Sunday, November 15, 2020

ಅಂತಿಮಗೊಳ್ಳದ ಅನಿವಾರ್ಯತೆಗಳು !

        ಸಂದೀಪ್ ಎಸ್ ರಾವಣೀಕರ್ ಅನಿವಾರ್ಯ ಏನು ಮಾಡಲು ಸಾಧ್ಯವಿಲ್ಲ..! ಎಂಬುದರಿಂದಲೇ ಪ್ರಾರಂಭವಾಗುವ ಅದೆಷ್ಟೋ ಮಾತುಗಳಲ್ಲಿ, ಅನಿವಾರ್ಯತೆಯು ನಮ್ಮಗಳ ಬದುಕಿನಲ್ಲಿ ಆಹ್ವಾನವಿಲ್ಲದ ಅತಿಥಿಯಂತೆ ಪ್ರವೇಶಿಸಿರುತ್ತದೆ.  ನಮ್ಮಗಳ ಆಯ್ಕೆಯೇ ಅಲ್ಲದ ಕಾರಣವಾಗಿ ಬರುವ 'ಅನಿವಾರ್ಯತೆ' ಅಪರಿಮಿತ ಆಕಾಶದಷ್ಟೇ ಅಗಲ, ಭೂಮಿಯ ಅಂತರಾಳದಷ್ಟೇ ಆಳವಿರುವ ಅಂತಿಮಗೊಳ್ಳದ ಸೃಷ್ಟಿಯಾಗಿದೆ. ಒಂದನ್ನು ಪಡೆದಾಕ್ಷಣ ಮತ್ತೊಂದರ ಬಯಕೆಯ ಕಡೆಗೆ ಓಡುವ ನಾವು ಯಾವುದರಲ್ಲೂ ಅಂತಿಮಗೊಳ್ಳುವುದಿಲ್ಲ. ಮನುಷ್ಯನ ಉಗಮದಿಂದ ಇಲ್ಲಿಯವರೆಗೂ, ಬೇರೆ ಬೇರೆ ಸಮಯ-ಸಂದರ್ಭಗಳ ಕಾರಣಗಳಿಗಾಗಿ ರೂಪುಗೊಂಡ ಅನಿವಾರ್ಯತೆಗಳು ಹಲವುಗಳ ಉಗಮಕ್ಕೆ ಕಾರಣವಾಗಿರುವುದಂತು ಸುಳ್ಳಲ್ಲ.

ಬದುಕಿನ ಕ್ರಮದಲ್ಲಿನ ಅವಶ್ಯಕಗಳನ್ನು ನಿರ್ಧರಿಸಿ, ಪಟ್ಟಿಮಾಡಿ ಪಡೆಯುತ್ತಿದ್ದ ಹಿಂದಿನ ವಸ್ತುಗಳ ಅನಿವಾರ್ಯಕ್ಕೂ, ಸೃಷ್ಟಿಯಾಗುತ್ತಿರುವ ವಸ್ತುಗಳಿಗಾಗಿಯೇ ಬದುಕಿನ ಕ್ರಮವನ್ನು ಬದಲಾಯಿಸಿಕೊಳ್ಳಬೇಕಾದ ಇಂದಿನ ಅನಿವಾರ್ಯತೆಗೂ ಹೋಲಿಸಿದಾಗ, ಅನಿವಾರ್ಯತೆ ಎಂಬುದು ಆಯಾ ಕಾಲಘಟ್ಟದ ಅನುಕೂಲ ಸಿಂಧುವಾಗಿ ಕಾಣಿಸುತ್ತದೆ. ಕೇವಲ ವಸ್ತುವಿನ ಭಾಗವಾಗಿ ಇರದ ಅನಿವಾರ್ಯತೆಯು, ಬದುಕಿನ ಪ್ರತಿ ಹೆಜ್ಜೆಯಲ್ಲೂ ಸೃಷ್ಟಿಯಾಗಿ ತನ್ನ ಕೊನೆ ಫಲಿತಾಂಶದ ಹೊರತಾಗಿಯೂ ತನ್ನದೇ ಇನ್ನೊಂದು ಅನಿವಾರ್ಯತೆಯನ್ನು ಸೃಷ್ಟಿಸದೇ ಇರಲಾರದು. ಅಂದರೇ, ಅನಿವಾರ್ಯತೆಗಳಿಗೆ ಒಳಗಾಗುವ ಪ್ರತಿಯೊಬ್ಬರೂ ತೆಗೆದುಕೊಳ್ಳುವ ನಿರ್ಧಾರಗಳು ಒಂದಲ್ಲ ಒಂದು ಕಾರಣ ಮತ್ತು ಸಂದರ್ಭಗಳಿಗೆ ಸಂಬಂಧಿಸಿದ್ದಾದರೂ ಸಹ, ಅದೇ ಕಾರಣ ಮತ್ತು ಸಂದರ್ಭಗಳು ಒಂದು ರೀತಿಯ ಅನಿವಾರ್ಯವೇ ಆಗಿರುತ್ತವೆ.

                ಯೋಚಿಸಿ-ಯೋಜಿಸಿ ಕಟ್ಟಿಕೊಳ್ಳುವ ಚೌಕಟ್ಟಿನ ಬದುಕು ಸಹ ಅನಿವಾರ್ಯ ಕಾರಣಗಳಿಂದ ಚೌಕಟ್ಟಿನಾಚೆಗೆ ತೆರೆದುಕೊಳ್ಳುತ್ತದೆ. ಜೀವಿಸುವುದರಲ್ಲಿನ ಬಯಕೆ, ಗೊಂದಲ, ಕಷ್ಟ, ಅವಮಾನ, ಅನುಮಾನ,  ದ್ವೇಷ, ಅಸೂಹೆ, ಮನಸ್ತಾಪ, ಬೇಜಾರು, ನೋವುಗಳನ್ನು ಇಟ್ಟುಕೊಂಡೆ ಇಡೀ ಜೀವನವ ಅಪರಿಪೂರ್ಣವಾಗಿಯೇ ದೂಡುವ  ಅನಿವಾರ್ಯತೆಯ ಸಂದರ್ಭಗಳಿಗೆ,  ಪರಿಹಾರವಾಗಿ ಕಾಣುವ ಸ್ಪಷ್ಟತೆ, ಹೊಂದಬಹುದಾದ ಬಯಕೆ, ಸನ್ಮಾನ, ನಂಬಿಕೆ, ಮಮತೆ, ಸುಖ, ನೆಮ್ಮದಿಗಳ ಸೃಷ್ಟಿಯ ಪರಿಪೂರ್ಣತೆಯ ಅನಿವಾರ್ಯತೆ   ಹೊತ್ತಿಗೆ ಜರೂರಿದೆ.

ವಿವಿಧ ಆಯಾಮ-ಕ್ರಮಗಳಾಚೆಗಿನ ಎಲ್ಲಾ ಸಂದರ್ಭಗಳಿಗೂ ಯಾವುದೇ ಬಗೆಯ ಉತ್ತರವಾಗಿ ನಿಲ್ಲುವ 'ಅನಿವಾರ್ಯತೆಯು' ಕೇವಲ ವಾಸ್ತವವಾಗಿಯಷ್ಟೇ ನಮ್ಮ ಮುಂದಿದೆ. ಅನಿವಾರ್ಯತೆಗೆ ಒಳಗಾಗದ ಸಂದರ್ಭ ಸೃಷ್ಟಿಯು ಕಾಲಘಟ್ಟದಲ್ಲಿ ಅನುಮಾನವೇ ಸರಿ. ಏಕೆಂದರೆ ಅನಿವಾರ್ಯ ಬದುಕಿದ್ದೀನಿ! ಅನ್ನುವುದರಿಂದ ಅನಿವಾರ್ಯವಾಗಿ ಸಾಯಲೇಬೇಕು! ಅನ್ನುವುದರಲ್ಲಿನ ಅಂತರದಲ್ಲಿ ಜರುಗಬಹುದಾದ ಹಲವು ಪರಿಸ್ಥಿತಿಗಳಿಗೆ ಮತ್ತದೇ 'ಅನಿವಾರ್ಯ' ಕಾರಣವಾಗಿರುತ್ತದಲ್ಲವೇ ? ಒಟ್ಟಿನಲ್ಲಿ, ಯಾರ ಕೊನೆಯಲ್ಲೂ ಅಂತಿಮಗೊಳ್ಳದ ಅನಿವಾರ್ಯತೆಗಳು, ಅನಿವಾರ್ಯತೆಗಳಾಗಿಯೇ ಉಳಿದುಬಿಡುತ್ತವೆ!

Wednesday, October 7, 2020

ಪ್ರೀತಿ ಮತ್ತು ನಾವು

      - ಸಂದೀಪ್ ಎಸ್ ರಾವಣೀಕರ್ಪ್ರೀತಿಯ ಒತ್ತಾಸೆಯಲ್ಲಿ ಕನಸು ಕಟ್ಟಿಕೊಳ್ಳುವ ನಾವುಗಳು, ಜೀವನದ ಪ್ರತಿಗಳಿಗೆಯನ್ನು ಪ್ರೀತಿ ಹುಟ್ಟಿದ ಮೊದಲ ಸಮಯದ ಅನುಭವದಂತೆ ಬಯಸುತ್ತಾ ಆಶಾವಾದಿಯಾಗಿರುವುದು ಸರ್ವೇಸಾಮಾನ್ಯ. ಪ್ರೀತಿಸುವ ಸಮಯದಲ್ಲಿ ಕಾಣುವ ಕೇವಲ ಪ್ರೀತಿಯನ್ನಷ್ಟೆ ಜೀವನ ಕ್ರಮವೆಂದು ಭ್ರಮಿಸುವ ನಾವುಗಳು, ಜೀವನ ಕ್ರಮದ ಹಲವು ಹಂತಗಳನ್ನು ಲೆಕ್ಕಿಸುವುದೇ ಇಲ್ಲ. ಪ್ರೀತಿಗೆ ಎಲ್ಲವನ್ನೂ ಮತ್ತು ಎಲ್ಲರನ್ನೂ ಸೋಲಿಸುವ ಶಕ್ತಿ ಇದೆ ಎಂದೇ ಭಾವಿಸುವ ನಾವುಗಳು, ಪ್ರೀತಿಯಾಚೆಗಿನ ಪ್ರತಿ ಬದುಕಿನ ಅನುಕ್ರಮಗಳನ್ನು ಅಷ್ಟೇ ಪ್ರೀತಿಯಿಂದ ನೋಡುವುದಿಲ್ಲ ಹಾಗೂ ಅನುಸರಿಸುವುದಿಲ್ಲ ಅನ್ನೋದು ಅಷ್ಟೇ ಸತ್ಯ ಕೂಡ. ಪ್ರೀತಿಯಲ್ಲಿ ಪ್ರೀತಿಯಷ್ಟೇ ಇರಬೇಕೆನ್ನುವುದು ಸರ್ವವಿಧಿತ, ಆದರೆ ಭಿನ್ನ ಆಲೋಚನಾ ಕ್ರಮಗಳನ್ನು, ಪ್ರತಿಯೊಬ್ಬರ ಅಭಿರುಚಿ-ಅಭಿಪ್ರಾಯಗಳನ್ನು ಗೌರವಿಸುವ, ಇಷ್ಟಕ್ಕೇ ಬಾರದ ಎಷ್ಟೋ ಒಳ್ಳೆ ವಿಷಯಗಳನ್ನು ಅಷ್ಟೇ ಪ್ರೀತಿಯಿಂದ ಕಾಣುವ ಮತ್ತು ಅನುಸರಿಸುವ ಕಾರ್ಯಕ್ಕೆ ಮಾತ್ರ ಬೆನ್ನು ತೋರಿಸುವುದು ಸಾಧುವಲ್ಲ. ಏಕೆಂದರೆ ಪ್ರೀತಿಯಲ್ಲಿ  ದ್ವೇಷಕ್ಕೆ, ಗರ್ವಕ್ಕೆ, ಅಸ್ವಾರಸ್ಯಕ್ಕೆ(ego) ಜಾಗವಿಲ್ಲವಲ್ಲ!

ಅಹಂಮಿಕೆಯ ಆಲೋಚನೆಗಳಿಗೆ ಬುದ್ದಿ ಕೊಡುವ ಪ್ರತಿಯೊಬ್ಬರೂ ನಾನು-ನನ್ನ ಎಂಬ ವೈಯಕ್ತಿಕತೆಯನ್ನು ಪ್ರದರ್ಶಿಸುವ ಬದಲಿಗೆ  ನಾವು-ನಮ್ಮ ಎಂಬ ಒಟ್ಟಾರೆ ಒಳಗೊಳ್ಳುವಿಕೆಯನ್ನು ಅನುಸರಿಸಬೇಕಾಗಿರುವುದು ಹೊತ್ತಿನ ಜರೂರು. ಪ್ರತಿಯೊಂದು ಬದುಕಿನ ಜೀವನವನ್ನು ಜೀವಂತಿಕೆಯಾಗಿಡುವ ಅದಮ್ಯಶಕ್ತಿ ಪ್ರೀತಿಗಿದೆ, ಆದರೆ ಅದು ಕೇವಲ ವೈಯಕ್ತಿಕತೆಷ್ಟೆ ಮೀಸಲಾಗಬಾರದು. ವೈಯಕ್ತಿಕ ಬದುಕಿನಾಚೆಗಿನ ಅದೆಷ್ಟೋ ಜೀವನಾನುಭವಗಳಿಗೆ ಪ್ರೀತಿಯ ಕೈಚಾಚಿದರಷ್ಟೆ ಪ್ರೀತಿ ತುಂಬಿದ ಬದುಕಿಗೆ ಅರ್ಥ ಬರುವುದು. ಮದುವೆಯಾದ ಮೂರು, ನಾಲ್ಕು ವರ್ಷಗಳು ತುಂಬುವ ಹೊತ್ತಿಗೆ ನೈಜ ಪ್ರಾಯೋಗಿಕ(practical) ಬದುಕಿನ ನಿಜ ದರ್ಶನವಾಗಿ, ಜವಾಬ್ದಾರಿಗಳ ಹಿಂದೆ ಬಿದ್ದು ಮೊದಲ ಪ್ರೀತಿಯ ಅನುಭವವನ್ನೇ ಮರೆಯುವ ಹಂತಕ್ಕೆ ಬಂದಾಗ ವೈಯಕ್ತಿಕ ಬದುಕಿನ ಮೇಲಿನ ಅಲ್ಪ ನಿರಾಸಕ್ತಿಯು ಕೂಡ ದೊಡ್ಡ ವ್ಯತ್ಯಾಸವನ್ನೇ ತಂದೊಡ್ಡಬಲ್ಲದು. ಬದುಕಿನ ಓಟದಲ್ಲಿ ವೈಯಕ್ತಿಕ ಬದುಕಿನ ಬಗೆಗಿನ ಜವಾಬ್ದಾರಿಯಲ್ಲಿ ಪ್ರೀತಿ ಕಾಣಿಸದ ಹಾಗೆ ಬದುಕುತ್ತಿರುವ ಅದೆಷ್ಟೋ ಸಾವಿರಾರು ಉದಾಹರಣೆಗಳು ನಮ್ಮ ಮುಂದಿವೆ. ಇದೇ ಸಂದರ್ಭದಲ್ಲಿ ಅರ್ಥೈಸಿಕೊಳ್ಳಲಾಗದ ಹಲವು ಮನಸ್ಸುಗಳು ದೂರಾಗುವ ಸಂಖ್ಯೆಗಳಿಗೇನು ಕಡಿಮೆ ಇಲ್ಲ. ಆದ್ದರಿಂದ ಬದುಕಿಗೆ ಅರ್ಥ ನೀಡುವ, ವೈಯಕ್ತಿಕ ಜೀವನದ ಸರಿ ಕ್ರಮಗಳಿಗೆ ಆಸರೆಯಾಗಿ ನಿಲ್ಲುವ, ಅಭಿರುಚಿ- ಅಭಿಪ್ರಾಯಗಳಿಗೆ ಮನ್ನಣೆ ನೀಡಬೇಕಾಗಿದೆ. ಏಕೆಂದರೆ ಇವುಗಳಷ್ಟೇ ಪ್ರೀತಿಯನ್ನು ಸದಾಕಾಲ ಜೀವಂತವಾಗಿ ಇರುವಂತೆ ನೋಡಿಕೊಳ್ಳಲು ಸಾಧ್ಯ.  ಭಿನ್ನಾಭಿಪ್ರಾಯಗಳು ಮತ್ತು ಭಿನ್ನ ಆಲೋಚನಾ ಕ್ರಮಗಳು ವೈಯಕ್ತಿಕ ಬದುಕಿನೊಟ್ಟಿಗೆ ಬಹುದೂರ ಸಾಗಲಾವು. ಏಕೆಂದರೆ ಅಲ್ಲಿ ಪ್ರೀತಿ ಮತ್ತು ಪರಸ್ಪರ ಗೌರವ ಗೌಣವಾಗಿರುತ್ತವೆ.  ಒಪ್ಪಿತವಲ್ಲದ ಬಲವಂತದ ಒಪ್ಪಿಗೆಯಿಂದ ಸಂಬಂಧಗಳು ಗಟ್ಟಿಯಾಗುವುದಿಲ್ಲ. ಅಂತೆಯೇ ಗಟ್ಟಿಗೊಳ್ಳದ ಯಾವ ಸಂಬಂಧಗಳು ದೀರ್ಘಕಾಲ ಉಳಿಯುವುದಿಲ್ಲ. ಹಾಗೆಯೇ ಕಾಂಪ್ರಮೈಸ್ ಎನ್ನುವುದು ಕಡಿಮೆ ಆಯಸ್ಸಿನ ಕ್ರಮವಾಗಿದ್ದು, ಒಂದು ಸಣ್ಣ ಮನಸ್ತಾಪ ಇದನ್ನು ಹಾಳುಗೆಡವುದರಲ್ಲಿ ಅನುಮಾನವೇ ಬೇಡ. ಕವಿ ಎಚ್.ಎಸ್ ವೆಂಕಟೇಶಮೂರ್ತಿ ಅವರ ಇಷ್ಟು ಕಾಲ ಒಟ್ಟಿಗಿದ್ದು  ಎಷ್ಟು ಬೆರೆತರು, ಅರಿತೆವೇನು ನಾವು ನಮ್ಮ ಅಂತರಾಳವ ಎಂಬ ಕವಿತೆಯ ಸಾಲುಗಳು ಸಹ ಪರಸ್ಪರರನ್ನು ಅರಿಯುವುದು ಮತ್ತು ಗೌರವಿಸಿ ಒಟ್ಟಿಗೆ ನಡೆಯುವುದನ್ನೇ ಹೇಳುತ್ತವೆ.

              ಆದ್ದರಿಂದ, ಬದುಕನ್ನು ಬಂದಂತೆ ಸ್ವೀಕರಿಸುವುದಕ್ಕಿಂತ, ಅಂದುಕೊಂಡಂತೆ ಬದಲಾಯಿಸಿಕೊಳ್ಳುವುದು ಜೀವಂತಿಕೆಯ ನಮ್ಮತನದ ಲಕ್ಷಣ. ಹಾಗೆಯೇ ಮಾರ್ಗದಲ್ಲಿ ಗಟ್ಟಿತನ ಇರಬೇಕಾಗಿರುವುದು ಸಹ ಅಷ್ಟೇ ಮುಖ್ಯ. ವೈಯಕ್ತಿಕ ಬದುಕು ಮತ್ತು ಅದರಾಚೆಗಿನ ಬೇರೆ ಬೇರೆ ಅಭಿರುಚಿ-ಆಸಕ್ತಿಯನ್ನು ಪೋಷಿಸಿ, ಸಾಮಾಜಿಕ ಜವಾಬ್ದಾರಿಯನ್ನು ಎತ್ತಿ ಹಿಡಿಯುವ ಮೂಲಕ emotions ಗೆ ಒಳಗಾಗದೆ, ನಾವು ನಾವು ಗಳಾಗಿ ಬದುಕಬೇಕಿದೆ.

Friday, May 29, 2020

ಹೀಗೊಂದು ಆಯಸ್ಸಿನ ಲೆಕ್ಕಚಾರ!


                     -ಸಂದೀಪ್ ಎಸ್ ರಾವಣೀಕರ್ಯಂತ್ರಗಳಂತೆ ಆಗಿರುವ ಬದುಕು  ಹುಟ್ಟಿನಿಂದ ಸಾಯುವ ತನಕ ಹಲವು ಮಹತ್ವಾಕಾಂಕ್ಷೆಗಳನ್ನು ಹೊತ್ತು ಸಾಗುತ್ತದೆ. ಬದುಕಿರುವಷ್ಟು ದಿವಸ ನೆಮ್ಮದಿಯಿಂದಿರಬೇಕು  ಎಂದು ಭಾವಿಸುವ ನಾವುಗಳು ಜೀವನದುದ್ದಕ್ಕೂ ಬರುವ ಹಲವು ಎಡರು-ತೊಡರುಗಳೊಂದಿಗೆ ಜೀವಿಸುವುದನ್ನು ಅಭ್ಯಾಸ ಮಾಡಿರುತ್ತೇವೆ.  ಅಂತೆಯೇ, ಸಿಗಬಹುದಾದ  ಒಂದಷ್ಟು ಕೆಲಸಗಳಿಂದ ಸುದೀರ್ಘ ಯೋಜನೆಗಳನ್ನು ರೂಪಿಸಿ,  ಕೊನೆಗಾಲಕ್ಕೂ ಹೀಗೆ ಬದುಕಿರುತ್ತೇವೆ ಎಂಬಂತೆ  ಬೀಗುತ್ತ ಭಷ್ಯತ್ತಿನ ಊಹೆಯಲ್ಲಿ ವಾಸ್ತವಿಕ ಬದುಕನ್ನು ಆದಷ್ಟು ಮರೆತಿರುತ್ತೇವೆ. ಎಪ್ಪತ್ತು ವರ್ಷಗಳಷ್ಟು ದೀರ್ಘಾಯಸ್ಸಿನ ಆಶಾಭಾವನೆ ಹೊಂದಿರುವ ನಾವುಗಳು ಅದೆಷ್ಟು  ಕ್ವಾಲಿಟಿ ದಿನಗಳನ್ನು ನಮ್ಮದಾಗಿಸಿಕೊಂಡಿದ್ದೇವೆ ಎಂದು ಯೋಚಿಸಿದಾಗ, ಸಮಯ ಕಳೆದು ಹೋಗುತ್ತಿದೆ ಎಂದೆನಿಸದೆ ಇರಲಾರದು.

 ಸ್ವಲ್ಪ ಯೋಚಿಸಿ, ನಮ್ಮಗಳ ಜೀವಿತಾವಧಿ ಸುಮಾರು ಎಪ್ಪತ್ತು ವರ್ಷಗಳು ಎಂದು ಅಂದಾಜಿಸಿದರೂ ಸಹ, ಅಷ್ಟು ವರ್ಷಗಳನ್ನು ನಾವು ನಿಜವಾಗಿಯೂ ಅಂದುಕೊಂಡಂತೆ ಬದುಕುವುದಕ್ಕೆ ಬಳಸುತ್ತಿದ್ದೇವಾ ಎಂಬ ಸಂಶಯ ಬರದೇ ಇರದು.  ಗಮನಿಸಿ  ಎಪ್ಪತ್ತು ವರ್ಷಗಳು ಅಂದರೆ 25,550  ದಿನಗಳು. ಒಂದು ದಿನಕ್ಕೆ 24 ಗಂಟೆ ಯಾದರೆ,  ನಾವೆಲ್ಲರೂ ಇದೇ 24 ಗಂಟೆಯ 25,500 ದಿನಗಳನ್ನು ಹೇಗೆ ಕಳೆಯುತ್ತಿದ್ದೇವೆ ಎಂಬುದನ್ನು ಒಂದು ಸರಳ ಗಣಿತದ ಲೆಕ್ಕಚಾರದೊಂದಿಗೆ ನೋಡೋಣ.

 ಒಬ್ಬ ವ್ಯಕ್ತಿ 24 ಗಂಟೆಯಲ್ಲಿ  ಎಂಟು ಗಂಟೆಗಳಷ್ಟು ಮಲಗಿದರೆ, 70 ವರ್ಷಗಳಲ್ಲಿ ಅಂದರೆ 25,500 ದಿನಗಳಲ್ಲಿ ಸುಮಾರು 8,517 ದಿನಗಳಷ್ಟು ಕಳೆದೇಹೋಗುತ್ತದೆ. ಅರ್ಥಾತ್ 23 ವರ್ಷಗಳಷ್ಟು ನಾವು ನಿದ್ರೆಯನ್ನೇ ಮಾಡಿರುತ್ತೇವೆ.

            ಇನ್ನು ಜಂಜಾಟದ ಬದುಕಲ್ಲಿ ಅನೇಕ ಕೆಲಸಗಳಲ್ಲಿ ಬ್ಯುಸಿಯಾಗುವ ನಾವುಗಳು, ಸಮಯ ಕಳೆಯುವ ಹಲವು ಮಾರ್ಗಗಳನ್ನು ಒಮ್ಮೆ ಗಮನಿಸಿದರೆ: ಸಾಮಾನ್ಯವಾಗಿ ನಾವು ದಿನದ 6 ಗಂಟೆಯಷ್ಟು ಕೆಲಸದ ಅಥವಾ ಶಾಲಾ-ಕಾಲೇಜುಗಳ ಒತ್ತಡದಲ್ಲೇ ಇರುತ್ತವೆ. ಹಾಗಾದರೆ 70 ವರ್ಷಗಳಲ್ಲಿ ಸುಮಾರು 6,388 ದಿನಗಳು ಅಂದರೆ 17.5 ವರ್ಷಗಳು ಇದರಲ್ಲೇ ಕಳೆದು ಹೋಗುತ್ತದೆ.

 ದಿನದ ನಿತ್ಯ ಕರ್ಮಗಳನ್ನು ಮುಗಿಸುವಷ್ಟರಲ್ಲಿ ಹಾಗೂ ಮೂರು ಹೊತ್ತಿನ ಊಟದ ಸಮಯ ಮತ್ತು ನಾವುಗಳು ರೆಡಿ ಆಗುವುದಕ್ಕೆ 2 ಗಂಟೆಯಷ್ಟು ಸಮಯ ಅನಾಯಾಸವಾಗಿ ಕಳೆದೋಗಿರುತ್ತದೆ. ಇದು ನಮ್ಮ ಜೀವಿತಾವಧಿಯ 2,129 ದಿನಗಳು ಅಂದರೆ 5.83 ವರ್ಷಗಳಷ್ಟುನ್ನು ಒಳಗೊಂಡಿದೆ.

ಗ್ಯಾಜೆಟ್ ಯುಗದಲ್ಲಿರುವ ನಾವುಗಳು, ಊಟ ಬಿಟ್ಟರೂ ಮೊಬೈಲ್ ಮತ್ತು ಟಿವಿ ಬಿಟ್ಟಿರಲಾರೆವು ಎಂಬಂತಾಗಿದೆ. ದಿನದ 24 ಗಂಟೆಯಲ್ಲಿ ಕನಿಷ್ಠ 2 ಗಂಟೆಯಷ್ಟು ಮೊಬೈಲ್ ಮತ್ತು ಟಿವಿಗೆ ಮೀಸಲಿಟ್ಟರೆ  ಮತ್ತದೇ 2,129 ದಿನಗಳು ಅಂದರೆ, 5.83 ವರ್ಷಗಳಷ್ಟು ಅದರೊಟ್ಟಿಗೆ ಹೋಗಿಬಿಡುತ್ತದೆ.

 ಸಮಾಜ ಜೀವಿಯಾಗಿ ನಾವುಗಳು ಸ್ನೇಹಿತ/ತೆಯರ ಒಟ್ಟಿಗೆ ಮತ್ತು ಕುಟುಂಬದವರೊಟ್ಟಿಗೆ ಕನಿಷ್ಠ 2 ಗಂಟೆಯನ್ನಾದರೂ ಮಾತುಕತೆಗಾಗಲಿ, ಆಟ ಆಡುವುದಕ್ಕಾಗಲಿ, ಇನ್ನಿತರ ಯಾವುದೇ ಕಾರಣಕ್ಕಾದರೂ  ಬಳಸದೆ ಇರಲಾರೆವು. ಇದು ಸಹಾ, 25,550 ದಿನಗಳ ಜೀವಿತಾವಧಿಯಲ್ಲಿ 2,129 ದಿನಗಳಷ್ಟನ್ನು  ಒಳಗೊಂಡ 5.83 ವರ್ಷಗಳನ್ನು ಮುಗಿಸಿಬಿಡುತ್ತದೆ.

            ಮೇಲಿನ ಅಂಶಗಳು ಸಾಮಾನ್ಯ ಜೀವಿಯಾಗಿರುವ ನಾವುಗಳು ಬಳಸುವ ದಿನದ ವೇಳಾಪಟ್ಟಿಯಾಗಿದ್ದು, ಕೆಲವೊಮ್ಮೆ ಒಬ್ಬರಿಂದ ಒಬ್ಬರಿಗೆ ವ್ಯತ್ಯಾಸವಾಗಬಹುದು. ಆದಾಗ್ಯೂ, ದಿನದ 24 ಗಂಟೆಯಲ್ಲಿ 20 ಗಂಟೆ ಕಳೆದೋಗುತ್ತದೆ. ಇನ್ನುಳಿದ 4 ಗಂಟೆ ಅಂದರೆ ಜೀವಿತಾವಧಿಯ 4,258 ದಿನಗಳು, ಅರ್ಥಾತ್ 11.67 ವರ್ಷಗಳಷ್ಟೇ ವಯಕ್ತಿಕವಾಗಿ ನಮಗೆ ಉಳಿದಿರುವ ಸಮಯ. ಬದುಕನ್ನು ಸುಂದರವಾಗಿರಿಸುವುದಕ್ಕೆ  ನಮಗೆ ಇರುವುದು ಇಷ್ಟೇ ಕಡಿಮೆ ಸಮಯ. ಹೀಗಿರುವಾಗ, ಇಂದಿನ ಧರ್ಮಜಾತಿಲಿಂಗಸ್ಥಳದ ಆಧಾರದ ಮೇಲೆ  ನಾವು ಆಡುತ್ತಿರುವ ಯುದ್ಧ ಜಗಳಗಳುಮನಸ್ತಾಪಗಳನ್ನು ಗಮನಿಸಿದರೆ ನಾವು ಜೀವಿಸುವುದಕ್ಕೆ ಇಲ್ಲಿದ್ದೀವಾ ಅಥವಾ ದೈಹಿಕ-ಮಾನಸಿಕ ಮನಸ್ತಾಪಗಳ ಕಿರಿಕಿರಿಯಿಂದ ಬದುಕುವುದಕ್ಕೆ ಇದ್ದೀವಾ ಎಂದೆನಿಸದಿರದು.

ವೈಯಕ್ತಿಕವಾಗಿ ಏನಾದರೂ ಸಾಧಿಸಲು, ಯೋಚಿಸಲು,  ಯೋಜಿಸಲು, ನಿರ್ವಹಿಸಲು, ಪ್ರೀತಿ ಹಂಚಲು ಮತ್ತು ಪಡೆಯಲು ಇರುವ ಕಡಿಮೆ ಸಮಯ ಸರಿಯಾಗಿ ಬಳಕೆಯಾಗಲಿ.  ನಾವು ಇರುವೆಡೆ ಪ್ರೀತಿ-ಕರುಣೆ; ಮಮತೆ-ಸಹನೆಯ ಸೌಹಾರ್ದ ಬದುಕು ನಮ್ಮದಾಗಲಿ ಎಂಬುದಷ್ಟೇ ಆಶಯ.