Friday, April 10, 2020

ದೇಶದ ಆರೋಗ್ಯ: ಇಂದು ಮತ್ತು ಮುಂದಿನ ಸವಾಲುಗಳು


                      -      ಸಂದೀಪ್ ಎಸ್ ರಾವಣೀಕರ್ 
    



ಮಾನವ ಸಮಾಜಜೀವಿ ಅಂತ ನಾವೆಲ್ಲರೂ ಪ್ರೈಮರಿ ಸ್ಕೂಲ್ ಸಮಾಜ ವಿಜ್ಞಾನ ಪುಸ್ತಕದಲ್ಲೇ  ಓದಿದ್ದೇವೆ. ಅಂದಮೇಲೆ ಸಮಾಜದ ಎಲ್ಲಾ ಒಳಿತು-ಕೆಡುಕುಗಳ ಭಾಗವಾಗಿ ಇಂದು ನಾವಿದ್ದೇವೆ. ಸ್ವಾರ್ಥ ರಹಿತ ಸಮಾಜ ಕಟ್ಟಲು ಪ್ರಪಂಚದಾದ್ಯಂತ ಹಲವಾರು ಮೇರುವ್ಯಕ್ತಿತ್ವಗಳು ಶ್ರಮಪಟ್ಟಿದ್ದಾಗಿಯೂ, ಮಾನವನ ಆಧುನಿಕ ಈರ್ಷೆ, ಸ್ವಾರ್ಥ, ಸಣ್ಣತನಗಳಿಂದ ಎಲ್ಲರೂ ಒಟ್ಟಾಗಿ  ಅಧಃಪತನ ದಾರಿಯನ್ನು ಹಿಡಿದಿರುವುದು ಸತ್ಯಕ್ಕೆ ದೂರವಲ್ಲದ್ದು. ಇದಕ್ಕೆ ದೊಡ್ಡ ಉದಾಹರಣೆಯಾಗಿ ನಮ್ಮ ಮುಂದಿರುವುದೇ CORONA ವೈರಸ್. ಕಣ್ಣಿಗೆ ಕಾಣದ ವೈರಸ್ ಮನುಷ್ಯನ ಎಲ್ಲಾ ಅಹಂಗಳನ್ನು ನಿರ್ಧಾಕ್ಷಿಣ್ಯವಾಗಿ ಸೋಲಿಸಿ ಬಿಟ್ಟಿದೆ ಮತ್ತು ಮನುಷ್ಯ ಸೃಷ್ಟಿಯ ನಿಜಸತ್ಯವನ್ನು ತೋರಿಸಿದೆ.  ಒಂದಂತೂ ಸತ್ಯ, ತನ್ನ ವೈಜ್ಞಾನಿಕ ಜ್ಞಾನದಿಂದ ಇಂಥ ಸಾವಿರ ವೈರಸ್ಗಳನ್ನು ಹಿಮ್ಮೆಟ್ಟಿಸುವ ತಾಕತ್ತು ಮಾನವನಿಗಿದೆ. ಆದರೆ ಇಂತಹ ವೈರಸ್ಗಳು ಬಿಟ್ಟುಹೋಗುವ  ಮತ್ತು ಕಲಿಸಿಹೋಗುವ ಪಾಠ ಇಲ್ಲಿ ಅತಿ ಮುಖ್ಯವಾದದ್ದು.

 ಇಂದು, ಪ್ರಪಂಚವು ವ್ಯಕ್ತಿ ಕೇಂದ್ರಿತವಾಗಿ ಮತ್ತು ಉಳ್ಳವರ ಪರವಾದ ಧೋರಣೆಯಿಂದ ವ್ಯಾಖ್ಯಾನಿಸಲ್ಪಡುತ್ತಿದೆ. ಅದಕ್ಕೆ ಪೂರಕವಾಗಿ ಮಾಧ್ಯಮವು ಅವರ ಪರವಾದ ಕಾರ್ಯಕ್ರಮಗಳನ್ನಷ್ಟೆ ಬಿತ್ತರಿಸುತ್ತಿವೆ. ನಿರ್ಗತಿಕರ, ಕೂಲಿ ಕಾರ್ಮಿಕರ, ಬಡವರ, ಮಹಿಳೆ-ಮಕ್ಕಳ ಹಾಗೂ ತಿಂಗಳ ಸಂಬಳಕ್ಕಾಗಿ ಕಾಯುವವರ ಸಮಸ್ಯೆಗಳ ಮುಂದೆ, ಸೆಕೆಂಡು-ನಿಮಿಷಗಳ ರೂಪದಲ್ಲಿ ಹಣ ಗಳಿಸುವವರು ಮಾತ್ರ ಇಲ್ಲಿ ಮುಖ್ಯವಾಗುತ್ತಾರೆ.  ಭಾರತದ ಮಟ್ಟಿಗೆ ಹೇಳುವುದಾದರೆ, ಕೇವಲ ಬೆರಳೆಣಿಕೆಯಷ್ಟು ಜನರ ವೈಯಕ್ತಿಕ ಆದಾಯ ಮತ್ತು ಶೇರುಗಳ ನಷ್ಟದ ಬಗ್ಗೆಯಷ್ಟೇ ತಲೆಕೆಡಿಸಿಕೊಳ್ಳುವ ಮಾಧ್ಯಮಗಳು, ಸುಮಾರು 80% ಅಸಂಘಟಿತ ಕೂಲಿಕಾರ್ಮಿಕರ,  ಹಸಿವಿನಿಂದ ಸಾಯುತ್ತಿರುವ ಸಾವಿರಾರು ಜನರ, ಖಿನ್ನತೆಗೆ ಒಳಗಾಗಿ ಸಾಯುತ್ತಿರುವ ಸಾವಿರಾರು ವ್ಯಕ್ತಿಗಳ, ಅತ್ಯಾಚಾರಕ್ಕೆ ಒಳಗಾಗಿದ್ದ ಸುಮಾರು 34000 (2018 ನೇ ವರ್ಷದಲ್ಲಿ) ಸಂತ್ರಸ್ತರ ಬಗ್ಗೆ, ಅಲ್ಲದೇ, ಕೂಲಿಯೂ ಇಲ್ಲದೆ, ದುಡಿಯಲು ಕೆಲಸವು ಇಲ್ಲದೆ ಖಾಲಿ ಕೂತಿರುವ ಸುಮಾರು 35 ಮಿಲಿಯನ್ ಜನರ ಮತ್ತು ಸುಮಾರು 393.7 ಮಿಲಿಯನ್ ಜನರು ಕಳಪೆ ಗುಣಮಟ್ಟದ ಉದ್ಯೋಗಗಳಲ್ಲಿ ಕೆಲಸ ಮಾಡುತ್ತಿರುವ  ಮಾನವ ಸಂಪನ್ಮೂಲದ ಬಗ್ಗೆ,  ಸ್ವಾತಂತ್ರ್ಯ ಬಂದಾಗಿನಿಂದ ಇಲ್ಲಿಯವರೆಗೂ ಇವರೇ ದೇಶದ ಬೆನ್ನೆಲುಬು ಎಂದು ಹೇಳುತ್ತಲೇ ಸುಮಾರು 10,349 (2018) ರೈತರು ಸಾಯುವಂತೆ ಸೃಷ್ಟಿಯಾದ ಸಂದರ್ಭಗಳ ಬಗ್ಗೆ,  ಕಣ್ಣು ತೆರೆದು ನೋಡುವ ಮೊದಲೇ ಕಣ್ಮುಚ್ಚುವ ಸುಮಾರು 7,21,000 (2018) ಮಕ್ಕಳ ಬಗ್ಗೆ,  ಭವಿಷ್ಯದ ಕನಸನ್ನೊತ್ತು ಪದವಿ ಪಡೆದು ಬರುವ 3.74 ಕೋಟಿ (2018-19) ವಿದ್ಯಾವಂತರ ನಿರುದ್ಯೋಗದ ಪರಿಸ್ಥಿತಿಯ ಬಗ್ಗೆ,  ನಮ್ಮನ್ನು ರಕ್ಷಿಸಲು ಗಡಿಯಲ್ಲಿ ಕೆಲಸ ನಿರ್ವಹಿಸುವ ಸುಮಾರು 4.5 ಮಿಲಿಯನ್ ಸೈನಿಕರ ಮತ್ತು ಅವರ ಸಂಬಳವನ್ನು ಅವಲಂಬಿಸಿರುವ ಕುಟುಂಬಗಳ, ಹೀಗೆ ಹತ್ತು ಹಲವು ವಿವಿಧ ಸಮುದಾಯಗಳ ಬಗ್ಗೆ ಗಮನ ನೀಡುವವರು ಯಾರು ? ಅದೂ, ಇಂಥ Lockdown ಸಂದರ್ಭದಲ್ಲಿ.

CORONA ಹೋರಾಟದ ಭಾಗವಾಗಿ ಕೇಂದ್ರ- ರಾಜ್ಯ ಸರ್ಕಾರಗಳು ಮತ್ತು ಹಲವು ಸಂಘ ಸಂಸ್ಥೆಗಳು ತಮ್ಮ ಕಾರ್ಯ ಮಿತಿಯಲ್ಲಿ ವಿಶೇಷ ಪ್ಯಾಕೇಜುಗಳನ್ನು ಘೋಷಿಸುವುದರ ಮೂಲಕ, ಜನರಿಗೆ ನೆರವಾಗುವ ಸಣ್ಣ ಪ್ರಯತ್ನವನ್ನಂತು ಮಾಡಿದ್ದಾರೆ. ಆದರೆ, ಈಗಿರುವ ಬಹುಮುಖ್ಯ ಪ್ರಶ್ನೆ ಎಂದರೇ, ಇಷ್ಟೊಂದು ದೊಡ್ಡ ಜನಸಂಖ್ಯೆಗೆ ಇವರ ಘೋಷಿತ ಪ್ಯಾಕೇಜ್ ಸಾಲುತ್ತದೆಯೇ ?

CORONA ಸಮಯದಲ್ಲಾದ ಅವಾಂತರಗಳನ್ನು ನೋಡುವುದಾದರೇ,
1.ಯಾವುದೇ ಭರವಸೆಯನ್ನು ನೀಡದೆ ಏಕಾಏಕಿ ರಾಜ್ಯ-ದೇಶವನ್ನು ಮುಚ್ಚಿದ ಪರಿಣಾಮ ಕೋಟ್ಯಂತರ ಮಂದಿ ಕೆಲಸ ಕಳೆದುಕೊಂಡರು.

2. ರಾಜಧಾನಿಗಳಲ್ಲಿ ಬೀದಿಗೆ ಬಿದ್ದ ಲಕ್ಷಾಂತರ ಮಂದಿ, ಗೂಡು ಸೇರುವ ಹೊತ್ತಿಗೆ ಇಡೀ ಭಾರತವೇ Lockdown ಆಗಿಹೋಗಿತ್ತು.  100-200-500 km ದೂರ ಎನ್ನದೆ ನಡೆದೇ ಸಾಗಬೇಕಾಯಿತು, ತುಂಬು ಹೊಟ್ಟೆಯ ಚಿಂತೆಯಿಲ್ಲದೆ.

3.  ಗೂಡು ಸೇರುವ ಮುನ್ನ, ಕಾಲ್ನಡಿಗೆಯಲ್ಲೇ ಬಂದ ಜನರನ್ನು ಸಾಮೂಹಿಕವಾಗಿ ಒಂದೆಡೆ ಸೇರಿಸಿ ಅಲ್ಲಿಯ ಸರಕಾರಗಳು ಗಂಡು-ಹೆಣ್ಣು, ಮುದುಕರು, ಅಂಗವಿಕಲರು, ಮಕ್ಕಳು ಎಂಬ ಭೇದ ಮಾಡದೆ ಕೂತಲ್ಲಿಯೇ-ನಿಂತಲ್ಲಿಯೇ ಔಷಧವನ್ನು Fire ಮಾಡಿದರು ಮತ್ತು corona ವನ್ನು ಮುಕ್ತಗೊಳಿಸಿಯೇ ಬಿಟ್ಟರು!

4.  ಲಕ್ಷಾಂತರ ಬೆಲೆ ಬಾಳುವ ಕೃಷಿ ಉತ್ಪನ್ನಗಳನ್ನು ಮಾರಲಾಗದೆ ಕಂಗೆಟ್ಟ ರೈತರು ತಾವು ಬೆಳೆದ ಫಸಲನ್ನು ಬೀದಿಗೆ, ಕೆರೆಗೆ ಸುರಿದರು.

5. ದಿನಗೂಲಿಯನ್ನೇ ನೆಚ್ಚಿ ಬದುಕುತ್ತಿದ್ದ ಮಂದಿ ನೆಲಕಚ್ಚಿ ಬೀಳುವಂತಾಯಿತು.

6. ಬದುಕು ನಡೆಸಲು ನಗರಗಳ ಸೇರಿಕೊಂಡಿದ್ದವರು ಒಂದೊತ್ತಿನ ಊಟ ಮತ್ತು ಬಾಡಿಗೆ ಕಟ್ಟಲು ಪರದಾಡಿದರೇ, ಮಾಸಿಕ ಕಂತು ಕಟ್ಟಲು  ಮತ್ತು ದಿನಸಿ ಕೊಳ್ಳಲು ಸಂಬಳದಾರರಿಗೆ  ಹೊರೆ ಎನಿಸಿದೆ.

7. ಭವಿಷ್ಯದ ಕನಸು ಕಟ್ಟಿಕೊಂಡಿದ್ದ 2020 ಸಾಲಿನ ವಿದ್ಯಾರ್ಥಿಗಳು ದಿಕ್ಕುತೋಚದೆ ತತ್ತರಿಸುವಂತಾಗಿದೆ.

8. ಕೆಲಸವಿಲ್ಲದೇ ಚಾಲಕರು,ನಿರ್ವಾಹಕರು, ರಿಕ್ಷಾದವರು ದೀರ್ಘಾವಧಿ ವಿಶ್ರಾಂತಿಯಲ್ಲಿದ್ದಾರೆ.

9.  ರೋಗ ನಿಯಂತ್ರಣಕ್ಕಾಗಿ ಪೊಲೀಸರು, ವೈದ್ಯರು ಮತ್ತು ತಂಡದವರು, ಪೌರಕಾರ್ಮಿಕರು,  ವಿದ್ಯುತ್ ನಿರ್ವಾಹಕರು ಮತ್ತು ಕೆಲವು ರಾಜಕಾರಣಿಗಳು ಮಾತ್ರ ಶ್ರಮದಾನ ಮಾಡುತ್ತಿದ್ದಾರೆ.

            ಹೀಗೆ ಸುಮಾರು 136.9 ಕೋಟಿ ಜನಸಂಖ್ಯೆ ಹೊಂದಿರುವ ಭಾರತಕ್ಕೆ, CORONA ವೈರಸ್ ಎಲ್ಲರನ್ನೂ ಒಮ್ಮೆಲೆ ದಂಗುಬಡಿದ್ದಂತು ಸುಳ್ಳಲ್ಲ.  "ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕ್ತಾರೆ" ಎಂಬ ಗಾದೆಯಂತೆ ಯಾರೋ ಮಾಡಿದ ಅವಾಂತರದಿಂದ ದೇಶದ ಶೇಕಡಾ 99.9 ಜನ ಬೆಲೆ ತೆರಬೇಕಾದ ತುರ್ತುಪರಿಸ್ಥಿತಿ ಆಗಿದೆ ಮತ್ತು ಇದರ ಅಂತಿಮ ಬೆಲೆ ತೆರಬೇಕಾದವರು ಮಾತ್ರ ಶ್ರೀಸಾಮಾನ್ಯರೇ ಆಗಿರುತ್ತಾರೆ.  ಇಂದಲ್ಲ-ನಾಳೆ ವೈರಸ್ ನಮ್ಮಿಂದ ದೂರವಾಗುತ್ತದೆ ಆದರೆ ಮೊದಲೇ ಹೇಳಿದಂತೆ ಇದು ಬಿಟ್ಟುಹೋಗುವ ಹಲವಾರು ಕಹಿ ಸತ್ಯಗಳನ್ನು ಪರಾಮರ್ಶಿಸಬೇಕಿದೆ.  ಹಲವು  ಜ್ಯೋತಿರ್ವರ್ಷಗಳಷ್ಟು ದೂರವಿರುವ ಗ್ರಹಗಳಲ್ಲಿ ನೆಲೆ ಕಂಡುಕೊಳ್ಳುವ ತವಕದಲ್ಲಿರುವ ಮಾನವ, ತಾನಿರುವ ಭೂಮಂಡಲದಲ್ಲಿ ಪರಸ್ಪರ ಮಾನವೀಯ ಪ್ರೀತಿ-ಸಹೃದಯಗಳನ್ನು ಒಮ್ಮೆ ಪರೀಕ್ಷಿಸಿ  ಅಣಕಿಸಿಕೊಳ್ಳುವಂತೆ CORONA ಮಾಡಿದೆ.

            ಕರೋನಾ ತಂದೊಡ್ಡಿರುವ  ಅಷ್ಟೇ ಸವಾಲುಗಳು ಆರೋಗ್ಯ ವಿಚಾರದಲ್ಲಿ ಮೊದಲು ನಮ್ಮ ದೇಶದಲ್ಲಿದ್ದು, ಅವುಗಳನ್ನು ಒಮ್ಮೆ ಗಮನಿಸಿ.

1.      ಭಾರತದಲ್ಲಿ ಆರೋಗ್ಯ ರಕ್ಷಣೆಗೆ ಸಾರ್ವಜನಿಕ ವಲಯದ ಹೂಡಿಕೆ ಜಾಗತಿಕ ಮಟ್ಟದಲ್ಲಿ ಅತ್ಯಂತ ಕಡಿಮೆ ಇದ್ದು, ಅದು ಜಿಡಿಪಿಯ ಶೇಕಡಾ 1.3 ಮಾತ್ರ ಇದೆ.

2.      ಆರ್ಥಿಕ ಸಮೀಕ್ಷೆ 2019-20 ಪ್ರಕಾರ, ಭಾರತದಲ್ಲಿ ಸುಮಾರು 1456 ಜನರಿಗೆ ಒಬ್ಬ ವೈದ್ಯರಿದ್ದು, ಇದು ಸಾವಿರ ಜನರಿಗೆ ಒಬ್ಬ ವೈದ್ಯ ಇರಬೇಕೆಂಬ WHO ಶಿಫಾರಸಿಗೆ ವಿರುದ್ಧವಾಗಿದೆ.

3.      ಆರೋಗ್ಯದ ಲಭ್ಯತೆ ಮತ್ತು ಗುಣಮಟ್ಟ ದೃಷ್ಟಿಯಲ್ಲಿ ಭಾರತ 195 ದೇಶಗಳಲ್ಲಿ 145 ನೇ ಸ್ಥಾನದಲ್ಲಿದೆ.

4.      ಕೆ. ಶ್ರೀನಾಥ್ ರೆಡ್ಡಿ ಅವರ " Make health in India: Reaching a billion plus"  ಪುಸ್ತಕದ ಪ್ರಕಾರ, ಭಾರತದಲ್ಲಿನ ಕುಟುಂಬಗಳು ತಮ್ಮ ಆದಾಯದ ಶೇಕಡಾ 10 ರಿಂದ 40ರಷ್ಟು ಹಣವನ್ನು ಆರೋಗ್ಯಕ್ಕಾಗಿ ಖರ್ಚು ಮಾಡುತ್ತಿರುವುದರಿಂದ ಕಳೆದ ದಶಕದಲ್ಲಿ ಸುಮಾರು 55 ರಿಂದ 63 ಮಿಲಿಯನ್ ಜನರು ಬಡತನಕ್ಕೆ ತಳ್ಳಲ್ಪಟ್ಟಿದ್ದಾರೆ ಎಂಬುದರಲ್ಲಿ ಆಶ್ಚರ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

5.      ಭಾರತದಲ್ಲಿ ರೋಗನಿರೋಧಕ ಶಕ್ತಿಯ ಪ್ರಮಾಣವು ಶೇಕಡಾ 62 ರಿಂದ 64 ರಷ್ಟು ಕಳಪೆಯಾಗಿದೆ. ಆದರೆ ದಕ್ಷಿಣ  ಮತ್ತು ಉಪ-ಸಹಾರನ್ ಆಫ್ರಿಕಾದ ಅನೇಕ ದೇಶಗಳು  ತಮ್ಮ ಆರ್ಥಿಕ ಅಭಿವೃದ್ಧಿಯ  ಕೆಳಮಟ್ಟದ ಹೊರತಾಗಿಯೂ ಶೇಕಡಾ 90 ಕ್ಕಿಂತ ಹೆಚ್ಚಿನ ವ್ಯಾಪ್ತಿಯನ್ನು ಹೊಂದಿದೆ.

6.      ಭಾರತದಲ್ಲಿ  ಒಂದು ಲಕ್ಷ ಜನಸಂಖ್ಯೆಗೆ ಕೇವಲ 0.3 ಮನೋವೈದ್ಯರಿದ್ದು, ಮಾನಸಿಕ ಆರೋಗ್ಯ ಅಸ್ವಸ್ಥತೆ ಹೊಂದಿರುವ ಹತ್ತರಲ್ಲಿ ಒಬ್ಬರಿಗೆ ಮಾತ್ರ  ಪುರಾವೆ ಆಧಾರಿತ ಹಾರೈಕೆ ಮತ್ತು ಚಿಕಿತ್ಸೆಯನ್ನು ನೀಡಲಾಗುತ್ತಿದೆ.

7.      ಜಾಗತಿಕ ಪೋಷಣೆ ವರದಿ(Global Nutrition Report)ಪ್ರಕಾರ  ಭಾರತದಲ್ಲಿ 46.6 ಮಿಲಿಯನ್ ಕುಂಠಿತ ಬೆಳವಣಿಗೆ ಹೊಂದಿರುವ ಮಕ್ಕಳಿದ್ದು ಮೊದಲ ಸ್ಥಾನದಲ್ಲಿದೆ.

8.      ರಾಷ್ಟ್ರೀಯ ಆರೋಗ್ಯ ವಿವರಗಳ ಪ್ರಕಾರ ಸಾಂಕ್ರಾಮಿಕವಲ್ಲದ ರೋಗ (NCDs) ಇಂದಾಗಿ  ಪ್ರತಿವರ್ಷ ಸುಮಾರು 5.2 ಮಿಲಿಯನ್ ಜೀವಗಳು ಮರಣ ಹೊಂದುತ್ತಿದ್ದಾರೆ.

9.      UN ರಿಪೋರ್ಟ್ ಪ್ರಕಾರ ಭಾರತದಲ್ಲಿ ಐದು ವರ್ಷದೊಳಗಿನ ಮಕ್ಕಳ ಮರಣ ಪ್ರಮಾಣ 1000 ಜೀವಂತ ಜನಗಳಿಗೆ 43ರಷ್ಟಿದೆ. 2018ರಲ್ಲಿ ಸುಮಾರು 8,82,000 ದಷ್ಟು ಐದು ವರ್ಷಕ್ಕಿಂತ ಕಡಿಮೆ ಇರುವ ಮಕ್ಕಳು ಸತ್ತಿದ್ದಾರೆ.

10. ಕಳೆದ 25 ವರ್ಷಗಳಲ್ಲಿ ಭಾರತವು ಹೃದಯ ಸಂಬಂಧಿ ಕಾಯಿಲೆಗಳ ಪ್ರಮಾಣದಲ್ಲಿ 50% ಹೆಚ್ಚಳ ಕಂಡಿದೆ ಎಂದು 2019 ಪ್ರಾರಂಭದಲ್ಲಿ ವರದಿಯಾಗಿದೆ.

11. ಕ್ಯಾನ್ಸರ್ ರೋಗದೊಂದಿಗೆ  ಪ್ರತಿವರ್ಷವೂ  ಬಳಲುವವರ ಸಂಖ್ಯೆ 2.25  ಮಿಲಿಯನ್. 2018  ರಲ್ಲೇ  ನೋಂದಣಿಯಾದ ಒಟ್ಟು ಕ್ಯಾನ್ಸರ್ ಸಂಖ್ಯೆ 11,57,294   ಮತ್ತು  ಮರಣ ಹೊಂದಿದವರ ಸಂಖ್ಯೆ 7,84,821.

12. ಭಾರತವು ವಿಶ್ವದ ಮೂರನೇ ಅತಿ ದೊಡ್ಡ ಹೆಚ್ಐವಿ ಸಾಂಕ್ರಾಮಿಕ ರೋಗವನ್ನು ಹೊಂದಿದ್ದು. ಸುಮಾರು 2.1 ಮಿಲಿಯನ್ ಜನರು ಎಚ್ಐವಿ ಪೀಡಿತರಾಗಿದ್ದಾರೆ.

13. ಡಯಾಬಿಟಿಸ್ ರೋಗಿಗಳ ಸಂಖ್ಯೆಯೂ 2025   ವೇಳೆಗೆ  ಭಾರತದಲ್ಲಿ  ಸುಮಾರು 134  ಮಿಲಿಯನ್ ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.

14. ಅಧಿಕ  ರಕ್ತದೊತ್ತಡವು ಭಾರತದಲ್ಲಿ ಶೇಕಡ 10.8 ರಷ್ಟು ಸಾವುಗಳಿಗೆ ಕಾರಣವಾಗಿದ್ದು, ಅಂದಾಜು 224 ಮಿಲಿಯನ್ ಜನರು ಹೈಪರ್ ಟೆನ್ಷನ್ ನಿಂದ ಬಳಲುತ್ತಿದ್ದಾರೆ.

15. ಭಾರತವು ಶ್ವಾಸಕೋಶ ಕಾಯಿಲೆಯ ಹೆಚ್ಚಿನ  ಹೊರೆಯನ್ನು ಎದುರಿಸುತ್ತಿದ್ದು, ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆಯಿಂದಾಗಿ(COPD) ಪ್ರತಿವರ್ಷ ಒಂದು ಮಿಲಿಯನ್ ಜೀವಗಳನ್ನು ಕಳೆದುಕೊಳ್ಳುತ್ತಿದೆ. 1990 ರಲ್ಲಿದ್ದ 28.1 ದಶಲಕ್ಷ ಪ್ರಕರಣಗಳಿಂದ 2015 ಹೊತ್ತಿಗೆ 55.3 ದಶಲಕ್ಷಕ್ಕೆ ಏರಿಕೆಯಾಗಿದ್ದು, ದೇಶವನ್ನು ವಿಶ್ವದ COPD ರಾಜಧಾನಿಯಾಗಿ ಪರಿಗಣಿಸಲಾಗಿದೆ.

16. 2018 ರಾಷ್ಟ್ರೀಯ ಆರೋಗ್ಯ ವಿವರದ ಪ್ರಕಾರ ಭಾರತವು  ಸಾಂಕ್ರಾಮಿಕ ರೋಗಗಳ ಬಗ್ಗೆ ಗಮನಾರ್ಹ ವಿವರಗಳನ್ನು ನೀಡಿದೆ.  ಭಾರತವು ತೀವ್ರವಾದ ಅತಿಸಾರ ಕಾಯಿಲೆಯ 1,31,94,775  ಪ್ರಕರಣಗಳನ್ನು ವರದಿ ಮಾಡಿದೆ, ಹಾಗೆಯೇ  ಎನ್ಸೆಫಾಲಿಟಿಸ್(Encephalitis)-  ಮಿದುಳಿನ  ಉರಿಯುತದ ಸುಮಾರು 23,101  ಪ್ರಕರಣಗಳನ್ನು,  ತೀವ್ರ ಉಸಿರಾಟದ ಸೋಂಕಿನ (Acute respiratory) 4,19,96,260  ಪ್ರಕರಣಗಳು,  ಚಿಕನ್ ಗುನ್ಯಾದ 57,813  ಪ್ರಕರಣಗಳು,  ಸುಮಾರು 1,01,192 ಡೆಂಗ್ಯೂ ಜ್ವರ ಪ್ರಕರಣಗಳು, 11,720 ಡಿಫ್ತೀರಿಯಾ ಪ್ರಕರಣಗಳು, ಗೊನೊಕೊಕಲ್ (Gonococcal)  ಸೋಂಕಿನ 55,470 ಪ್ರಕರಣಗಳು, ಕಲಾ ಅಜರ್ (Kala-azar) 4,380 ಪ್ರಕರಣಗಳು,  ದಡಾರದ 20,895  ಪ್ರಕರಣಗಳು,  ಮೇನಿಂಗೊಕೊಕ್ಕಲ್ ಮೆನಿಂಜೈಟಿಸ್( meningococcal meningitis) 3,382 ಪ್ರಕರಣಗಳು ಮತ್ತು ವೈರಲ್  ಮೆನಿಂಜೈಟಿಸ್ 13,110  ಪ್ರಕರಣಗಳು,  ನವಜಾತ ಟೆಟನಸ್(neonatal tetanus) 181  ಪ್ರಕರಣಗಳು,  ನವಜಾತ ಶಿಶುವಿನಲ್ಲದ(non-neonaltal tetanus) 9,104 ಪ್ರಕರಣಗಳು, ಪೆರ್ಟುಸಿಸ್ (Pertusis- Whooping cough) 18,006 ಪ್ರಕರಣಗಳು,  ನಿಮೋನಿಯಾದ 9,28,485  ಪ್ರಕರಣಗಳು, 110  ರೇಬಿಸ್ ಪ್ರಕರಣಗಳು,  ಸಿಫಿಲಿಸ್ ( syphilis)  15,595 ಪ್ರಕರಣಗಳು,  ಟೈಫಾಯಿಡ್ 23,08,537 ಪ್ರಕರಣಗಳು ಮತ್ತು ವೈರಸ್ ಹೆಪಟೈಟಿಸ್ನ 23,08,537  ಪ್ರಕರಣಗಳನ್ನು  ವರದಿ ಮಾಡಿದೆ.

17. ಸರ್ಕಾರದ ಪ್ರಕಾರ ಭಾರತದಲ್ಲಿ ಪ್ರತಿ ವರ್ಷ ಜನಿಸುವ 260 ಲಕ್ಷ ಮಕ್ಕಳಲ್ಲಿ, 31.2 ಲಕ್ಷದಷ್ಟು ಮಕ್ಕಳು ಪೂರ್ಣಪ್ರಮಾಣದ ರೋಗನಿರೋಧಕವನ್ನು  ಪೂರ್ಣಗೊಳಿಸದೆ ಇರುವುದು ರೋಗನಿರೋಧಕ ಪ್ರಯತ್ನಗಳನ್ನು ಹೆಚ್ಚಿಸುವ ಸ್ಪಷ್ಟ ಅವಶ್ಯಕತೆ ಇದೆ ಎಂದು ತೋರಿಸುತ್ತದೆ.

18. Indian Society of Assisted Reproduction ಪ್ರಕಾರ, ಬಂಜೆತನವು  ಪ್ರಸ್ತುತ ಭಾರತೀಯ  ಜನಸಂಖ್ಯೆಯ ಸುಮಾರು 10 ರಿಂದ 14 ಪ್ರತಿಶತದಷ್ಟಿದ್ದು, ನಗರ ಪ್ರದೇಶಗಳಲ್ಲಿ ಆರು ದಂಪತಿಗಳಲ್ಲಿ ಒಬ್ಬರ ಮೇಲೆ ಪರಿಣಾಮ ಬೀರುತ್ತಿದೆ.  ಅಂದಾಜಿನ ಪ್ರಕಾರ ಸುಮಾರು 27.5 ಮಿಲಿಯನ್ ಜೋಡಿಗಳು ದೇಶದಲ್ಲಿ ಬಂಜೆತನದಿಂದ ಬಳಲುತ್ತಿದ್ದಾರೆ ಎಂದು ಗ್ರಹಿಸಲಾಗಿದೆ.

19. ಭಾರತದಲ್ಲಿ ಪ್ರಸ್ತುತ 135 ದಶಲಕ್ಷ ಜನರು ಬೊಜ್ಜು ಸಮಸ್ಯೆಯಿಂದ ಬಳಲುತ್ತಿದ್ದು, 2030 ವೇಳೆಗೆ 22 ದಶಲಕ್ಷದಷ್ಟು ಮಕ್ಕಳು ಸಮಸ್ಯೆಯನ್ನು ಎದುರಿಸಲಿದ್ದಾರೆ.

20. ಜಾಗತಿಕ ಪೋಷಣೆ ವರದಿ ಪ್ರಕಾರ 15 ರಿಂದ 49 ವರ್ಷದೊಳಗಿನ ಭಾರತೀಯ ಮಹಿಳೆಯರಲ್ಲಿ 51% ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದು,  ಅದೇ ವಯಸ್ಸಿನ 22% ಮಹಿಳೆಯರು  ಅಧಿಕ ತೂಕ ಹೊಂದಿದ್ದಾರೆ.

21. ಜಾಗತಿಕವಾಗಿ ನೈರ್ಮಲ್ಯ ಸೌಲಭ್ಯಗಳಿಲ್ಲದ 2.5 ಬಿಲಿಯನ್ ಜನರಲ್ಲಿ ಸುಮಾರು 1 ಬಿಲಿಯನ್ ಜನರು ಮುಕ್ತ ಮಲವಿಸರ್ಜನೆಯನ್ನು ಮಾಡುತ್ತಾರೆ. ಪೈಕಿ ಶೇಕಡಾ 82 ರಷ್ಟು ಜನರು 10 ದೇಶಗಳಲ್ಲಿ ವಾಸಿಸುತ್ತಿದ್ದು, ಭಾರತದಲ್ಲಿ ಇದರ ಪ್ರಮಾಣ ಸುಮಾರು 300 ದಶಲಕ್ಷದಿಂದ 522 ದಶಲಕ್ಷ ಎಂದು ಅಂದಾಜಿಸಲಾಗಿದೆ.

22. ನೀರಿನ ಗುಣಮಟ್ಟ ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದ ಜಾಗತಿಕ ಸೂಚ್ಯಂಕದ ಪ್ರಕಾರ ಭಾರತವು 180 ದೇಶಗಳ ಪಟ್ಟಿಯಲ್ಲಿ 145 ನೇ ಸ್ಥಾನದಲ್ಲಿದೆ. 2050 ವೇಳೆಗೆ ಭಾರತವು ತೀವ್ರ ನೀರಿನ ಕೊರತೆಯನ್ನು ಎದುರಿಸಲಿದೆ ಎಂದು ಯುನೆಸ್ಕೊ ವರದಿ ಎಚ್ಚರಿಸಿದೆ  ಮತ್ತು 2018 UN ವರದಿಯು 2040 ವೇಳೆಗೆ ಜಾಗತಿಕವಾಗಿ 1.5 ಡಿಗ್ರಿ ಸೆಲ್ಸಿಯಸ್ ತಾಪಮಾನ ಏರಿಕೆಯಾಗುವ ಮುನ್ಸೂಚನೆ ನೀಡಿದ್ದು, ಇದು ಭಾರತದ ನೀರು ಸರಬರಾಜಿಗೆ ವಿನಾಶಕಾರಿ ಪರಿಣಾಮ ಬೀರಲಿದೆ ಎಂದು ಹೇಳಲಾಗಿದೆ.

23. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ವಿಶ್ವದ 15 ಹೆಚ್ಚು ಕಲುಸಿತ ನಗರಗಳಲ್ಲಿ 14 ಭಾರತದಲ್ಲಿದೆ ಎಂದು ಹೇಳಿದ್ದು, 2016ರಲ್ಲಿ 5 ವರ್ಷದೊಳಗಿನ ಸುಮಾರು 60,987 ಮಕ್ಕಳ ಸಾವು ಕಾರಣದಿಂದ  ಆಗಿರಬಹುದೆಂದು ಊಹಿಸಿದೆ.

ಹೀಗೆ ಹತ್ತು ಹಲವು ಬಗೆಯ ಆರೋಗ್ಯ ನ್ಯೂನತೆಗಳನ್ನು ತನ್ನೊಡಲಲ್ಲಿ ಸಾಕಿರುವ ಭಾರತೀಯರಿಗೆ ಬೇಕಿರುವುದು ಸುಭದ್ರ ಆರೋಗ್ಯರಕ್ಷಣೆ ಹೊರತು ಮತ್ತೇನಲ್ಲ. "Health is Wealth" ಎಂಬುದು ಸಾರ್ವಕಾಲಿಕ ಸತ್ಯ. ಯಾವುದೇ ಜಾತಿ-ಧರ್ಮ-ಲಿಂಗ-ಭಾಷೆ-ಬಣ್ಣ-ವಯಸ್ಸು-ಬಡವ-ಶ್ರೀಮಂತ-ದೈಹಿಕ ಆಕಾರ-ಭೌಗೋಳಿಕ ಪ್ರದೇಶಗಳ ಬೇಧವಿಲ್ಲದೆ ವಿಶ್ವವ್ಯಾಪಿ ಆಗಿರುವ ಆರೋಗ್ಯ ಸಮಸ್ಯೆಗಳನ್ನು ಒಟ್ಟಾಗಿ ಎದುರಿಸುವುದು ಸಮಯದ ಅವಶ್ಯಕತೆಯಾಗಿದೆ.

ಸುಮಾರು 136.9 ಕೋಟಿ ಜನಸಂಖ್ಯೆ ಹೊಂದಿರುವ ಭಾರತವು 2025 ವೇಳೆಗೆ ಬೃಹತ್ ಜನಸಂಖ್ಯೆ ಹೊಂದಿರುವ ಪ್ರಪಂಚದ ಪ್ರಥಮ ದೇಶವಾಗಲಿದೆ. ಇಂಥ ಬೃಹತ್ ಜನಸಮೂಹಕ್ಕೆ ಆರೋಗ್ಯ ರಕ್ಷಣೆ ಒದಗಿಸುವುದು ಕಷ್ಟಸಾಧ್ಯ. ಒಕ್ಕೂಟ ವ್ಯವಸ್ಥೆಯ ದೇಶವಾಗಿರುವ ಭಾರತವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸ್ವಾಯತ್ತತೆಯೊಂದಿಗೆ ಆರೋಗ್ಯ ರಕ್ಷಣೆ ನೀಡುವ ಜವಾಬ್ದಾರಿಯನ್ನು ಹೊಂದಿದೆ. ಸಾರ್ವಜನಿಕ ವಲಯದ ಆರೋಗ್ಯ ಇಲಾಖೆಯು ಪ್ರಾಥಮಿಕ, ದ್ವಿತೀಯ ಮತ್ತು ತೃತೀಯ ಹಂತದ ಹಾರೈಕೆ ಸೌಲಭ್ಯಗಳ ಮಾದರಿಯನ್ನು  ಹೊಂದಿದ್ದು, ಗ್ರಾಮೀಣ ಪ್ರಾಥಮಿಕ ಆರೈಕೆ ಆರೋಗ್ಯ ಉಪ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮತ್ತು  ಸಮುದಾಯ ಆರೋಗ್ಯ  ಕೇಂದ್ರಗಳೊಂದಿಗೆ ಸಂಪರ್ಕಿಸುತ್ತವೆ.  ಜಿಲ್ಲಾ  ಆಸ್ಪತ್ರೆಗಳು ದ್ವಿತೀಯ ಹಂತದ ಆರೈಕೆಯನ್ನು ನೀಡುತ್ತವೆ ಮತ್ತು ತೃತೀಯ ಆರೈಕೆಯನ್ನು ದೊಡ್ಡ ಆಸ್ಪತ್ರೆಗಳು ವೈದ್ಯಕೀಯ ಕಾಲೇಜುಗಳ ಸಹಯೋಗದೊಂದಿಗೆ ನೀಡುತ್ತವೆ.
ಪ್ರಸ್ತುತ ಭಾರತದಲ್ಲಿ ಸುಮಾರು 14,376 (26%) ಸಾರ್ವಜನಿಕ ವಲಯದ ಆಸ್ಪತ್ರೆಗಳಿದ್ದು, ಖಾಸಗಿ ಒಡೆತನದ 40,916 (74%) ಆಸ್ಪತ್ರೆಗಳಿವೆ ಹಾಗೂ ಖಾಸಗಿ ಆರೋಗ್ಯ ಸೇವೆಗಳ ವೆಚ್ಚವು  ಸಾರ್ವಜನಿಕ ವಲಯಕ್ಕಿಂತ ನಾಲ್ಕು ಪಟ್ಟು ಹೆಚ್ಚಿದ್ದು, ಗ್ರಾಮೀಣ ಭಾಗದ ಸಾರ್ವಜನಿಕ ಆರೋಗ್ಯ ವೆಚ್ಚದ ಸರಾಸರಿ, ಸುಮಾರು 5,720 ರೂಗಳಿದ್ದು, ಖಾಸಗಿ ವಲಯದ ವೆಚ್ಚವು ಸುಮಾರು 22,100 ರೂ ಇದೆ. ನಗರ ಪ್ರದೇಶದ  ಸಾರ್ವಜನಿಕ ಆರೋಗ್ಯ ವೆಚ್ಚ ಸರಾಸರಿ 7,800 ರೂ ಇದ್ದರೆ, ಖಾಸಗಿ ವಲಯದ ಆರೋಗ್ಯ ವೆಚ್ಚವು 32,955 ರೂಗಳಷ್ಟು ಹೆಚ್ಚಿದೆ. ಒಟ್ಟಾರೆಯಾಗಿ 2016ರಲ್ಲಿ 9 ಲಕ್ಷ ಕೋಟಿ ಇದ್ದ ಭಾರತೀಯ ಆರೋಗ್ಯ ಮಾರುಕಟ್ಟೆಯು 2022 ವೇಳೆಗೆ 24 ಲಕ್ಷ ಕೋಟಿ ತಲುಪುವ ನಿರೀಕ್ಷೆಯಿದೆ.  ಇಷ್ಟು ಬೃಹತ್ ಪ್ರಮಾಣದ ಹಣದ ಅವಶ್ಯಕತೆಯನ್ನು ಭಾರತ ಹೀಗಿರುವ  ತುರ್ತು ಆರ್ಥಿಕ ಪರಿಸ್ಥಿತಿಯಲ್ಲಿ ಹೇಗೆ ನಿಭಾಯಿಸಲಿದೆ ಮತ್ತು ಮುಂಬರುವ ಇನ್ನಷ್ಟು ಆರೋಗ್ಯ ಸಮಸ್ಯೆಗಳನ್ನು ಹೇಗೆ ನಿರ್ವಹಿಸಲಿದೆ ಎಂಬುದೇ ಮುಂದಿರುವ ದೊಡ್ಡ ಸವಾಲು. ಇಲ್ಲಿ ಭಾರತವನ್ನು ಉಳಿಸಿಕೊಳ್ಳುವುದು ಎಂದರೇ, ಸಮಸ್ತ ಭಾರತೀಯರನ್ನು ಉಳಿಸಿಕೊಳ್ಳುವುದು ಎಂಬುದಾಗಿರುವುದರಿಂದ, ಮುಂದಿನ ಆತಂಕದ ದಿನಗಳನ್ನು ಎದುರಿಸಲು ಪ್ರತಿಯೊಬ್ಬರು ಸಜ್ಜುಗೊಳ್ಳಬೇಕಾದ ಅನಿವಾರ್ಯತೆ ಇದೆ. ನಿಟ್ಟಿನಲ್ಲಿ ಕಟ್ಟ ಕಡೆಯವನಿಗೂ ತಲುಪಬಹುದಾದ ನೆಲದ ಕಾನೂನುಗಳು ಮತ್ತು ಆರ್ಥಿಕ ಯೋಜನೆಗಳ ಸರಿಯಾದ ಅನುಷ್ಠಾನದ ಅಗತ್ಯವಿದೆ.

(ಈ ಲೇಖನದ ಅಂಕಿಅಂಶಗಳನ್ನು  ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವರದಿಗಳಿಂದ, ಇಂಟರ್ನೆಟ್ನಲ್ಲಿ ದೊರೆತ ಪತ್ರಿಕಾ ಲೇಖನಗಳಿಂದ  ಮತ್ತು ಬೇರೆ ಬೇರೆ ವೆಬ್ ಸೈಟ್ ಗಳಿಂದ ಆಯ್ದುಕೊಳ್ಳಲಾಗಿದೆ)

3 comments:

  1. Our governing class must understand all these facts for our future generations

    ReplyDelete
  2. Hard reality, you have explained the consequence of today's political world to our society

    ReplyDelete
  3. Very informative and real situation of India.. government should take responsibility of this, and our society too.

    ReplyDelete