕದಲ್ಲಿ ದಾಖಲಿಸಲಾಗಿದೆ.

        ಹೊಸ ಪ್ರಯೋಗಳೆಂಬಂತೆ ಪ್ರಕಾಶನ ಪ್ರಾರಂಭ, ಕನ್ನಡ ನುಡಿಯನ್ನು ಗಣಕೀಕರಣಗೊಳಿಸಲು ನಡೆಸುವ ಪ್ರಯತ್ನಗಳು, ಫೋಟೊಗ್ರಫಿಗಾಗಿ ಕೊಂಡ ಹಳತು-ಹೊಸತು ಕ್ಯಾಮೆರಾಗಳು, ಆಗಾಗ ಬದಲಾಗುವ ಕಾರುಗಳ ಸಮೇತ ಅವರ ಹವ್ಯಾಸಿ ಕಾರ್ಯಗಳು ಇಲ್ಲಿ ಸಿಗುತ್ತವೆ.

       ಮಕ್ಕಳನ್ನು ಕನ್ನಡ ಶಾಲೆಯಲ್ಲಿ ಓದಿಸಬೇಕೆಂಬ ನಿರ್ಧಾರ, ಮಕ್ಕಳ ಇಷ್ಟದನ್ವಯ ಮತ್ತು ಅನೇಕ ಸ್ನೇಹಿತರ ಅಪೇಕ್ಷೆಯಂತೆ ಆಗುವ ಮಂತ್ರ ಮಾಂಗಲ್ಯದ ಅಂತರ್ಜಾತಿ ವಿವಾಹಗಳು, ಆಗಾಗ ಉದಯರವಿ ಮತ್ತು ನಿರುತ್ತರ ಮನೆಗಳಲ್ಲಿ ಸೇರುವ ಕುಟುಂಬ ಕೂಟಗಳು, ಇಷ್ಟದ ಅಡುಗೆಯ ಸುತ್ತಲಿನ ಮಾತುಕತೆ ಹಾಗೂ ಕುವೆಂಪುತಾಯಿ ಮತ್ತು ಒಡಹುಟ್ಟವರ ಒಡನಾಟಗಳು ಆಗಾಗ ಇಲ್ಲಿ ಪುನರ್ವರ್ತಿಸುತ್ತವೆ.

    ಇಷ್ಟಕ್ಕನುಗುಣವಾಗಿ ಜೀವಿಸುವ ತೇಜಸ್ವಿಯವರು ಒಂದಷ್ಟು ಆರೋಗ್ಯ ಏರುಪೇರುಗಳನ್ನು ಸಹ ಕಂಡು ಸುಧಾರಿಸಿಕೊಂಡರು. ಒಡನಾಟ-ಕ್ರಿಯಾಶೀಲತೆಯು ಮತ್ತೆ ಮರುಕಳಿಸುವಂತಾಗಲು ಮೊಮ್ಮಕ್ಕಳು ಜೊತೆಯಾಗುತ್ತಾರೆ. ತನ್ನನ್ನು ಏನೆಂದುಕೊಳ್ಳುತ್ತಾರೋ ಎಂಬ ಯಾವ ಅಂಜಿಕೆಯೂ ಇವರಿಗಿದ್ದಿಲ್ಲ. ಅವತ್ತಿನ ಪ್ರಧಾನಿ ಮನೆಗೆ ಬರುವುದನ್ನು ಬೇಡ ಅಂತ ಹೇಳಿದಾಗಲೂ ಮತ್ತು ಅವರನ್ನರಸಿ ಬಂದ ಅಷ್ಟು ಪ್ರಶಸ್ತಿಗಳನ್ನು ಸ್ವೀಕರಿಸದೆ ಇದ್ದಾಗಲೂ ಅವರು ಅವರಂತೆಯೇ ಇದ್ದಿದ್ದು ಅವರ ಸ್ವಂತಿಕೆಗೆ ಹಿಡಿದ ಕನ್ನಡಿ. ಇದ್ದ ನಿಯಮಿತ ವ್ಯಾಪ್ತಿಯಿಂದ ಬಹು ವಿಷಯವನ್ನು ಮುಟ್ಟಿದ ತೇಜಸ್ವಿಯವರ ಇಂದಿನ ಅನುಪಸ್ಥಿತಿ ಈಗ ಬಹುವಾಗಿ ಕಾಡದೆ ಇರದು.