Tuesday, April 7, 2020

ಈ ಸಮಯ ಕಳೆದುಹೋಗುತ್ತಿದೆ..!

                                       - ಸಂದೀಪ್ ಎಸ್ ರಾವಣೀಕರ್            ಬ್ಯುಸಿಯಾಗಿರುವುದೇ, ಜೀವನದ ಲಕ್ಷಣವೇ ? ಈ ಪ್ರಶ್ನೆ ಯಾಂತ್ರಿಕ ಬದುಕಿನ ಸಹ-ಭಾಗವಾಗಿ ಜೀವಿಸುತ್ತಿರುವ ಪ್ರತಿಯೊಬ್ಬರಿಗೂ ಅನ್ವಯಿಸಲಿದೆ. ಆಧುನಿಕತೆಗೆ ಹೊಂದಿಕೊಳ್ಳುತ್ತಾ ಹೋದಂತೆ, ಬದುಕಿನ ಕ್ರಮಗಳು ಬಹಳ ಸುಲಭವಾಗಿದೆ ಎಂದೆನಿಸದೆ ಇರದು.  ನಮ್ಮ ಎಲ್ಲಾ ದೈನಂದಿನ ನಿತ್ಯ ಕೆಲಸಗಳಿಂದ, ಅಂತಿಮಗೊಳ್ಳುವ ನಿದ್ರೆಯ ತನಕ ಎಲ್ಲರ ಭಾಗವಾಗಿ ಈ ಹೊತ್ತಿನ ಆಧುನಿಕ ಉಪಕರಣಗಳು ಮತ್ತು ತಂತ್ರಜ್ಞಾನ ಇವೆ. ನಮ್ಮ ಕೆಲಸಗಳನ್ನು ಮಾಡಲು ನಮ್ಮೊಡನೆಯೇ ಇರುವಂತೆ ಭಾಸವಾಗುವ ಉಪಕರಣಗಳು ತಮ್ಮ ಕೆಲಸ ನಿರ್ವಹಿಸುತ್ತಿದ್ದರೂ ಸಹ, ನಮಗೆ ಮಾಡಲು ಇನ್ನೂ ಏನೋ  ಬಾಕಿ ಇದೆ ಎಂದೆನಿಸುತ್ತಿರುವುದಂತೂ ಸುಳ್ಳಲ್ಲ. ನಮ್ಮೆಲ್ಲರ ಬಹು ಭಾರವನ್ನು ಇಳಿಸಿಕೊಳ್ಳುವ ಈ ಪ್ರಕ್ರಿಯೆಯಲ್ಲಿ, ನಾವು ಎಷ್ಟು ಸಮಯ ಉಳಿಸಿದ್ದೇವೆ ? ಎಂದು ಕೇಳಿಕೊಂಡರೆ, ಉತ್ತರ ಮಾತ್ರ ನಿರುತ್ತರವಾಗಿ  ನಿಲ್ಲುತ್ತದೆ. ದಿನದ 24 ಗಂಟೆಯೂ ಸಾಲದೆಂಬಂತೆ ಬಿಂಬಿಸಿಕೊಳ್ಳುವ ನಾವು ಯಾವಾಗಲೂ ಕೇವಲ ಒತ್ತಡದಲ್ಲೇ ಇರುತ್ತೇವೆ. ಈ ಕೆಲಸ ಒತ್ತಡದ ನಡುವೆಯೂ ಸಿಗುವ, ಒಂದಷ್ಟು ಸಮಯವೂ ಸಹ ಹಾಗೆ ಕಳೆದು ಹೋಗುತ್ತದೆ ಮತ್ತು ನಾವು ಹೊರುವ ಮಣಭಾರ ದೇಹದ ವಿಶ್ರಾಂತಿಗೆ, ಬೇರೊಬ್ಬರ ಅಂತಿಮ ಅನುಮತಿಯ ಅವಶ್ಯಕತೆ ಇದೆ.

            ನಮ್ಮೆಲ್ಲರ Golden Days ಅಂದರೆ ಅದು ನಮ್ಮ ಸಣ್ಣ ವಯಸ್ಸಿನ ಎಲ್ಲಾ ತುಂಟಾಟಗಳು ಮತ್ತು ಸ್ಕೂಲ್-ಕಾಲೇಜುಗಳಲ್ಲಿ ಯಾವುದರ ಪರಿವೇ ಇಲ್ಲದಂತೆ ಕಳೆದ ದಿನಗಳು ಮಾತ್ರ. ಭವಿಷ್ಯತ್ತಿನ ಕೆಲಸದ ಹುಡುಕಾಟ ಮತ್ತು ಸಿಕ್ಕ ಸಣ್ಣಪುಟ್ಟ ಕೆಲಸಗಳಲ್ಲೇ ಹಾಗೂ ಜವಾಬ್ದಾರಿಗಳಲ್ಲೇ ನಮ್ಮನ್ನು ನಾವು ಮರೆಯುವಂತಾಗುತ್ತದೆ. ಅಲ್ಲಿಂದಾಚೆಗೆ ಎಷ್ಟೋ ಜನರ ಬದುಕಿನ ಸಂಗಾತಿಗಳಾಗಿ ಯಂತ್ರಗಳು ಮತ್ತು ತಂತ್ರಜ್ಞಾನಗಳು ಒಟ್ಟಾದರೆ, ಇನ್ನಷ್ಟು ಮಂದಿಗೆ ಸಿಕ್ಕ ಅವಕಾಶಗಳಲ್ಲಿ ಬದುಕು ನಡೆಯುತ್ತದೆ ಹಾಗೂ ಮತ್ತೊಂದಿಷ್ಟು ಜನರಿಗೆ ಸಮಯ ಕಳೆಯುವುದೇ ದೊಡ್ಡ ಕೆಲಸವಾಗುತ್ತದೆ. ಒಟ್ಟಿನಲ್ಲಿ ಅಂದುಕೊಂಡ ಬದುಕಿಗಿಂತ, ಭಿನ್ನ ರೂಪದ ಜೀವನ ನಮ್ಮ ಶೈಲಿಯಾಗಿ ಬದಲಾಗುತ್ತದೆ. ಇಲ್ಲಿ ಸಂದರ್ಭಗಳು ಬೇರೆಯಾಗಿದ್ದರೂ ಸಹ "ಈ ಸಮಯ ಕಳೆದು ಹೋಗುತ್ತಿದೆ" ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. 

            ಇಲ್ಲಿ ಜೀವನವನ್ನು ಜೀವಿಸುವುದು ಎಂದರೆ ಕೇವಲ ಜೀವಿಸುವುದಷ್ಟೇ ಆಗಿದೆ. ಆದರೆ ಜೀವಿಸುವುದರಲ್ಲಿ ಕಂಡುಕೊಳ್ಳುವ ಮಾರ್ಗಗಳು ಮಾತ್ರ ಬೇರೆಯಾಗಿರುತ್ತವೆ. ದೇಹ ಒಂದೇ ಎನಿಸಿದರೂ, ಹವ್ಯಾಸದ ಸಂದರ್ಭದಲ್ಲಿ ನಮ್ಮ ದಿನನಿತ್ಯದ ಕೆಲಸಗಳಿಗೆ ಹೋಲಿಸಿದಾಗ ಒಂದು ಭಿನ್ನ ಸ್ಥಿತಿ ನಮ್ಮ ಮುಂದೆ ಎದ್ದು ನಿಲ್ಲುತ್ತದೆ.  ಹವ್ಯಾಸವಾಗಿ ಶುರುವಾಗುವ Painting, Dancing, Singing, Writing  Speaking, Hosting, Sewing, Designing, Cooking, Cycling, Swimming, Gardening, Sports, Photography ಗಳಂತಹ, ನಾನಾ ಸ್ವರೂಪದ ಅಭಿರುಚಿಗಳು ಇಂದು ಬೇರೆ-ಬೇರೆ ಕೆಲಸದ ಒತ್ತಡದಲ್ಲಿ ಒಂದೊಂದಾಗಿ ಸಾಯುತ್ತಾ ಸಾಗುತ್ತಿದೆ. ಆ ಮೂಲಕ ಖುಷಿಗೆ ಇದ್ದ ಕಾರಣವೂ ಸಹ ನಮ್ಮಿಂದ ದೂರವಾಗುತ್ತಿದೆ.

           Dear Friends, ಸಾಮಾನ್ಯವಾಗಿ ನಮಗೆ, ಬ್ಯಾಗಿಗೆ 4 ಬಟ್ಟೆ ತುರುಕಿ ಕ್ಯಾಮರಾ ಹಿಡಿದು ಅಥವಾ ಒಂದಷ್ಟು ಪುಸ್ತಕ ಎತ್ತಿಕೊಂಡು ದೂರ ಹೊರಟು ಬಿಡಬೇಕು ಅನಿಸುವುದುಂಟು, ಬಸ್ಸಿನಲ್ಲಿ ಅಥವಾ ರೈಲಿನಲ್ಲಿ ಕಿಟಕಿ ಪಕ್ಕದ ಜಾಗ ಸಿಕ್ಕಿ ಇಷ್ಟವಾದದ್ದನ್ನು ನೋಡಲು ಅಥವಾ ಕೇಳಲು ಮನಸ್ಸು ಬಯಸುವುದುಂಟು, ಮರೀಚಿಕೆ ಮರೆಯಾಗುವವರೆಗೂ ಬಲುದೂರ ನಮ್ಮ ಇಷ್ಟದ ಸ್ಕೂಟರ್ನಲ್ಲಿ ಜಾಲಿರೈಡ್ ಹೋಗಬೇಕೆನಿಸುವುದುಂಟು, ಗಿರಿ-ತೊರೆ-ಜರಿ-ಜಲಪಾತಗಳ ನಡುವೆ ನೈಸರ್ಗಿಕ ಸಂಗೀತದೊಂದಿಗೆ ಹಾಡಬೇಕೆಂದು ಹಂಬಲಿಸುವುದುಂಟು, ಬೆಟ್ಟಗುಡ್ಡಗಳನ್ನು ಸ್ನೇಹಿತರೊಟ್ಟಿಗೆ ಹತ್ತುವ ಬಯಕೆ ಎದುರಾಗಬಹುದು, ಇಷ್ಟದ ತಿಂಡಿ ತಿನ್ನಲು - ಟೀ  ಸವಿಯಲು ನಡೆದೇ ಸಾಗುವ ಹಠವಿರಬಹುದು, ಧ್ಯಾನಿಸುವುದನ್ನೇ ಪ್ರೀತಿಸುವವರಿಗೆ ಇಷ್ಟದ ಕೇಂದ್ರಗಳಿಗೆ ಭೇಟಿ ನೀಡುವ ಆಸೆಯಿರಬಹುದು, ಸಾಹಸ ಕ್ರೀಡೆಗಳಿಗೆ ತನ್ನನ್ನು ತಾನು ಅಣಿಯಾಗಿಸಿಕೊಳ್ಳುವುದಿರಬಹುದು, ಚಂದ್ರ-ಚುಕ್ಕಿಗಳನ್ನುಷ್ಟು  ಎಣಿಸಿಬಿಡಬೇಕೆನುವಷ್ಟು ಚಲವಿರಬಹುದು, ಸಮುದ್ರದಲೆಗಳಿಗೆ ಕಾಲುಚಾಚಿ ಸೂರ್ಯಾಸ್ತವನ್ನು ಕಣ್ತುಂಬಿಕೊಳ್ಳುವ ಹಂಬಲವಿರಬಹುದು, ಇದ್ದಷ್ಟು ದಿವಸ ಪ್ರಕೃತಿಯೊಂದಿಗೆ ಜೀವಿಸಿ ಬಿಡಬೇಕೆನಿಸುವುದುಂಟು, ಮಳೆಯೊಟ್ಟಿಗೆ ಮಗುವಾಗಬೇಕು ಅನಿಸುವುದುಂಟು. ಹೀಗೆ ಅದಷ್ಟೋ ಹೆಬ್ಬಯಕೆಗಳನ್ನು ಪಟ್ಟಿ ಮಾಡಿರುತ್ತೇವೆ.  ಆದರೆ ಎದುರಾಗುವ ಕಷ್ಟಗಳಿಗೆ ಸೋಲೊಪ್ಪಿ, ನಿಜ ಜೀವನವ ಜೀವಿಸುವುದನ್ನೇ ಮರೆತುಬಿಟ್ಟಿದ್ದೇವೆ.

ಎಲ್ಲಿಯೂ ನಿಲ್ಲದಿರು 
ಮನೆಯನೆಂದು ಕಟ್ಟದಿರು 
ಕೊನೆಯನೆಂದು ಮುಟ್ಟದಿರು... ಕುವೆಂಪುರವರ ಈ ಸಾಲುಗಳು ಜೀವನಪ್ರೀತಿಯನ್ನಷ್ಟೇ ಹೇಳುತ್ತದೆ.

            ಇಂದು, ನಾನು-ನನ್ನದು ಎಂಬುದಿದ್ದರೇ, ಅದು ನಾನಾಗಿ ಅನುಭವಿಸುವ ಈ ಕ್ಷಣ ಮಾತ್ರ. ಯಾವ ಬಾಹ್ಯ ಗೋಜಿನ ಚಿಂತೆಯಿಲ್ಲದ, ಸ್ವಸ್ಥ ಸಮಾಜ ನಾವು ರೂಪಿಸಿಕೊಳ್ಳುವ ಜೀವನಶೈಲಿಯಲ್ಲಿದೆ. ಈ ಸಮಯ ಕಳೆದು ಹೋಗುತ್ತಿದೆ, ಅನ್ನಿಸಿದರೆ ತಡಮಾಡದೆ ನಮ್ಮ ಹವ್ಯಾಸ-ಬಯಕೆಗಳಿಗೆ ರೆಕ್ಕೆ ಕಟ್ಟೋಣ 😊.

10 comments:

 1. ನಿಮ್ಮ ಜೀವನ ಸುಖವಾಗಿರಲಿ ನೀವೆ ನಮಗೆ ಸ್ಪೂರ್ತಿ

  ReplyDelete
 2. ನಿಮ್ಮ ಜೀವನ ಸುಖವಾಗಿರಲಿ ನೀವೆ ನಮಗೆ ಸ್ಪೂರ್ತಿ

  ReplyDelete
 3. Sprb.....gud luck buddy....very nice article.....

  ReplyDelete
 4. Ur words always inspires me.... Luck is always to ur side keep on going

  ReplyDelete
 5. Its very nice
  ಅನುಭವದ ಸರಮಾಲೆಯ ಮೆಲಕುಹಾಕುವುದರಲ್ಲೆ ಈ ಸಮಯ ಕಳೆದು ಹೋಗುವುದು....

  ReplyDelete
 6. Super ji.... keep inspiring with your captivating words...

  ReplyDelete
 7. ಇದು ನಿಮ್ಮ ಅನುಭವದ ಮಾತೇ..???

  ReplyDelete
 8. Nice Article, let's give wings to our hobbies without delay

  ReplyDelete