Tuesday, May 18, 2021

ಇದ್ದರೆಷ್ಟು! ಬಿದ್ದರೆಷ್ಟು!

ಸಂದೀಪ್ ಎಸ್ ರಾವಣೀಕರ್

                                             


    

    ಕೋವಿಡ್-19 ರಿಂದಾಗಿ ಶ್ರೀಸಾಮಾನ್ಯನ ಬದುಕು ಇಂದಿನ ಆಧುನಿಕ ಯುಗದಲ್ಲೂ ಅತ್ಯಂತ ಶೋಚನೀಯ ಸ್ಥಿತಿಗೆ ತಲುಪಿರುವುದು ದುರಂತವೇ ಸರಿ. ಭಾರತದಲ್ಲಿ ಆರೋಗ್ಯ ವಿಷಯವು ಹಲವು ದಶಕಗಳಿಂದಲೂ ನಿರ್ಲಕ್ಷಿಸಲ್ಪಟ್ಟರುವುದರಿಂದ, ಇಂದು ನಿಕೃಷ್ಟ ದಾರುಣ ಸ್ಥಿತಿಗೆ ತಲುಪುವಂತಾಗಿದೆ. ನಮ್ಮನ್ನಾಳುವವರ ದೂರದೃಷ್ಟಿಯಿಲ್ಲದ ನೀತಿ-ನಿಯಮಗಳು ಹಾಗೂ ಸರ್ಕಾರದ ಭಾಗವಾಗಿದ್ದು, ಜನಪರವಾದ ಆಡಳಿತ ನಡೆಸಲಾಗದ ಅದೆಷ್ಟೋ ಅಧಿಕಾರಿಗಳ ಆಡಳಿತ ವೈಫಲ್ಯವು, ಇಂದಿನ ಆರೋಗ್ಯ ತುರ್ತು ಪರಿಸ್ಥಿತಿಗೆ ಕಾರಣವಾಗಿದೆ ಎಂದರೆ ತಪ್ಪಾಗಲಾರದು.

          ಅಂಕೆಗೂ ಸಿಗದಷ್ಟು ಸ್ಥಿತಿಗೆ ತಲುಪುತ್ತಿರುವ ಕೊರೋನಾದ ಹೊತ್ತಲ್ಲಿ, ಇದ್ದು ಇಲ್ಲದಂತಿರುವ…

·         so called ರಾಜಕಾರಣಿಗಳೇ! ತಮ್ಮ ಸರ್ಕಾರದ ಅವಧಿಯನ್ನು ಮಾತ್ರ ಉಳಿಸಿಕೊಳ್ಳಲು ತೋರುವ ನಿಮ್ಮ ಆತುರ, ವ್ಯವಹಾರ ಹಾಗೂ ಎಂ ಎಲ್ , ಸಚಿವ ಮತ್ತು ನಿಗಮ-ಮಂಡಳಿಗಳಿಗೆ ಆಯ್ಕೆಯಾಗುವಲ್ಲಿನ ನಿಮ್ಮ ಗಮನ, ಖಾತೆ ಸಿಕ್ಕಿಲ್ಲ - ಖಾತೆ ಸಿಕ್ಕಿಲ್ಲ ಎಂತೆಲ್ಲಾ ಬಡಬಡಿಸಿ ಅಲ್ಲೋಲ ಕಲ್ಲೋಲ ಸೃಷ್ಟಿಸಿ, ಸರ್ಕಾರವನ್ನೇ ಬೀಳಿಸುವ ನಿಮ್ಮ ಪವರ್ ಈಗ ಜನರ ಅಸಹಾಯಕತೆಯ ಮೇಲಿಲ್ಲವೇಕೆ? ಉತ್ತರಿಸಿ. 

·         ಅಧಿಕಾರದಲ್ಲಿದ್ದಾಗ ದಿನಪೂರ್ತಿ ಕಾಣಸಿಗುವ ಮಾಜಿಗಳೇ! ಅಶಾಶ್ವತವಾಗಿರುವ ಅಧಿಕಾರ ಪಡೆಯುವುದಾದರೂ ಹೇಗೆ ? ಎಂಬುದನ್ನು ಲೆಕ್ಕ ಹಾಕುವ ಬದಲು, ಇಂತಹ ತುರ್ತುಪರಿಸ್ಥಿತಿ ನಿವಾರಣೆಗೆ ನಿಮ್ಮ ಕೊಡುಗೆಯೇನು? ಹೇಳಿ. 

·         ಜಾತಿ - ಧರ್ಮವನ್ನು ಮುನ್ನೆಲೆಗೆ ತಂದು ಸಾವು-ನೋವುಗಳ ಮೇಲೆ, ಬೇಳೆ ಬೇಯಿಸಿಕೊಳ್ಳಲು ಟೊಂಕಕಟ್ಟಿ ನಿಂತಿರುವ ಪ್ರೀತಿಯ ಸಹವಾಸಿಗಳೇ! ಕರೋನ ವೈರಸ್ ಜಾತಿ ಮತ್ತು ಧರ್ಮ ಯಾವುದು? ದಯಮಾಡಿ ಹುಡುಕಿಕೊಡಿ.

·         ವ್ಯಕ್ತಿ ಆರಾಧನೆಯ ವ್ಯಸನಿಗಳಾಗಿರುವ ಪ್ರಿಯ ಬಂಧುಗಳೇ! ನಿಮ್ಮ ದ್ವೇಷಕಾರುವ ಅಸಂವಿಧಾನಿಕವಾದ ನಿಮ್ಮ ಸಾಮಾಜಿಕ ಮಾಧ್ಯಮದ ಪೋಸ್ಟ್ ನಿಂದ ಅದೆಷ್ಟು ಕೋರೋನಾದ ಸಾವು - ನೋವನ್ನು ತಡೆಯಲಾಗಿದೆ? ಲೆಕ್ಕಕೊಡಿ.

·         ಕೇವಲ ನಕರಾತ್ಮಕ ವಿಷಯಗಳನ್ನೇ ವಿಜೃಂಭಿಸುವ, ಹಲವರ ವಕ್ತಾರರಂತೆ ವರ್ತಿಸುವ ಮಾಧ್ಯಮಗಳೇ! ನಿಮ್ಮ ಅದ್ಯಾವ ಕಾರ್ಯಕ್ರಮವು ಜನರಲ್ಲಿ ಧನಾತ್ಮಕ ಭಾವನೆ ಮೂಡಿಸಿದೆ ಹೇಳಿ. ಜನರಲ್ಲಿ ಭಯ, ಆತಂಕ, ಕೋಮುಭಾವನೇ ಹೆಚ್ಚಿಸುವುದೇ ನಿಮ್ಮ ಧ್ಯೇಯವೇ? ತಿಳಿಸಿಬಿಡಿ.

·         ಜನರ ಭಯವನ್ನೇ ಬಂಡವಾಳವಾಗಿಸಿಕೊಂಡು ಇಲ್ಲದ್ದನ್ನೆಲ್ಲಾ ಸೃಷ್ಟಿಸುವ ದೇವಮಾನವರೇ! ಅದೆಲ್ಲಿ ಅವಿತಿರುವಿರಿ? ಅದ್ಯಾವ ಪೂಜೆ-ಪುನಸ್ಕಾರ, ವ್ರತ-ಭಜನೆಗಳು ಕೊರೋನ ಓಡಿಸುತ್ತವೆ? ಈಗಲಾದರೂ ಹೇಳಿಕೊಡಿ.

·         ಸರ್ವಜನರ ಜೀವ ಪರಿಸರವನ್ನು ಬಂಡವಾಳದಿಂದ ಹಾಳು ಮಾಡಿ, ಲಾಭಪಡೆಯುವ ಕಾರ್ಪೊರೇಟ್ ಕುಳಗಳೇ! ನಿಮ್ಮಲ್ಲಿ ಅದೆಷ್ಟು ಜನ ಸಾಮಾಜಿಕ ಮತ್ತು ಪರಿಸರ ಜೀವನವ ವ್ಯಾಲ್ಯೂ ಮಾಡಿದ್ದೀರಿ? ಹೇಳಿ.

·         ಶಿಳ್ಳೆ - ಕೇಕೆಗಳ ಗುಂಗಲ್ಲೆ ಬಿದ್ದಿರುವ ಸೆಲೆಬ್ರಿಟಿಗಳೇ! ಕೊರೋನ, ನಿಮ್ಮ ಅದೆಷ್ಟೋ ಅಭಿಮಾನಿಗಳ ಉಸಿರು ನಿಲ್ಲಿಸಿರುವುದರ ಬಗೆಗೆ ಏನಾದರೂ ಅರಿವಿದೆಯೇ? ವಿಚಾರಿಸಿರಿ.

·         ಆರೋಗ್ಯ ತುರ್ತುಪರಿಸ್ಥಿತಿಯಲ್ಲಿ ಭ್ರಷ್ಟಾಚಾರ, ಅಸಡ್ಡೆ, ಉಡಾಫೆಯಲ್ಲೆ ನಿರತರಾಗಿರುವ ವಿರುದ್ಧ ಮೌನ ತಾಳಿರುವ ದೇಶ ಬಾಂಧವರೇ! ನಿಮ್ಮ ತಿಳುವಳಿಕೆಗೆ ಇನ್ನೆಷ್ಟು ಪ್ರಾಣ ಬಲಿಯಾಗಬೇಕು? ಹೇಳಿ.

          ಪ್ರಶ್ನೆಗಳ ಉತ್ತರದ ನಿರೀಕ್ಷೆಯಲ್ಲಿಲ್ಲ,  ಅದು ಬೇಕಾಗೂ ಇಲ್ಲ. ಆದರೆ, ಇದೇ ಇಂದಿನ ನಮ್ಮ ದೇಶದ ವಾಸ್ತವ. ಪ್ರಸ್ತುತ ಭಾರತದ ಅಸಹಾಯಕ ಅನಾಥ ಪರಿಸ್ಥಿತಿಗೆ, ಈಗಲಾದರೂ ಸ್ಪಂದಿಸುವವರು ಬೇಕಾಗಿದ್ದಾರೆ. ಎಲ್ಲರನ್ನೂ ಸಲಹುತ್ತೇವೆ ಎನ್ನುವ ಹುಸಿ ಭ್ರಮೆಯನ್ನು ಮೂಡಿಸಿ, ವೈರಸ್ ನಂತೆಯೇ ಕಾಣಲು ಸಿಗದ ಅದೆಷ್ಟೋ ಈ ತರಹದ ಮನುಷ್ಯ ಕ್ರಿಮಿಗಳು ಇದ್ದರೆಷ್ಟು! ಬಿದ್ದರೆಷ್ಟು!

Tuesday, May 11, 2021

ಕೊರೋನಾ - ಅಂದಿನಿಂದ ಇಂದಿನವರೆಗೆ

 ಸಂದೀಪ್ ಎಸ್ ರಾವಣೀಕರ್


        

         ಅಂದು 2020 ಮಾರ್ಚ್ 24, ಕೊರೋನಾ  ಕಾರಣಕ್ಕೆ ಲಾಕ್ಡೌನ್ ನ್ನು ಮೊದಲ ಬಾರಿಗೆ ಇಡೀ ದೇಶದಾದ್ಯಂತ ಜಾರಿಗೊಳಿಸಲಾಯಿತು. ಯಾವ ಅವಶ್ಯ ಕ್ರಮಗಳನ್ನು ಮಾಡಿಕೊಳ್ಳದೆ ಹೇರಿದ ಕ್ರಮವೂ ಶ್ರೀಸಾಮಾನ್ಯರನ್ನು ಹಿಂಡಿ ಹಿಪ್ಪೆ ಮಾಡಿದ್ದಂತು ಸುಳ್ಳಲ್ಲ. ಸಂಪೂರ್ಣ ಸ್ತಬ್ಧವಾದ ಇಡೀ ಭಾರತ ಮನೆಯಲ್ಲೇ ಇರಿ, ಮಾಸ್ಕ್ ಧರಿಸಿ, ಕೈಯಿಂದ ಮುಖವನ್ನು ಮುಟ್ಟಬೇಡಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ (ಇದನ್ನು ದೈಹಿಕ ಅಂತರ ಎನ್ನುವುದೇ ಸೂಕ್ತ) ಎನ್ನುವುದನ್ನು ಒಂದು ಬೃಹತ್ ಸಾಮೂಹಿಕ ಕಾರ್ಯಕ್ರಮದಂತೆ ಜಾರಿಗೆ ತರಲಾಯಿತು. ಏನಿದು ಕರೋನ ವೈರಸ್ ? ಎಂದು ಅರ್ಥ ಮಾಡಿಕೊಳ್ಳುವಷ್ಟರಲ್ಲಿ, ಒಂದೆರಡು ತಿಂಗಳು ಕಳೆದೇ ಹೋಯಿತು. ಇದರ ಬಗೆಗೆ ಒಬ್ಬೊಬ್ಬರು ಒಂದೊಂದು ಥಿಯರಿ ಹೇಳಲು ಶುರುವಿಟ್ಟರು. ಮಹಾಮಾರಿ, ಭಯಾನಕ, ಅಟ್ಟಹಾಸ, ರುದ್ರಾವತಾರ, ಕಲಿಯುಗದ ಅಂತ್ಯ ಎಂದೆಲ್ಲಾ ನ್ಯೂಸ್ ಚಾನಲ್ಗಳು ಬೊಬ್ಬೆಯಿಟ್ಟವು. ಅಂತೂ ಜನರನ್ನು ಭಯಗೊಳಿಸಿ ಮೂಲೆಯಲ್ಲಿರುವಂತೆ ಮಾಡಲಾಯಿತು. ಹೌದು, ಸರ್ಕಾರದ ಒಂದಷ್ಟು ಲಾಕ್ಡೌನ್ ನಂತಹ ಕಾರ್ಯಕ್ರಮಗಳು ಅವಶ್ಯವಾಗಿದ್ದವು. ಆದರೆ, ಜಾರಿಗೊಳಿಸಿದ ರೀತಿಯಂತೂ, ದೇಶದಲ್ಲಿ ಶ್ರೀಸಾಮಾನ್ಯರನ್ನು ಸರ್ಕಾರಗಳು ಮತ್ತು ಉಳ್ಳವರು ಕ್ಯಾರೆ ಎನ್ನುವುದಿಲ್ಲ ಎಂಬುದನ್ನು ಸಾಬೀತು ಮಾಡಿದವು. ಅದಕ್ಕೆ ಸಾಕ್ಷಿಯೆಂಬಂತೆ ಭಾರತ ಇಬ್ಭಾಗವಾಗಿ ಪಾಕಿಸ್ತಾನ ಸೃಷ್ಟಿಯಾದಾಗ ಗುಳೆ ಹೊರಟ ಜನರಂತೆ, ಬದುಕು ಕಟ್ಟಿಕೊಳ್ಳಲು ಪಟ್ಟಣ ಸೇರಿದ ಲಕ್ಷಾಂತರ ಜನರು ತಮ್ಮ ಊರುಗಳಿಗೆ ಹೋಗಲು ಯಾವ ಸಾರಿಗೆ ಸಂಪರ್ಕವಿಲ್ಲದೇ, ಕಾಲ್ನಡಿಗೆಯಲ್ಲೇ ನೂರಾರು ಕಿಲೋಮೀಟರ್ ನಡೆದೆ ಸಾಗಿದ್ದರು.

   ಅಂತೂ ಒಂದು ಹಂತದವರೆಗೆ ಅಂದರೆ, ಅಕ್ಟೋಬರ್ ತಿಂಗಳ ನಂತರ ಕೊರೋನಾ ಅಲೆಯು ಭಾರತದಲ್ಲಿ ಕಡಿಮೆಯಾಗತೊಡಗಿತು. ಸರ್ಕಾರದ ನಿಯಮಗಳು ಸಡಿಲಗೊಂಡವು. ಜನರು ಎಂದಿನಂತೆ ತಮ್ಮ ಕಾರ್ಯಗಳಿಗೆ ಒಗ್ಗಿಕೊಂಡರೂ ಸಹ ಮಾಸ್ಕ್ ಧರಿಸುವುದು ಮತ್ತು ಸ್ಯಾನಿಟೈಸರ್ ಬಳಕೆಯನ್ನು ಮುಂದುವರಿಸಲಾಯಿತು. ಹಂತದಲ್ಲಿಯೇ ದೇಶದಾದ್ಯಂತ ಹಲವು ಕಾರ್ಯಕ್ರಮಗಳು ಶುರುವಾದವು. ಕೊರೋನ ಸಂಪೂರ್ಣ ಮಾಯವಾಯಿತು ಎಂಬಂತೆಯೇ ಜರುಗಿದ ರಾಜಕೀಯ-ಧಾರ್ಮಿಕ ಸಮಾವೇಶಗಳು, ಸಭೆ-ಸಮಾರಂಭಗಳು, ಜನರ ನಿರ್ಲಕ್ಷತನ ಮುಂದೆ ದೊಡ್ಡ ಅಪಾಯವನ್ನೇ ಬರಮಾಡಿಕೊಂಡಿತು. ಅದರ ಪ್ರತಿಫಲವೇ 2021 ಏಪ್ರಿಲ್ ತಿಂಗಳಿನಿಂದ ಶುರುವಾದ ಕೊರೋನಾ ಎರಡನೇ ಅಲೆ. ಮಾರಣಾಂತಿಕವಾದ ಬಾರಿಯ ಕೊರೋನ ಉಸಿರನ್ನು ಖರೀದಿಸಿ ಉಸಿರಾಡುವಂತೆ ಮಾಡುತ್ತಿದೆ. ಆಮ್ಲಜನಕದ ಅಭಾವ ಸೃಷ್ಟಿಯಾಗಿ, ದಿನದಿಂದ ದಿನಕ್ಕೆ ಸೋಂಕಿತರು ಮತ್ತು ಸಾವಿನ ನಂಬರ್ ಗಳು ಏರುತ್ತಲೇ ಇರುವುದು ಮಾತ್ರ ದಂಗುಬಡಿಸುತ್ತಿದೆ.

        ಇಲ್ಲಿ ರೋಗದ ಲಕ್ಷಣವು ಸಾಮಾನ್ಯ ಲಕ್ಷಣದೊಂದಿಗೆ ಕಾಣಿಸಿಕೊಂಡಿದ್ದು ಮಾತ್ರ ಎಲ್ಲರಿಗೂ ತಿಳಿಯಿತು. ಆದರೆ ಇದಕಿದ್ದ ಮದ್ದು ಮಾತ್ರ ಮತ್ತದೇ ಸಾಮಾನ್ಯ ಔಷಧಿಗಳು. ಇದು ಬಿಟ್ಟರೆ ದೈಹಿಕ ಅಂತರ, ಮಾಸ್ಕ್ ಮತ್ತು ಸ್ಯಾನಿಟೈಸರ್ ಬಳಸುವುದು ಸಾಂಕ್ರಾಮಿಕವನ್ನು ತಡೆಗಟ್ಟಲು ಇದ್ದ ಮಾರ್ಗ. ಮುಂದೆ, ಕೊರೋನಾ ತೀವ್ರತೆಯನ್ನು ಸ್ವಲ್ಪ ಮಟ್ಟಿಗಾದರೂ ನಿಯಂತ್ರಿಸಲು, ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬೇಕೆಂಬ ನಿರ್ಧಾರಕ್ಕೆ ಬಂದ ಪ್ರತಿಯೊಂದು ರಾಷ್ಟ್ರವು, ತಮ್ಮದೇ ಲ್ಯಾಬೋರೇಟರಿಗಳಲ್ಲಿ ಜಾಗತಿಕ ಆರೋಗ್ಯ ಬಿಕ್ಕಟ್ಟು ಸೃಷ್ಟಿಕರ್ತ ಕೊರೋನಾದ ವಿರುದ್ಧ ಲಸಿಕೆ ಕಂಡುಹಿಡಿಯಲು ಶುರುವಿಟ್ಟರು. ಇಲ್ಲಿಯವರೆಗೂ ಇದಕ್ಕೆ ಸೂಕ್ತವಾದ ಮತ್ತು ನೇರವಾದ ಮದ್ದು ಸಿಕ್ಕಿಲ್ಲ. ಆದರೆ ರೋಗವನ್ನು ತಡೆದುಕೊಳ್ಳುವ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ನಾನಾ ರೀತಿಯ ಔಷಧಿಗಳನ್ನು ಹಲವು ರಾಷ್ಟ್ರಗಳಲ್ಲಿ ತಯಾರಿಸಲಾಯಿತು ಅವುಗಳೆಂದರೆ:

(1) ಭಾರತದ COVAXIN, COVISHIELD.

(2) ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯ ಮತ್ತು ಸ್ವೀಡಿಶ್ ಕಂಪನಿ ತಯಾರಿಸಿದ oxford - AstraZeneca COVID-19 Vaccine.

(3) ಜರ್ಮನಿ ಮತ್ತು ಅಮೆರಿಕ ಕಂಡುಹಿಡಿದ Comirnaty ಎಂದು ಕರೆಯಲಾಗುವ Pfizer - BioNTech COVID - 19 Vaccine.

(4) ರಷ್ಯಾ ದೇಶದ Sputnik V, EpiVVacCorona, Sputnik light ಮತ್ತು CoviVac.

(5) ಅಮೇರಿಕಾದ moderna COVID - 19 Vaccine ಮತ್ತು Janssen COVID - 19.

(6) ಚೀನಾ ಮೂಲದ Sinopharm BBIBP - CorV, CoronaVac, Convidecia, RBD - Dimer ಮತ್ತು Sinopharm - WIBP.

(7) ಕಜಕಸ್ತಾನದ QazCovid-in  ಔಷಧಿಗಳು ಮುಖ್ಯವಾದವು.

      ಅಂತೂ, ಇಮ್ಯೂನಿಟಿಯನ್ನು ಹೆಚ್ಚಿಸುವ ನಿರ್ಧಾರಕ್ಕೆ ಬಂದ ಪ್ರತಿಯೊಂದು ರಾಷ್ಟ್ರವೂ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾದವು. ಇದೇ ದಾರಿಯಲ್ಲಿ ಭಾರತವು ಸಹಾ ತಯಾರಿ ನಡೆಸಿತು. ಅಷ್ಟಕ್ಕೂ, ಭಾರತೀಯರಿಗೆ ರೋಗನಿರೋಧಕ ಶಕ್ತಿಯ ಅವಶ್ಯಕತೆ ಎಷ್ಟಿದೆಯೆಂದರೇ! ಇದಕ್ಕೆ ಕಾರಣ, ಭಾರತೀಯರು ಆಧುನಿಕ ಜೀವನಶೈಲಿಯ ಆರೋಗ್ಯ ವಿಚಾರದಲ್ಲಿ ಗಳಿಸಿದ್ದಕ್ಕಿಂತ ಕಳೆದುಕೊಂಡಿರುವುದೆ ಹೆಚ್ಚು ಎಂಬ GOQii India fit 2020 ವರದಿ. ವರದಿಯ  ಪ್ರಕಾರವಾಗಿ 38% ಭಾರತೀಯರು ಮಾತ್ರ ಆರೋಗ್ಯವಾಗಿದ್ದು, ಶೇಕಡ 62 ಜನರು ಹೆಚ್ಚಿನ ಅಪಾಯ ಅಥವಾ ಹೆಚ್ಚಿನ ಅಪಾಯ ಮೌಲ್ಯಮಾಪನದ ಗಡಿರೇಖೆಯಲ್ಲಿದ್ದಾರೆ. ಇವರಲ್ಲಿ ಪುರುಷರಿಗಿಂತ, ಮಹಿಳೆಯರು ಅತಿ ಹೆಚ್ಚು ಅನಾರೋಗ್ಯದಿಂದ ಕೂಡಿದ್ದು, ಶೇ. 71 ಮಹಿಳೆಯರು ಆರೋಗ್ಯ ಅಪಾಯದ ಮೌಲ್ಯಮಾಪನ ವಿಭಾಗದಲ್ಲಿದ್ದಾರೆ. ಇದೇ ವರದಿಯ ಪ್ರಕಾರ ಡಯಾಬಿಟಿಸ್ ಶೇ.7.1 ರಿಂದ ಶೇ.12 ರವರೆಗೆ ಏರಿಕೆಯಾಗಿದ್ದು, 13.5% ಭಾರತೀಯರು ಕೊಲೆಸ್ಟ್ರಾಲ್ ಸಮಸ್ಯೆಯಲ್ಲಿದ್ದಾರೆ. 2019 ರಲ್ಲಿ ಥೈರಾಯಿಡ್ ಸಮಸ್ಯೆಯು ಶೇಕಡಾ 6.8 ರಿಂದ 10.7 ಹೆಚ್ಚಾಗಿದೆ. ಹಾಗೆಯೇ ಶೇ.13.4 ಮಂದಿ ಭಾರತೀಯರು ಹೆಚ್ಚಿನ ರಕ್ತದೊತ್ತಡದಿಂದ ಬಳಲುತ್ತಿದ್ದಾರೆಂದು ತಿಳಿಸಿದೆ. ವರದಿಯ ಮತ್ತೊಂದು ಅಂಶವೆಂದರೆ, ಶೇಕಡ 20.8 ರಷ್ಟು ಭಾರತೀಯರು ಕಡಿಮೆ ರೋಗನಿರೋಧಕ ಶಕ್ತಿಯನ್ನು ಹೊಂದಿದ್ದು, ಶೇಕಡ 27ರಷ್ಟು ಜನ ಆಮ್ಲತೆ (Acidity) ಮತ್ತು ಅಜೀರ್ಣ (Indigestion) ಸಮಸ್ಯೆಯಲ್ಲಿದ್ದಾರೆ ಹಾಗೂ 30 ವರ್ಷ ಮೀರಿದವರಲ್ಲಿ ಶೇಕಡ 22.5 ರಷ್ಟು ಜನರು ಸಾಮಾನ್ಯ ನೋವಿನ ಕಾರಣಗಳಿಂದಾಗಿ ಬಳಲುತ್ತಿದ್ದಾರಂತೆ. ಮೊದಲೇ ಸುಮಾರು 140 ಕೋಟಿ ಜನಸಂಖ್ಯೆಯ ಬೃಹತ್ ಭಾರತೀಯರು ಹಲವು ಬಗೆಯ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದು, ಕೊರೋನಾ ಮತ್ತಷ್ಟು ಆರೋಗ್ಯ ಸಮಸ್ಯೆಯನ್ನು ಸೃಷ್ಟಿಸಿದೆ. ಅಷ್ಟಕ್ಕೂ ಬೃಹತ್ ಜನಸಂಖ್ಯೆಗೆ ಸದ್ಯದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಹೇಗೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಏಕೆಂದರೆ, 140 ಕೋಟಿ ಜನಸಂಖ್ಯೆ ಇರುವ ಭಾರತದಲ್ಲಿ, ಜನವರಿ 2021 ರಿಂದ ದಿನಾಂಕ 8-5-2021 ವರೆಗೆ ಮೊದಲನೇ ಲಸಿಕೆಯನ್ನು ದೇಶದಾದ್ಯಂತ ಸುಮಾರು 13,33,33,401 ಜನರಿಗೆ ನೀಡಲಾಗಿದ್ದು, ಇದು ಒಟ್ಟು ದೇಶದ ಕೇವಲ 14% ಅಷ್ಟೇ ಆಗುತ್ತದೆ. ಇನ್ನು ಎರಡನೇ ಹಂತದ ಲಸಿಕೆಯನ್ನು ಪಡೆದವರ ಸಂಖ್ಯೆ 3,40,95,221 (3.6%) ಅಷ್ಟೆ. ಇನ್ನುಳಿದ ಬೃಹತ್ ಜನಸಂಖ್ಯೆಯನ್ನು ಲಾಕ್ಡೌನ್ ನಂತಹ ಇಂದಿನ ಪರಿಸ್ಥಿತಿಯಲ್ಲಿ ತಲುಪುವುದಾದರೂ ಹೇಗೆ?

 

ಹಾಗಾದರೆ ಕೊರೋನಾ ವಿಷಯದಲ್ಲಿ ಎಡವಿದ್ದೆಲ್ಲಿ?

      ಬೃಹತ್ ಜನಸಂಖ್ಯೆಯ ಭಾರತ ಆರೋಗ್ಯ ವಿಚಾರದಲ್ಲಿ ಮೊದಲೇ ಒಂದಷ್ಟು ಸಮಸ್ಯೆಯಿಂದ ಬಳಲುತ್ತಿದ್ದರು ಸಹ ಕೊರೋನಾ ವಿಚಾರದಲ್ಲಿ ಇಷ್ಟೊಂದು ಸಾವು-ನೋವು ಅನುಭವಿಸುತ್ತಿರುವುದೇಕೆ?  ಸರ್ಕಾರ, ಆಡಳಿತ ಯಂತ್ರ ಹಾಗೂ ಜನರಾದಿಯಾಗಿ ಇಡೀ ಭಾರತ ಕೊರೋನಾ ನಿಯಂತ್ರಣದಲ್ಲಿ ಎಡವಿದ್ದೆಲ್ಲಿ? ಗಮನಿಸಿ, ಸೆಪ್ಟೆಂಬರ್ 2020 ವೇಳೆಯಲ್ಲಿ ಭಾರತದಲ್ಲಿ ದಿನಕ್ಕೆ ಸರಾಸರಿ 93,000 ಪ್ರಕರಣಗಳು ವರದಿಯಾಗುತ್ತಿತ್ತು. ಕ್ರಮೇಣ ಕಡಿಮೆಯಾದ ಸೋಂಕು ಫೆಬ್ರವರಿ 2021 ಮಧ್ಯದಲ್ಲಿ ದಿನಕ್ಕೆ ಸರಾಸರಿ 11,000 ಪ್ರಕರಣಗಳಷ್ಟೇ ವರದಿಯಾಗಿದ್ದವು. ಹಂತದಲ್ಲಿ ಸಾವಿನ ಪ್ರಮಾಣವೂ ಸಹ ಕಡಿಮೆಯೇ ಇದ್ದಿತು. ಆದರೆ

1. ಕೊರೋನಾ ಮೊದಲನೆ ಅಲೆಯ ನಂತರ ಸರ್ಕಾರಗಳು ಮತ್ತು ಜನರು ನಿರ್ಲಕ್ಷ್ಯ ವಹಿಸಿದರು. ಕಾನೂನು ರೂಪಿಸಲಿಕ್ಕಾಗಿ, ಪಾಲಿಸಲಿಕ್ಕಲ್ಲ ಎಂಬಂತೆ ವರ್ತಿಸಲಾಯಿತು.

2. ಕೊರೋನಾ ಸಂಬಂಧಿತ ನೀತಿ-ನಿಯಮಗಳು ಕೇವಲ ಕಾಗದದ ರೂಪದಲ್ಲಷ್ಟೆ ಇದ್ದವು. ಯಾವುದು ಕಾರ್ಯರೂಪಕ್ಕೆ ಬರಲಿಲ್ಲ. ಜವಾಬ್ದಾರಿ ಸ್ಥಾನದಲ್ಲಿರುವ ಯಾರೊಬ್ಬರೂ, ತಾವೇ ರೂಪಿಸಿದ ನಿಯಮಗಳನ್ನು ಪಾಲಿಸಲಿಲ್ಲವೆಂಬುದು ವಿಪರ್ಯಾಸವೇ ಸರಿ.

3. ಎರಡನೇ ಅಲೆಯ ಬಗ್ಗೆ ತಜ್ಞರು ಎಚ್ಚರಿಸಿದ್ದರೂ, ಬೃಹತ್ ಜನಸಂಖ್ಯೆಯನ್ನು ಮೊದಲೇ ಸಜ್ಜುಗೊಳಿಸುವಂತಹ ಯಾವುದೇ ಅಗತ್ಯ ಕ್ರಮವನ್ನು ಸರ್ಕಾರಗಳು ಅನುಸರಿಸಲಿಲ್ಲ. ಉದಾಹರಣೆಗೆ, ಅವಶ್ಯವಾಗಿರುವ ವ್ಯಾಕ್ಸಿನ್ ಅನ್ನು ನೀಡದಿರುವುದು ಹಾಗೂ ಆಕ್ಸಿಜನ್ ಕೊರತೆ ಸಮಸ್ಯೆಯನ್ನು ಬಗೆಹರಿಸದೆ ಇರುವುದು.

4. ಇದೇ ಸಂದರ್ಭದಲ್ಲಿ ಅಂದರೆ, ಫೆಬ್ರವರಿ ಅಂತ್ಯದ ವೇಳೆಗೆ 5 ರಾಜ್ಯಗಳ ಚುನಾವಣೆಯನ್ನು ಘೋಷಿಸಲಾಯಿತು. ಸುಮಾರು 824 ಸ್ಥಾನಗಳಿಗೆ 18.6 ಕೋಟಿ ಮತದಾರರು ಭಾಗವಹಿಸುವಂತಹ ಬೃಹತ್ ಚುನಾವಣೆಯು ಮಾರ್ಚ್ 27 ರಿಂದ ಒಂದು ತಿಂಗಳು ನಡೆಸಲು ಚುನಾವಣಾ ಆಯೋಗ ನಿರ್ಧರಿಸಿತು.

5. ಮಾರ್ಚ್ ನಿಂದ ನಡೆದ ಚುನಾವಣಾ ಪ್ರಚಾರಗಳಲ್ಲಿ ಎಲ್ಲಾ ಪಕ್ಷದವರು ಸಾವಿರ-ಲಕ್ಷಾಂತರ ಜನರನ್ನು ಸೇರಿಸಿ ಮಾಡಿದ ಭಾಷಣಗಳು, 500 ಜನರ ಮೇಲೆ ಗುಂಪು ಸೇರಬಾರದೆಂಬ ನಿಯಮಕ್ಕೆ ತಿಲಾಂಜಲಿ ಇಟ್ಟಂತಾಯಿತು.

6. ಇದೇ ಮಾರ್ಚ್ ಮಧ್ಯದಲ್ಲಿ ಗುಜರಾತಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡು ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸಲು ಸುಮಾರು 1,30,000ಕ್ಕೂ ಹೆಚ್ಚು ಜನರಿಗೆ ಕ್ರಿಕೆಟ್ ಮಂಡಳಿ ಅವಕಾಶ ನೀಡಿತ್ತು.

 7. ಹಾಗೆಯೇ ಮಾರ್ಚ್ ತಿಂಗಳ 11 ರಿಂದ ನಡೆದ ಕುಂಭಮೇಳದ ಪುಣ್ಯಸ್ಥಾನ ನೆಪದಲ್ಲಿ ಸುಮಾರು 9 ಮಿಲಿಯನ್ ಮಂದಿ ಭಕ್ತರು ಯಾವುದೇ ಆರೋಗ್ಯ ರಕ್ಷಣೆ ಇಲ್ಲದೇ ಭಾಗವಹಿಸಿದ್ದರು.

8. ಕೇಂದ್ರ ಸರ್ಕಾರದ ಕೃಷಿ ಬಿಲ್ ವಿರೋಧಿಸಿ ನಡೆದ ರೈತರ ಪ್ರತಿಭಟನೆಯನ್ನು ಸಹ, ಸರ್ಕಾರವು ಅಷ್ಟಾಗಿ ಪರಿಗಣಿಸಲಿಲ್ಲ. ಅದೇ ಸಂದರ್ಭದಲ್ಲಿ ಗಲಭೆಗಳು ಸಹ ನಡೆದ ವರದಿಯಾಗಿತ್ತು.

9. ಕರ್ನಾಟಕದ ವಿಚಾರದಲ್ಲಿ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸಾವಿರಾರು ಸಾರಿಗೆ ನೌಕರರು, ರೈತರು, ಕಾರ್ಮಿಕರು ಬೃಹತ್ ಪ್ರತಿಭಟನೆ ನಡೆಸಿದ ಉದಾರಣೆಗಳಿವೆ.

      ಮೇಲಿನ ಎಲ್ಲಾ ಅಂಶಗಳು ಕೇವಲ ಜರುಗಬೇಕಾದ ವಿಷಯಗಳಾಗಿರದೆ, ಎರಡನೇ ಅಲೆಯು ದಿನಕ್ಕೆ 3.5 - 4 ಲಕ್ಷದಷ್ಟು ಪ್ರಕರಣಗಳೊಂದಿಗೆ ಮತ್ತು 3500-4500 ದಷ್ಟು ಪ್ರಾಣಹಾನಿಯಾಗುವಷ್ಟು ವೇಗವಾಗಿ ಹರಡಲು ಕಾರಣವಾಗಿದೆ ಎಂದರೆ ಅತಿಶಯೋಕ್ತಿಯಾಗಲಾರದು.

     ಆದರೆ, ಇದೇ ಸಮಯದಲ್ಲಿ ಭಾರತ ಹೊರತುಪಡಿಸಿದ ಮಿಕ್ಕೆಲ್ಲ ದೇಶಗಳಲ್ಲಿ ಒಂದು ಮಟ್ಟಿಗೆ ಕೊರೋನಾವನ್ನು ನಿಯಂತ್ರಿಸಲಾಗಿದೆ. ಖಂಡಗಳ ಆಧಾರದ ಮೇಲೆ ಗಮನಿಸುವುದಾದರೆ, ಇಡೀ ಯೂರೋಪ್ ನಲ್ಲಿ ಒಂದು ದಿನಕ್ಕೆ 1 ಲಕ್ಷದವರೆಗಿನ ಪ್ರಕರಣಗಳ ವರದಿಯೊಂದಿಗೆ, ಸಾವಿನ ಪ್ರಕರಣಗಳು 2,000 ದಿಂದ 2,300 ಆಸುಪಾಸಿನಲ್ಲಿವೆ. ಅಮೇರಿಕಾ ಪ್ರತಿನಿಧಿಸುವ ಉತ್ತರ ಅಮೆರಿಕಾದಲ್ಲಿ 50,000 - 60,000 ಪ್ರಕರಣಗಳೊಂದಿಗೆ, ಸುಮಾರು 1,300 ರಷ್ಟು ಸಾವು ಸಂಭವಿಸುತ್ತಿದೆ. ಇನ್ನು ಬ್ರೆಜಿಲ್ ಇರುವ ದಕ್ಷಿಣ ಅಮೆರಿಕಾದಲ್ಲಿ 1,20,000 ದಿನದ ಪ್ರಕರಣಗಳಾಗಿದ್ದರೆ, 3500 ಸಾವು ವರದಿಯಾಗುತ್ತಿವೆ. ವಿಚಾರದಲ್ಲಿ ಆಫ್ರಿಕಾ ಖಂಡದಲ್ಲಿ  8,000-9,000 ಸಾವಿರ ಪ್ರಕರಣ ವರದಿಯಾಗುತ್ತಿದ್ದರೇ, ದಿನಂಪ್ರತಿ ಸುಮಾರು 300 ಸಾವು ಕಾಣುತ್ತಿದೆ. ಇನ್ನು ಆಸ್ಟ್ರೇಲಿಯಾ ಖಂಡವು ಅತಿ ಕಡಿಮೆ, ಅಂದರೆ ಯಾವುದೇ ಸಾವಿನ ಪ್ರಕರಣಗಳಿಲ್ಲದೆ ಕೇವಲ 15 ರಿಂದ 20 ಪ್ರಕರಣಗಳು ಮಾತ್ರ ದಾಖಲಾಗುತ್ತಿದೆ. ಉಳಿದಂತೆ, ಏಷ್ಯಾ ಖಂಡ ಜಗತ್ತಿನ ಕರೋನಾ ಹಾಟ್ ಸ್ಪಾಟ್ ಆಗಿದ್ದು, ದಿನವೊಂದಕ್ಕೆ ಸುಮಾರು 5 ಲಕ್ಷದಷ್ಟು ಪ್ರಕರಣವನ್ನು ಹಾಗೂ ಸುಮಾರು 5000-6000 ಸಾವಿನ ವರದಿಯನ್ನು ದಾಖಲಿಸುತ್ತಿದೆ. ಅತ್ಯಂತ ದುಃಖ ಮತ್ತು ಆತಂಕದ ಸಂಗತಿಯೆಂದರೇ, ಏಷ್ಯಾದ ಒಟ್ಟು ಪ್ರಕರಣದಲ್ಲಿ ಭಾರತದ ಪಾಲು ಶೇಕಡ 90 ರಷ್ಟಿದೆ. ಕರೋನಾ ವನ್ನು ಗಂಭೀರವಾಗಿ ಪರಿಗಣಿಸಿರುವ ಹೊರ ದೇಶಗಳು, ತಮ್ಮ ಜನರ ಮುನ್ನೆಚ್ಚರಿಕೆಗಾಗಿ ಎಲ್ಲಾ ರೀತಿಯ ಭದ್ರತಾ ಕ್ರಮಗಳನ್ನು ಪಾಲಿಸಿದ್ದಾರೆ. ಶೇಕಡ 69  ರಷ್ಟು ಜನರಿಗೆ ಲಸಿಕೆ ತಲುಪಿಸಿರುವ ಇಸ್ರೇಲ್ ಮಾಸ್ಕ್ ಫ್ರೀ ದೇಶವಾಗಿದೆ. ಚೀನಾದ ಬೀಜಿಂಗ್ ಪ್ರದೇಶಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿ ಇಲ್ಲವೆಂಬುದು ಇತ್ತೀಚಿನ ವರದಿಯಾಗಿದೆ. ಕೊರೋನಾದ ಮೊದಲ ಅಲೆಯಲ್ಲಿ ಅಪಾರ ಸಾವು-ನೋವು ಕಂಡಿದ್ದ ಇಟಲಿ, ಬ್ರೆಜಿಲ್, ಫ್ರಾನ್ಸ್, ಅಮೇರಿಕಾ ಅಂತಹ ಅನೇಕ ದೇಶಗಳು ಇಂದು ಕೊರೊನಾದಿಂದ ಸ್ವಲ್ಪ ಮಟ್ಟಿಗಾದರೂ ಚೇತರಿಸಿಕೊಂಡಿವೆ.

 

  ಕೊರೋನಾ ನಿಯಂತ್ರಣ ಭಾರತ ಕೈಗೊಂಡ ಕ್ರಮಗಳೇನು ?

      ಒಂದು ಒಕ್ಕೂಟ ಸರ್ಕಾರ ಮತ್ತು 28 ರಾಜ್ಯ ಸರ್ಕಾರಗಳು ಹಾಗೂ 8 ಕೇಂದ್ರಾಡಳಿತ ಪ್ರದೇಶದ ಆಡಳಿತ ವ್ಯವಸ್ಥೆ ಹೊಂದಿರುವ ಭಾರತವು ತನ್ನದೇ ಆದ ಒಂದಷ್ಟು ಕೊರೊನಾ ನಿಯಂತ್ರಣ ಕಾರ್ಯಕ್ರಮಗಳನ್ನು ರೂಪಿಸಿದ್ದು, ಅದಕ್ಕಾಗಿ ಕೋಟ್ಯಂತರ ಹಣ ಮೀಸಲಿಡಲಿಟ್ಟಿದೆ. ಅದರ ವಿವರ ಕೆಳಕಂಡಂತಿದೆ.

* ಒಕ್ಕೂಟ ಕೇಂದ್ರ ಸರ್ಕಾರವು 2021-22 ತನ್ನ 34.8 ಲಕ್ಷ ಕೋಟಿಯ ಒಟ್ಟು ಬಜೆಟ್ನಲ್ಲಿ ಸುಮಾರು 71,729 ಕೋಟಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ನೀಡಿದ್ದು ಇದು ಕಳೆದ ಬಜೆಟ್ ಗಿಂತ ಶೇಕಡಾ 11 ರಷ್ಟು ಹೆಚ್ಚಾಗಿದೆ.

* ಇದೆ ಬಜೆಟ್ ನಲ್ಲಿ ಹೊಸದಾಗಿ ಸುಮಾರು 35,000 ಕೋಟಿಯನ್ನು COVID-19 ಲಸಿಕೆಗೆ ಮೀಸಲಿಡಲಾಗಿದೆ.

* ಕೊರೋನಾ ಬಂದ ನಂತರ ಮಾರ್ಚ್ 27, 2020 ರಂದು PM CARES ನ್ನು ಜಾರಿಗೆ ತರಲಾಯಿತು. ಟೈಮ್ಸ್ ಆಫ್ ಇಂಡಿಯಾದ ಮೇ 19, 2020 ವರದಿಯಂತೆ, PM CARES ನಿಧಿಗೆ ಬಂದ ಒಟ್ಟು ಮೊತ್ತ ಸುಮಾರು $1.4 ಬಿಲಿಯನ್ (10,000 ಕೋಟಿ). ಇದು RTI ವ್ಯಾಪ್ತಿಗೆ ಬರುವುದಿಲ್ಲವಾದ್ದರಿಂದ ಇತ್ತೀಚಿನ ಒಟ್ಟು ಮೊತ್ತದ ಅಂಕಿಅಂಶಗಳು ದೊರೆತಿಲ್ಲ.

* ದೇಶದ 28 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಮಂಡಿಸುವ ಬಜೆಟ್ ನಲ್ಲೂ ಸಹ  ಕೋವಿಡ್ ಗಾಗಿ ಪ್ರತ್ಯೇಕ ಹಣ ಮೀಸಲಿರಿಸಿದ್ದರು. ಉದಾಹರಣೆಗೆ, ಕೇರಳ ಸರ್ಕಾರ ಸುಮಾರು 20,000 ಕೋಟಿ ರೂಗಳ ಪ್ಯಾಕೇಜ್ ಘೋಷಿಸಿದ್ದರು. ಹಾಗೆ ಕರ್ನಾಟಕದಲ್ಲೂ ಸಹ ಕಳೆದ ವರ್ಷ ಮುಖ್ಯಮಂತ್ರಿ ಕೋವಿಡ್ - 19 ಪರಿಹಾರ ನಿಧಿಗೆ ಸುಮಾರು 267.72 ಕೋಟಿಯಷ್ಟು ಹಣ ಹರಿದು ಬಂದಿತ್ತು.

* ವರ್ಷ ಸುಮಾರು 2,46,207 ಕೋಟಿ ಬಜೆಟ್ ನಲ್ಲಿ ಕರ್ನಾಟಕವು, ಆರೋಗ್ಯ ಮತ್ತು ಕುಟುಂಬ ಇಲಾಖೆಗೆ ಸುಮಾರು 12,235 ಕೋಟಿಯನ್ನು ಮೀಸಲಿರಿಸಿದೆ.

* ಇದರೊಟ್ಟಿಗೆ ಹಲವು ವ್ಯಕ್ತಿಗಳು, ಸಂಘ-ಸಂಸ್ಥೆಗಳು, ವಿದೇಶಿ ಕಂಪನಿಗಳು, ನೀಡಿದ ಸಹಾಯ - ದೇಣಿಗೆಗಳು ಸಾವಿರಾರು ಕೋಟಿಯಷ್ಟಾಗಿದೆ.

           ಒಟ್ಟಿನಲ್ಲಿ, ಇಷ್ಟೆಲ್ಲಾ ಹಣಕಾಸಿನ ಸಹಾಯಗಳು ಕೇವಲ ಒಂದು ರೋಗದಿಂದ ಮುಕ್ತವಾಗುವುದಕ್ಕಾಗಿ ಮಾತ್ರವೇ ಆಗಿದೆ. ಅಷ್ಟಾಗಿಯೂ ತಲುಪಬೇಕಾದ ಲಸಿಕೆ ಮತ್ತು  ರಕ್ಷಣಾ ವ್ಯವಸ್ಥೆಗಳು ಅರ್ಹರಿಗೆ ತಲುಪಲು ಏನಾದರೂ ಕಾರಣಗಳಿರಬಹುದೇ ? ಎಂದು ನೋಡಿದರೆ,

      ಭಾರತದ ವಿದೇಶಾಂಗ ಸಚಿವಾಲಯದ ಪ್ರಕಾರ ಏಪ್ರಿಲ್ 22 ರವರೆಗೆ ಭಾರತವು 94 ದೇಶಗಳಿಗೆ ಸುಮಾರು 66 ಮಿಲಿಯನ್ ಲಸಿಕೆಗಳನ್ನು ರಫ್ತು ಮಾಡಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಭಾರತದಲ್ಲಿ ಸುಮಾರು 94 ವಯಸ್ಕರಿದ್ದು, ಎರಡು ಹಂತದ ಲಸಿಕೆಯನ್ನು ನೀಡಲು ಒಟ್ಟು 188 ಕೋಟಿಯಷ್ಟು ಲಸಿಕೆಗಳ ಅಗತ್ಯವಿದೆ. ಪ್ರಸ್ತುತ ಭಾರತದಲ್ಲಿ ದಿನಕ್ಕೆ 2.2 ಮಿಲಿಯನ್ ಡೋಸ್ ದರದಲ್ಲಿ ಲಸಿಕೆ ನೀಡಲಾಗುತ್ತಿದ್ದು, ಇದು ಹೀಗೆ ಮುಂದುವರಿದರೆ 2021 ಅಂತ್ಯದ ವೇಳೆಗೆ ಲಸಿಕೆ ಅಭಿಯಾನವು ಭಾರತದ ಜನಸಂಖ್ಯೆಯ ಶೇಕಡಾ 30 ರಷ್ಟನ್ನು ಮಾತ್ರ ಒಳಗೊಳ್ಳುತ್ತದೆ. ಇನ್ನು 70% ಲಸಿಕೆ ಪಡೆಯಬಹುದಾದ ಅರ್ಹರನ್ನು ಲಸಿಕೆ ಕಾರ್ಯಕ್ಕೆ ಒಳಪಡಿಸುವುದಾದರೂ ಹೇಗೆ ? ಕನಿಷ್ಠಪಕ್ಷ, 2021 ಅಂತ್ಯದ ವೇಳೆಗಾದರೂ ಎಲ್ಲರಿಗೂ ಲಸಿಕೆ ನೀಡುವ ಕೆಲಸ ಮಾಡಿದರೂ ಸಹ, ದಿನಕ್ಕೆ ಸುಮಾರು 5 ಮಿಲಿಯನ್ ಅಂದರೆ, 50 ಲಕ್ಷದಷ್ಟು ಜನರಿಗೆ ಲಸಿಕೆ ನೀಡಲು ಸುಮಾರು 160 ದಿನಗಳಷ್ಟು ಸಮಯ ಬೇಕಾಗುತ್ತದೆ. ಆದರೇ, ಭಾರತದಲ್ಲಿ ಪ್ರಸ್ತುತ ಪ್ರತಿ ತಿಂಗಳು 60-70 ಮಿಲಿಯನ್ನಷ್ಟು ಲಸಿಕೆ ಉತ್ಪಾದಿಸಲಾಗುತ್ತಿದ್ದು, ಪ್ರತಿದಿನದ ಉತ್ಪಾದನೆ ಸುಮಾರು 23-24 ಲಕ್ಷದಷ್ಟು ಆಗುತ್ತದೆ ಅಷ್ಟೇ. ಅದಾಗಿಯೂ ದಿನಂಪ್ರತಿ ಉತ್ಪಾದಿಸಲಾದ ಅಷ್ಟು ಲಸಿಕೆಯನ್ನು ಜನರಿಗೆ ನೀಡುತ್ತಾ ಬಂದರೂ ಸಹ, ಉಳಿದ (94 ಕೋಟಿಯಲ್ಲಿ ಈಗಾಗಲೇ 14 ಕೋಟಿ ಜನರು ಲಸಿಕೆ ಪಡೆದಿದ್ದಾರೆ) 80 ಕೋಟಿ ಜನರಿಗೆ ಲಸಿಕೆ ನೀಡಲು ಸುಮಾರು 330 ದಿನಗಳೇ ಬೇಕಾಗಬಹುದು.

 

ಅಷ್ಟಕ್ಕೂ ಕೋವಿಡ್ ಲಸಿಕೆಯ ಮಹತ್ವವೇನು ?

        ಕೋವಿಡ್ ಲಸಿಕೆಯು ಕರೋನ ವೈರಸ್ ನಂತಹ ಸಾಂಕ್ರಾಮಿಕ ರೋಗಕ್ಕೆ ಇರುವ ಸಿದ್ಧ ಔಷಧವಲ್ಲ. ಬದಲಾಗಿ ಕರೋನ ವೈರಸ್ ವಿರುದ್ಧ ಹೋರಾಡಲು ಮತ್ತು ಅದರ ತೀವ್ರತೆಯನ್ನು ತಡೆಯಲು ಕೊಡಲಾಗುವ ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಲಸಿಕೆ ಯಾಗಿದೆ. ಇತ್ತೀಚಿನ ವರದಿಗಳ ಪ್ರಕಾರ, ಲಸಿಕೆ ಪಡೆದ ವ್ಯಕ್ತಿಗಳು ಕೊರೋನಾ ಪೀಡಿತರಾಗಿರುವುದು ಬಹಳ ಕಡಿಮೆ. ಭಾರತದಲ್ಲಿ ಕೊಡಲಾಗುವ COVAXIN ಮೊದಲ ಮತ್ತು ಎರಡನೇ ಹಂತದ ಲಸಿಕೆಯನ್ನು ಪಡೆದ 1,10,93,614 ಜನರಲ್ಲಿ 4,903 ಮಂದಿ ಅಂದರೇ, 0.04% ಮಾತ್ರ ಸೋಂಕಿತರಾಗಿದ್ದಾರೆ. ಹಾಗೆಯೇ COVISHIELD ಎರಡು ಹಂತದ ಲಸಿಕೆ ಪಡೆದ 11,60,35,499 ಜನರಲ್ಲಿ ಕೇವಲ 22,159 ಜನರು ಅಂದರೇ, 0.03% ವ್ಯಕ್ತಿಗಳು ಮಾತ್ರ ಸೋಂಕಿತರಾಗಿದ್ದಾರೆ. ಆದರೆ, ಇಲ್ಲಿಯತನಕ 45 ವರ್ಷ ತುಂಬಿದ ಜನರಿಗೆ ಮಾತ್ರ ಲಸಿಕೆ ನೀಡಲಾಗುತ್ತಿದ್ದು ಅದನ್ನು ಸಹಾ ಪರಿಪೂರ್ಣವಾಗಿ ನೀಡಲಾಗಿಲ್ಲ. ಇನ್ನು ಮೇ 1 ರಿಂದ, 18 ರಿಂದ 44 ವರ್ಷದವರಿಗೂ ಲಸಿಕೆ ನೀಡಲಾಗುವುದು ಎಂದ ಸರ್ಕಾರಗಳು, ವಿಚಾರದಲ್ಲಿ ಸೋತಿದ್ದು, ಲಸಿಕೆಯ ಅಭಾವವಿದೆ ಎಂಬ ನಿರ್ಲಕ್ಷ್ಯತನದ ಬಾಲಿಶ ಉತ್ತರವನ್ನಷ್ಟೇ ನೀಡುತ್ತಿದ್ದಾರೆ.

       ಎರಡನೇ ಅಲೆಯ ಬಗ್ಗೆ ತಜ್ಞರು ಸಾಕಷ್ಟು ಬಾರಿ ಎಚ್ಚರಿಸಿದರೂ ಸಹಾ, ನಿರ್ಲಕ್ಷ್ಯವಹಿಸಿದ ಅದಕ್ಷ ರಾಜಕಾರಣಿಗಳು ಮತ್ತು ಆಡಳಿತಗಾರರೇ ಇದಕ್ಕೆ ನೇರ ಕಾರಣರಾಗಿದ್ದಾರೆ. ಹಾಗೆಯೇ ಜನರು ಸಹ ಯಾವುದೇ ಮುಂಜಾಗ್ರತೆಯನ್ನು ವಹಿಸದೆ ಇದ್ದುದು, ಸಮಸ್ಯೆ ಮತ್ತಷ್ಟು ದೊಡ್ಡದಾಗಲು ಕಾರಣವಾಯಿತು. ಇನ್ನಾದರೂ ಆಳುವ ಸರ್ಕಾರಗಳು ತಮ್ಮ ಒಣ ಪ್ರತಿಷ್ಠೆ ಮತ್ತು ಶೂನ್ಯ ಸಾಧನೆಯ ಜಾಹಿರಾತನ್ನು ಬಿಟ್ಟು, ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸಬೇಕಿದೆ. ಅವಶ್ಯವಿರುವ ಕೋವಿಡ್ ಲಸಿಕೆ ಮತ್ತು ಇಂದಿನ ಅತ್ಯವಶ್ಯಕವಾದ ಆಕ್ಸಿಜನ್ ಪೂರೈಕೆಯನ್ನು ಅತ್ಯಂತ ಜರೂರಿಂದ ಪೂರೈಸಿ ಸಮಸ್ತ ಭಾರತೀಯರನ್ನು ಕಾಪಾಡಬೇಕಿದೆ. ಅಂದಹಾಗೆ, ಪ್ರಪಂಚದಾದ್ಯಂತ ನಾನಾ ಬಗೆಯ ಕೋವಿಡ್-19 ಔಷಧಿಗಳು ಚಾಲ್ತಿಯಲ್ಲಿರುವಾಗ, ನಮ್ಮದೇ ಔಷಧಿಗಳ ಮೇಲೆ ಅವಲಂಬಿತರಾಗುವ ಜೊತೆಗೆ, ವಿದೇಶಿ ಔಷಧಿಗಳನ್ನು ಆಮದು ಮಾಡಿಕೊಳ್ಳುವ ಕಡೆ ಸರ್ಕಾರಗಳು ಕ್ರಮವಹಿಸಬೇಕಿದೆ.  ಹಾಗೆಯೇ, 18 ವರ್ಷ ಮೇಲ್ಪಟ್ಟವರು ಲಸಿಕೆ ಪಡೆಯಲು ಆನ್ಲೈನ್ ಮುಖಾಂತರವಷ್ಟೇ ನೋಂದಣಿ ಮಾಡಿಸಿಕೊಳ್ಳಬೇಕೆಂಬುದನ್ನು ಪುನರ್ ಪರಿಶೀಲಿಸಬೇಕಾಗಿದೆ. ಏಕೆಂದರೆ, ಮೊಬೈಲ್, ಇಂಟರ್ನೆಟ್ ಸೌಲಭ್ಯ ಎಲ್ಲರಿಗೂ ಒಂದೇ ರೀತಿಯಲ್ಲಿ ಸಿಗುವಂತಹುದಲ್ಲ ಮತ್ತು ಅದನ್ನು ಆನ್ಲೈನ್ ಮುಖಾಂತರ ನೋಂದಣಿ ಮಾಡಿಸಿಕೊಳ್ಳುವುದು ಗ್ರಾಮೀಣ ಭಾರತದ ಮಟ್ಟಿಗೆ ತುಸು ಕಷ್ಟ ಎಂಬುದನ್ನು ನೀತಿ ರೂಪಕರು ಮರೆಯಬಾರದು.

 

[ ಲೇಖನದಲ್ಲಿ ನೀಡಲಾಗಿರುವ ಎಲ್ಲಾ ಅಂಕಿ ಅಂಶಗಳು ಆಗಿಂದಾಗ್ಗೆ ಪತ್ರಿಕೆ ಮತ್ತು ಇತರ ವರದಿಗಳಲ್ಲಿ ಬಂದ ಪ್ರಕಟಣೆಗಳಿಂದ ಆಯ್ದುಕೊಳ್ಳಲಾಗಿದೆ ]