Tuesday, August 30, 2022

"ಅಣ್ಣನ ನೆನಪು" ಓದಿದ್ದು-ಅನ್ಸಿದ್ದು.

                                                                               ಸಂದೀಪ್ ಎಸ್ ರಾವಣೀಕರ್.

        

    ಕುವೆಂಪು ಅವರನ್ನು ಹತ್ತಿರದಿಂದ ತಿಳಿದವರೆಷ್ಟೋ, ನೋಡಿದವರೆಷ್ಟೋ, ಅರಿತುಕೊಂಡವರೆಷ್ಟೋ. ಪ್ರಾಧ್ಯಾಪಕರಾಗಿ, ಮೈಸೂರು ವಿ.ವಿ ಕುಲಪತಿಗಳಾಗಿ ಕುವೆಂಪು ಅವರು ಪರಿಚಯವಾಗುವುದಕ್ಕಿಂತ ಒಬ್ಬ ಶ್ರೇಷ್ಠ ಕವಿಯಾಗಿ, ವೈಚಾರಿಕತೆಯ ದಾರ್ಶನಿಕರಾಗಿ ಎಲ್ಲರಿಗೂ ಬಲ್ಲವರಾಗಿದ್ದಾರೆ. ಆದರೆ ಕುವೆಂಪು ಮಗನಾಗಿ ತೇಜಸ್ವಿಯವರು ತಮ್ಮ ತಂದೆಯೊಟ್ಟಿಗೆ ಕಂಡುಂಡ ಹಲವು ವಿಚಾರಗಳ ತಮ್ಮ ಅನುಭವವನ್ನು ಸಂದರ್ಭ ಸಹಿತ  "ಅಣ್ಣನ ನೆನಪು" ಪುಸ್ತಕದ ಮೂಲಕ ಪರಿಚಯಿಸಲು ಪ್ರಯತ್ನಿಸಿದ್ದಾರೆ.

        ತಮ್ಮ ಕುಟುಂಬದ ಎಷ್ಟೋ ಖಾಸಗಿ ಒಡನಾಟವನ್ನು ಹೇಳುವ ತೇಜಸ್ವಿಯವರು, ಪ್ರೌಢಾವಸ್ಥೆಗೆ ತಲುಪಿ ಕಾಲೇಜಿನ ಮಟ್ಟಕ್ಕೆ ಏರುವ ತನಕ, ವಯಸ್ಸಿನಲ್ಲಿ ಮಾಡಬಹುದಾದ ಚೇಷ್ಟೆ-ಕುಚೇಷ್ಟೇಗಳನ್ನೆಲ್ಲ ತೆರೆದಿಡುತ್ತಾರೆ. ಅಣ್ಣನ ಮೌನ, ಧ್ಯಾನ, ಓದು, ಬರಹ, ವಿಚಾರಗಳನ್ನೆಲ್ಲ ಗಮನಿಸುತ್ತಾ ಪ್ರತಿಯೊಂದನ್ನು ಚರ್ಚಿಸುತ್ತಲೇ, ತಮಗಿಷ್ಟವಾದುದನ್ನೇ ಆರಿಸಿಕೊಳ್ಳಲು ಪ್ರಯತ್ನಿಸುವ ತೇಜಸ್ವಿ, ತಮಗೆ ಪ್ರಭಾವ ಬೀರುವ ಪ್ರತಿಯೊಂದು ಸಂದರ್ಭಗಳು ಮತ್ತು ಅವುಗಳಿಗೆ ಬರುವ ಅಣ್ಣನ ಪ್ರತಿಕ್ರಿಯೆಗಳನ್ನು ಇಲ್ಲಿ ಯಥಾವತ್ತಾಗಿ ನಮೂದಿಸಿದ್ದಾರೆ.

     ತಮ್ಮ ಕಾಲಾವಧಿಯಲ್ಲಿ ಘಟಿಸಿರಬಹುದಾದ ಪ್ರತಿಯೊಂದು ಘಟನೆಗಳನ್ನು ಮತ್ತು ಅದರ ಸುತ್ತಲಿನ ಕಾರಣ-ಪರಿಣಾಮಗಳನ್ನು ಹೇಳುವಾಗ, ನಮ್ಮೆದುರೆ ಎಲ್ಲವುಗಳು ನಡೆಯುತ್ತಿವೆ ಎಂದೆನಿಸದಿರಲಾರದು. ಮೈಸೂರು ಬಲ್ಲ ಪ್ರತಿಯೊಬ್ಬರೂ ಸಹ ಎಲ್ಲಾ ಸಂದರ್ಭಗಳನ್ನು ಕಲ್ಪನಾ ಚಿತ್ರಕ್ಕೆ ಇಳಿಸಿಕೊಳ್ಳದೆ ಮುಂದಕ್ಕೆ ಓದಲಾಗುವುದಿಲ್ಲ. 70-80 ದಶಕದ ಅಂದಿನ ಗಲ್ಲಿ, ಸರ್ಕಲ್, ಪ್ರದೇಶಗಳು ಇಂದಿಗೂ ಹಾಗೆ ಹೆಸರಾಗಿರುವುದು ಇದಕ್ಕೆ ಕಾರಣ.

   ನವೋದಯ ಕನ್ನಡ ಸಾಹಿತ್ಯ ಕಾಲದ ಕುವೆಂಪುರವರು ಎದುರಿಸಿದ ಸೈದ್ಧಾಂತಿಕ ಮತ್ತು ವರ್ಗ ಸಂಘರ್ಷಗಳನ್ನು, ನವ್ಯ-ಪ್ರಗತಿಶೀಲದಂತಹ ಮುಂದುವರಿದ ಸಾಹಿತ್ಯಕ ಪ್ರಕಾರಗಳ ವಸ್ತುನಿಷ್ಠತೆಯನ್ನು ಮತ್ತು ಅವು ತಾಳಿದ ಬದ್ಧತೆಗಳನ್ನು ವಿಮರ್ಶಾತ್ಮಕವಾಗಿ ಇಲ್ಲಿ ಹೇಳಲಾಗಿದೆ. ಕಲ್ಪನಾ ಜಗತ್ತಿನ ಕವಿಯಾಗಿ ವಿಚಾರಶೀಲ ಮತ್ತು ವೈಚಾರಿಕ ವ್ಯಕ್ತಿಯಾಗಿಯೂ ಕುವೆಂಪುರವರು ತಾಳಿದ್ದ ಹಲವು ಬಹುತ್ವದ ಪರಿಕಲ್ಪನೆಗಳು ಮಾಂಸಹಾರ, ಮೌಢ್ಯ ವಿರೋಧಿ ಆಚರಣೆಗಳು, ಬೂಸ ಪ್ರಕರಣ, 70 ದಶಕದ ಹೋರಾಟ, ಚಳುವಳಿಗಳು, ಅಖಂಡ ಕರ್ನಾಟಕ, ಲೋಹಿಯರ ಪ್ರಭಾವ, ಮಂತ್ರ ಮಾಂಗಲ್ಯದಂತಹ ಹಲವು ವಿಷಯಗಳಲ್ಲಿ ಯಾರ ಮರ್ಜಿಗೂ ಒಳಗಾಗದೆ ಗಟ್ಟಿತನ ಹೊಂದಿದ್ದರು ಎಂಬುದು ಅಣ್ಣನ ಬಗೆಗಿನ ತೇಜಸ್ವಿವರ ನಿರೂಪಣೆ.

 ಅಣ್ಣನ ಪರಿಕಲ್ಪನೆಯಲ್ಲಿದ್ದ ಒಂದಷ್ಟು ವಿಷಯಗಳಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ ಪ್ರತಿಕ್ರಯಿಸುವ ತೇಜಸ್ವಿಯವರು ಮಠ, ಚಳುವಳಿ, ಆಚರಣೆಗಳ ಬಗೆಗಿನ ವಿಷಯಗಳಲ್ಲಿ ತುಸು ಖಾರವಾಗಿ ಇದ್ದುದನ್ನು ಹೇಳಿಕೊಂಡಿದ್ದಾರೆ. ತಮ್ಮ ಬರಹ ಮತ್ತು ವಿಷಯಗಳ ಪ್ರಸ್ತಾವನೆಯಲ್ಲಿ ಯಾರ ಪ್ರಭಾವ ಮತ್ತು ಮುಲಾಜಿಗೂ ಒಳಗಾಗದ ತೇಜಸ್ವಿಯವರು ಅಣ್ಣನ ಬಗೆಗಿನ ಹಲವು ಶ್ರೇಷ್ಠತೆಗಳನ್ನು ಮುಕ್ತವಾಗಿ ಶ್ಲಾಘಿಸಿದ್ದಾರೆ. ಅಂತೆಯೇ ಅಂದಿನ ಒಡನಾಡಿಗಳಾದ ಪ್ರೊಫೆಸರ್ ನಂಜುಂಡಸ್ವಾಮಿ, ರಾಮದಾಸರು, ಕಡಿದಾಳರನ್ನು ಮತ್ತು ಇನ್ನಿತರ ಸ್ನೇಹಿತರನ್ನು ನೆನಪಿಸಿಕೊಳ್ಳಲು ಮರೆತಿಲ್ಲ.

     ಬಾಲ್ಯದಿಂದ ಕೊನೆಯವರೆಗೆ ಅಣ್ಣನ ಜೊತೆಗಿನ ಅದೆಷ್ಟೋ ಇಷ್ಟದ ನೆನಪಿನ ಘಟನೆಗಳನ್ನು ಅಕ್ಷರಕ್ಕಿಳಿಸಿದ ತೇಜಸ್ವಿಯವರು, ಕುವೆಂಪುರವರನ್ನು ತಿಳಿಯಲೆತ್ನಿಸುವ ನಮ್ಮಂತವರಿಗೆ "ಅಣ್ಣನ ನೆನಪು" ಪುಸ್ತಕಗಳ ಮಧ್ಯೆ ಇರಲೇಬೇಕಾದ ಹೊತ್ತಿಗೆಯಾಗಿದೆ.