Friday, May 29, 2020

ಹೀಗೊಂದು ಆಯಸ್ಸಿನ ಲೆಕ್ಕಚಾರ!


                     -ಸಂದೀಪ್ ಎಸ್ ರಾವಣೀಕರ್



ಯಂತ್ರಗಳಂತೆ ಆಗಿರುವ ಬದುಕು  ಹುಟ್ಟಿನಿಂದ ಸಾಯುವ ತನಕ ಹಲವು ಮಹತ್ವಾಕಾಂಕ್ಷೆಗಳನ್ನು ಹೊತ್ತು ಸಾಗುತ್ತದೆ. ಬದುಕಿರುವಷ್ಟು ದಿವಸ ನೆಮ್ಮದಿಯಿಂದಿರಬೇಕು  ಎಂದು ಭಾವಿಸುವ ನಾವುಗಳು ಜೀವನದುದ್ದಕ್ಕೂ ಬರುವ ಹಲವು ಎಡರು-ತೊಡರುಗಳೊಂದಿಗೆ ಜೀವಿಸುವುದನ್ನು ಅಭ್ಯಾಸ ಮಾಡಿರುತ್ತೇವೆ.  ಅಂತೆಯೇ, ಸಿಗಬಹುದಾದ  ಒಂದಷ್ಟು ಕೆಲಸಗಳಿಂದ ಸುದೀರ್ಘ ಯೋಜನೆಗಳನ್ನು ರೂಪಿಸಿ,  ಕೊನೆಗಾಲಕ್ಕೂ ಹೀಗೆ ಬದುಕಿರುತ್ತೇವೆ ಎಂಬಂತೆ  ಬೀಗುತ್ತ ಭಷ್ಯತ್ತಿನ ಊಹೆಯಲ್ಲಿ ವಾಸ್ತವಿಕ ಬದುಕನ್ನು ಆದಷ್ಟು ಮರೆತಿರುತ್ತೇವೆ. ಎಪ್ಪತ್ತು ವರ್ಷಗಳಷ್ಟು ದೀರ್ಘಾಯಸ್ಸಿನ ಆಶಾಭಾವನೆ ಹೊಂದಿರುವ ನಾವುಗಳು ಅದೆಷ್ಟು  ಕ್ವಾಲಿಟಿ ದಿನಗಳನ್ನು ನಮ್ಮದಾಗಿಸಿಕೊಂಡಿದ್ದೇವೆ ಎಂದು ಯೋಚಿಸಿದಾಗ, ಸಮಯ ಕಳೆದು ಹೋಗುತ್ತಿದೆ ಎಂದೆನಿಸದೆ ಇರಲಾರದು.

 ಸ್ವಲ್ಪ ಯೋಚಿಸಿ, ನಮ್ಮಗಳ ಜೀವಿತಾವಧಿ ಸುಮಾರು ಎಪ್ಪತ್ತು ವರ್ಷಗಳು ಎಂದು ಅಂದಾಜಿಸಿದರೂ ಸಹ, ಅಷ್ಟು ವರ್ಷಗಳನ್ನು ನಾವು ನಿಜವಾಗಿಯೂ ಅಂದುಕೊಂಡಂತೆ ಬದುಕುವುದಕ್ಕೆ ಬಳಸುತ್ತಿದ್ದೇವಾ ಎಂಬ ಸಂಶಯ ಬರದೇ ಇರದು.  ಗಮನಿಸಿ  ಎಪ್ಪತ್ತು ವರ್ಷಗಳು ಅಂದರೆ 25,550  ದಿನಗಳು. ಒಂದು ದಿನಕ್ಕೆ 24 ಗಂಟೆ ಯಾದರೆ,  ನಾವೆಲ್ಲರೂ ಇದೇ 24 ಗಂಟೆಯ 25,500 ದಿನಗಳನ್ನು ಹೇಗೆ ಕಳೆಯುತ್ತಿದ್ದೇವೆ ಎಂಬುದನ್ನು ಒಂದು ಸರಳ ಗಣಿತದ ಲೆಕ್ಕಚಾರದೊಂದಿಗೆ ನೋಡೋಣ.

 ಒಬ್ಬ ವ್ಯಕ್ತಿ 24 ಗಂಟೆಯಲ್ಲಿ  ಎಂಟು ಗಂಟೆಗಳಷ್ಟು ಮಲಗಿದರೆ, 70 ವರ್ಷಗಳಲ್ಲಿ ಅಂದರೆ 25,500 ದಿನಗಳಲ್ಲಿ ಸುಮಾರು 8,517 ದಿನಗಳಷ್ಟು ಕಳೆದೇಹೋಗುತ್ತದೆ. ಅರ್ಥಾತ್ 23 ವರ್ಷಗಳಷ್ಟು ನಾವು ನಿದ್ರೆಯನ್ನೇ ಮಾಡಿರುತ್ತೇವೆ.

            ಇನ್ನು ಜಂಜಾಟದ ಬದುಕಲ್ಲಿ ಅನೇಕ ಕೆಲಸಗಳಲ್ಲಿ ಬ್ಯುಸಿಯಾಗುವ ನಾವುಗಳು, ಸಮಯ ಕಳೆಯುವ ಹಲವು ಮಾರ್ಗಗಳನ್ನು ಒಮ್ಮೆ ಗಮನಿಸಿದರೆ: ಸಾಮಾನ್ಯವಾಗಿ ನಾವು ದಿನದ 6 ಗಂಟೆಯಷ್ಟು ಕೆಲಸದ ಅಥವಾ ಶಾಲಾ-ಕಾಲೇಜುಗಳ ಒತ್ತಡದಲ್ಲೇ ಇರುತ್ತವೆ. ಹಾಗಾದರೆ 70 ವರ್ಷಗಳಲ್ಲಿ ಸುಮಾರು 6,388 ದಿನಗಳು ಅಂದರೆ 17.5 ವರ್ಷಗಳು ಇದರಲ್ಲೇ ಕಳೆದು ಹೋಗುತ್ತದೆ.

 ದಿನದ ನಿತ್ಯ ಕರ್ಮಗಳನ್ನು ಮುಗಿಸುವಷ್ಟರಲ್ಲಿ ಹಾಗೂ ಮೂರು ಹೊತ್ತಿನ ಊಟದ ಸಮಯ ಮತ್ತು ನಾವುಗಳು ರೆಡಿ ಆಗುವುದಕ್ಕೆ 2 ಗಂಟೆಯಷ್ಟು ಸಮಯ ಅನಾಯಾಸವಾಗಿ ಕಳೆದೋಗಿರುತ್ತದೆ. ಇದು ನಮ್ಮ ಜೀವಿತಾವಧಿಯ 2,129 ದಿನಗಳು ಅಂದರೆ 5.83 ವರ್ಷಗಳಷ್ಟುನ್ನು ಒಳಗೊಂಡಿದೆ.

ಗ್ಯಾಜೆಟ್ ಯುಗದಲ್ಲಿರುವ ನಾವುಗಳು, ಊಟ ಬಿಟ್ಟರೂ ಮೊಬೈಲ್ ಮತ್ತು ಟಿವಿ ಬಿಟ್ಟಿರಲಾರೆವು ಎಂಬಂತಾಗಿದೆ. ದಿನದ 24 ಗಂಟೆಯಲ್ಲಿ ಕನಿಷ್ಠ 2 ಗಂಟೆಯಷ್ಟು ಮೊಬೈಲ್ ಮತ್ತು ಟಿವಿಗೆ ಮೀಸಲಿಟ್ಟರೆ  ಮತ್ತದೇ 2,129 ದಿನಗಳು ಅಂದರೆ, 5.83 ವರ್ಷಗಳಷ್ಟು ಅದರೊಟ್ಟಿಗೆ ಹೋಗಿಬಿಡುತ್ತದೆ.

 ಸಮಾಜ ಜೀವಿಯಾಗಿ ನಾವುಗಳು ಸ್ನೇಹಿತ/ತೆಯರ ಒಟ್ಟಿಗೆ ಮತ್ತು ಕುಟುಂಬದವರೊಟ್ಟಿಗೆ ಕನಿಷ್ಠ 2 ಗಂಟೆಯನ್ನಾದರೂ ಮಾತುಕತೆಗಾಗಲಿ, ಆಟ ಆಡುವುದಕ್ಕಾಗಲಿ, ಇನ್ನಿತರ ಯಾವುದೇ ಕಾರಣಕ್ಕಾದರೂ  ಬಳಸದೆ ಇರಲಾರೆವು. ಇದು ಸಹಾ, 25,550 ದಿನಗಳ ಜೀವಿತಾವಧಿಯಲ್ಲಿ 2,129 ದಿನಗಳಷ್ಟನ್ನು  ಒಳಗೊಂಡ 5.83 ವರ್ಷಗಳನ್ನು ಮುಗಿಸಿಬಿಡುತ್ತದೆ.

            ಮೇಲಿನ ಅಂಶಗಳು ಸಾಮಾನ್ಯ ಜೀವಿಯಾಗಿರುವ ನಾವುಗಳು ಬಳಸುವ ದಿನದ ವೇಳಾಪಟ್ಟಿಯಾಗಿದ್ದು, ಕೆಲವೊಮ್ಮೆ ಒಬ್ಬರಿಂದ ಒಬ್ಬರಿಗೆ ವ್ಯತ್ಯಾಸವಾಗಬಹುದು. ಆದಾಗ್ಯೂ, ದಿನದ 24 ಗಂಟೆಯಲ್ಲಿ 20 ಗಂಟೆ ಕಳೆದೋಗುತ್ತದೆ. ಇನ್ನುಳಿದ 4 ಗಂಟೆ ಅಂದರೆ ಜೀವಿತಾವಧಿಯ 4,258 ದಿನಗಳು, ಅರ್ಥಾತ್ 11.67 ವರ್ಷಗಳಷ್ಟೇ ವಯಕ್ತಿಕವಾಗಿ ನಮಗೆ ಉಳಿದಿರುವ ಸಮಯ. ಬದುಕನ್ನು ಸುಂದರವಾಗಿರಿಸುವುದಕ್ಕೆ  ನಮಗೆ ಇರುವುದು ಇಷ್ಟೇ ಕಡಿಮೆ ಸಮಯ. ಹೀಗಿರುವಾಗ, ಇಂದಿನ ಧರ್ಮಜಾತಿಲಿಂಗಸ್ಥಳದ ಆಧಾರದ ಮೇಲೆ  ನಾವು ಆಡುತ್ತಿರುವ ಯುದ್ಧ ಜಗಳಗಳುಮನಸ್ತಾಪಗಳನ್ನು ಗಮನಿಸಿದರೆ ನಾವು ಜೀವಿಸುವುದಕ್ಕೆ ಇಲ್ಲಿದ್ದೀವಾ ಅಥವಾ ದೈಹಿಕ-ಮಾನಸಿಕ ಮನಸ್ತಾಪಗಳ ಕಿರಿಕಿರಿಯಿಂದ ಬದುಕುವುದಕ್ಕೆ ಇದ್ದೀವಾ ಎಂದೆನಿಸದಿರದು.

ವೈಯಕ್ತಿಕವಾಗಿ ಏನಾದರೂ ಸಾಧಿಸಲು, ಯೋಚಿಸಲು,  ಯೋಜಿಸಲು, ನಿರ್ವಹಿಸಲು, ಪ್ರೀತಿ ಹಂಚಲು ಮತ್ತು ಪಡೆಯಲು ಇರುವ ಕಡಿಮೆ ಸಮಯ ಸರಿಯಾಗಿ ಬಳಕೆಯಾಗಲಿ.  ನಾವು ಇರುವೆಡೆ ಪ್ರೀತಿ-ಕರುಣೆ; ಮಮತೆ-ಸಹನೆಯ ಸೌಹಾರ್ದ ಬದುಕು ನಮ್ಮದಾಗಲಿ ಎಂಬುದಷ್ಟೇ ಆಶಯ.

Monday, May 18, 2020

ಕೊರೋನಾ - ಜನಪ್ರತಿನಿಧಿಗಳಿಗೊಂದು ಸುವರ್ಣಾವಕಾಶ


  
       ಸಂದೀಪ್ ಎಸ್ ರಾವಣೀಕರ್



     ಪ್ರತಿಯೊಬ್ಬ ಭಾರತೀಯನ ಜೀವನವನ್ನು ಹೈರಾಣಾಗಿಸಿರುವ ಕೊರೋನಾ, ಈಗಾಗಲೇ ಕೋಟ್ಯಾಂತರ ಜನರು ತಿನ್ನಲು ಊಟವಿಲ್ಲದೆ, ಉಳಿದುಕೊಳ್ಳಲು ಸೂರಿಲ್ಲದೆ, ದುಡಿಯಲು ಕೆಲಸವಿಲ್ಲದೆ ಬೀದಿಗೆ ಬೀಳುವಂತೆ ಮಾಡಿದೆ.   ಇದೇ ಸಂದರ್ಭದಲ್ಲಿ ತಮ್ಮತಮ್ಮ ಊರನ್ನು ತಲುಪುವ ಪ್ರಯತ್ನದಲ್ಲಿ ನಡೆದು-ನಡೆದೇ ಸತ್ತ ಜನರು ಒಂದೆಡೆಯಾದರೇ, ನಡೆಯಲಿಕ್ಕಾಗದೇ ಕುಸಿದು ಬಿದ್ದಿರುವ ಮಕ್ಕಳು, ಗರ್ಭಿಣಿಯರು, ವಯಸ್ಸಾದವರ ಕಥೆ ಹೇಳತೀರದಾಗಿದೆ. ಒಂದಷ್ಟು ಹೈಡ್ರಾಮಾಗಳಾಚೆಗೆ, ಸರ್ಕಾರ ಗುಳೇ ಹೋಗಿದ್ದ ಜನರನ್ನು ಅವರವರ ಊರಿಗೆ ತಲುಪಿಸುವ ವ್ಯವಸ್ಥೆ ಮಾಡಿದ್ದಾಗಿಯೂ, ನಡೆದೆ ಕ್ರಮಿಸುವ ಕಾರ್ಯ ಮಾತ್ರ ಇನ್ನೂ ನಿಂತಿಲ್ಲ.  

ಹಾಗೆಯೇ, ಕೊರೋನಾ ಕಾರಣದಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಭಾರತ ಈಗಾಗಲೇ, ಸರ್ಕಾರದ ಮಟ್ಟದಲ್ಲಿ ಹಲವಾರು ಲಕ್ಷಕೋಟಿಗಳಷ್ಟು ಪ್ಯಾಕೇಜ್ ಘೋಷಿಸಿದೆ. ಮೊನ್ನೆ-ಮೊನ್ನೆ ಘೋಷಣೆಯಾದ ಸುಮಾರು 20 ಲಕ್ಷ ಕೋಟಿಗೆ, ಎರಡರ ಮುಂದೆ ಎಷ್ಟು ಸೊನ್ನೆಗಳು ಹಾಕಬೇಕು? ಮತ್ತು 137 ಕೋಟಿ ಜನರಿಗೆ 20 ಲಕ್ಷ ಕೋಟಿ ಹಣವನ್ನು ಹಂಚಿಕೆ ಮಾಡಿದರೇ, ಇದರಲ್ಲಿ ನನ್ನ ಪಾಲೆಷ್ಟು? ಎಂಬ ಲೆಕ್ಕಾಚಾರದಲ್ಲೇ ಇರುವ ನಾವುಗಳು, ಮಾಧ್ಯಮಗಳು ಸೃಷ್ಟಿಸಿರುವ ಕಲ್ಪನಾತ್ಮಕ ಪ್ರಪಂಚದ ಸುತ್ತ-ಸುತ್ತುತ್ತಿದ್ದೀವಷ್ಟೆ.

ರಾಜ್ಯಾಧಿಕಾರವು ಸರ್ವ ಅಭಿವೃದ್ಧಿಯ ಕೀಲಿಕೈ ಆಗಿದ್ದು, ದೇಶದ ಸರ್ವ ಸಂಕಷ್ಟವನ್ನು ಹೋಗಲಾಡಿಸಬಹುದಾದ ಶ್ರೇಷ್ಠ ಮಾರ್ಗ ಆಗಿರುವುದರಿಂದ ಇಂತಹ ವಿಷಮ ಸಂದರ್ಭದಲ್ಲಿ, ದೇಶದ ಜನಕಲ್ಯಾಣದ ಜವಾಬ್ದಾರಿ ಹೊತ್ತಿರುವ ಸುಮಾರು 4116 ವಿಧಾನಸಭಾ ಸದಸ್ಯರು (MLA), 426 ವಿಧಾನಪರಿಷತ್ ಸದಸ್ಯರು (MLC), 545 ಲೋಕಸಭಾ ಸದಸ್ಯರು ಹಾಗೂ 245 ರಾಜ್ಯಸಭಾ ಸದಸ್ಯರುಗಳು ಸಂದರ್ಭದ ನಿಜ ರಕ್ಷಕರಾಗಬೇಕಾಗಿದ್ದಾರೆ. ಶತ ಪ್ರಯತ್ನದ ಫಲವಾಗಿ ಜನರಿಂದಲೇ ಆಯ್ಕೆಯಾಗುವ ಪ್ರತಿಯೊಬ್ಬ ಜನಪ್ರತಿನಿಧಿಯು, ತನ್ನ ಕ್ಷೇತ್ರದ ಪ್ರತಿಯೊಬ್ಬರ ಹಿತ ಕಾಯಲೆಂದೇ ದೇಶದ ಅತ್ಯುನ್ನತ ಕಾರ್ಯ ಕ್ಷೇತ್ರವಾದ ರಾಜ್ಯಾಧಿಕಾರವನ್ನು ಪಡೆಯುತ್ತಾರೆ.  ಗಮನಿಸಿ ಇಂತಹ ಜನಕಲ್ಯಾಣದ  ಕೆಲಸಕ್ಕಾಗಿಯೇ  ಜನಸಾಮಾನ್ಯರ ತೆರಿಗೆಗಳಿಂದಲೇ ಸಂಬಳ ಮತ್ತು ಇತರೆ ಭಕ್ಷಿಸುಗಳನ್ನು ಪಡೆಯುವ ಜನಪ್ರತಿನಿಧಿಗಳು, ಅತ್ಯುನ್ನತ ಸಾರ್ವಜನಿಕ ಸೇವೆಯ ಕೆಲಸಗಳಿಗೆ ಪಡೆಯುವ ಒಂದಷ್ಟು ಆರ್ಥಿಕ ಪ್ರಯೋಜನಗಳ ಲೆಕ್ಕಾಚಾರವನ್ನು ಕೆಳಗಿನ ಅಂಶಗಳೊಂದಿಗೆ ಗಮನಿಸಿ.

            ದೇಶದಲ್ಲಿ ಒಟ್ಟು 4116 MLA ಗಳು ಮತ್ತು 426 MLC ಗಳು ಇದ್ದಾರೆ. ಇವರುಗಳ ಒಂದು ತಿಂಗಳ ಸರಾಸರಿ ಸಂಬಳ ಸುಮಾರು 1,50,000 ರೂಗಳಷ್ಟಿದೆ. ಅಂದರೆ ಒಂದು ತಿಂಗಳ ಸಂಬಳದ ಒಟ್ಟು ಮೌಲ್ಯ MLA ಮತ್ತು MLC ಗಳು ಸೇರಿದಂತೆ ಸುಮಾರು 68,13,00,000 (4542 × 1,50,000) ರೂ ಗಳಾಷ್ಟಾದರೇ, ಒಂದು ವರ್ಷದ ಮೌಲ್ಯ 817,56,00,000 ರೂ ಗಳಾಷ್ಟಾಗುತ್ತದೆ (ಸಂಬಳದ ಮೌಲ್ಯವು ಪ್ರತಿ ರಾಜ್ಯಕ್ಕೂ ವ್ಯತ್ಯಾಸವಿದ್ದು, ಇಲ್ಲಿ ಲೆಕ್ಕದ ಅನುಕೂಲಕ್ಕೆ ಸರಾಸರಿ ಮೌಲ್ಯವನ್ನಷ್ಟೆ ತೆಗೆದುಕೊಳ್ಳಲಾಗಿದೆ). 2018   Association for democratic reforms and the national election watch  ವರದಿ ಪ್ರಕಾರ ಎಂಎಲ್ಎ ಗಳ ಸಂಬಳದ ಹೊರತಾದ ಒಂದು ವರ್ಷದ ಸರಾಸರಿ ಆದಾಯ ಸುಮಾರು 24.59 ಲಕ್ಷ ರೂ ಎಂದು ತಿಳಿಸಿದೆ. ಅಂದರೆ 4116 MLA ಗಳ ಒಟ್ಟು ಆದಾಯ ಒಂದು ವರ್ಷಕ್ಕೆ 1012,12,44,000 ರೂ (4116 × 24,59,00,000) ಗಳಾಷ್ಟಾಗುತ್ತದೆ.

            ಇನ್ನು ಸುಮಾರು 545ರಷ್ಟು ಲೋಕಸಭಾ ಸದಸ್ಯರು ಮತ್ತು 245 ರಾಜ್ಯಸಭಾ ಸದಸ್ಯರ ಸಂಬಳ ಮತ್ತು ಪ್ರತಿನಿಧಿಸುವ ಕ್ಷೇತ್ರದ ಇತರೆ ಖರ್ಚಿನ ಮೌಲ್ಯಗಳ ಒಟ್ಟು ಮೊತ್ತ, ಪ್ರತಿ ತಿಂಗಳು ಸುಮಾರು 2,96,600 ರೂ ರಷ್ಟಿದ್ದು, ಒಟ್ಟು 790 (545 + 245) ಸದಸ್ಯರ ಒಂದು ತಿಂಗಳ ಮೌಲ್ಯ 23,43,14,000 ರೂ ರಷ್ಟಾಗುತ್ತದೆ. ಇದರ ಒಂದು ವರ್ಷದ ಮೌಲ್ಯವು ಸರಿಸುಮಾರು 281,17,68,000 ರೂ ರಷ್ಟಾಗಲಿದೆ.

ಒಟ್ಟಿನಲ್ಲಿ, ಮೇಲಿನ ಅಷ್ಟು ಹಣ ಜನಪ್ರತಿನಿಧಿಗಳು ತಮ್ಮ ಕಾರ್ಯ ನಿರ್ವಹಿಸಲು ಕೊಡುವ ವಯಕ್ತಿಕ ಸಂಬಳವಾಗಿದ್ದು, ಸ್ಥಳೀಯ ಪ್ರದೇಶ ಅಭಿವೃದ್ಧಿ [MLALAD & MPLAD] ಲೆಕ್ಕಚಾರವನ್ನು ಒಮ್ಮೆ ನೋಡಿಬಿಡಿ. ಪ್ರತಿ ಚುನಾಯಿತ ಸದಸ್ಯರು ತಾವು ಪ್ರತಿನಿಧಿಸುವ ಕ್ಷೇತ್ರದ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಒಬ್ಬ ಎಂಎಲ್ಎ ಗೆ ಸರಾಸರಿ ಸುಮಾರು 2 ಕೋಟಿಯಷ್ಟು ಮತ್ತು ಎಂಪಿಗಳಿಗೆ 5 ಕೋಟಿಯಷ್ಟು ಹಣವನ್ನು ವಾರ್ಷಿಕವಾಗಿ ಕೊಡಲಾಗುತ್ತದೆ. ಅಂದರೆ ಯೋಜನೆಯಡಿ ಒಟ್ಟು 4116 ಎಂಎಲ್ಎ ಗಳ  ಒಟ್ಟು ಮೊತ್ತ ಒಂದು ವರ್ಷಕ್ಕೆ ಸರಿಸುಮಾರು 8,232 [4116 × 2] ಕೋಟಿಯಷ್ಟಾಗುತ್ತದೆ.  ಹಾಗೆಯೇ  ಪಾರ್ಲಿಮೆಂಟಿನ ಒಟ್ಟು 790 [545 ಲೋಕಸಭಾ + 245 ರಾಜ್ಯಸಭಾ] ಸದಸ್ಯರ MPLAD ಮೊತ್ತ ಒಂದು ವರ್ಷಕ್ಕೆ ಸುಮಾರು 3950 ಕೋಟಿಗಳಷ್ಟಾಗುತ್ತದೆ.

ಬಂಧುಗಳೇ, ಮೇಲಿನ ಎರಡು ವಿಚಾರಗಳು ಜನಪ್ರತಿನಿಧಿಗಳಿಗೆ ವೈಯಕ್ತಿಕವಾಗಿ ಕೊಡಮಾಡುವ ಆರ್ಥಿಕ ನೆರವು. ಆದರೆ ಇದನ್ನು ಮೀರಿದ ಬೃಹತ್ ಹಣಕಾಸಿನ ವಾರ್ಷಿಕ ಬಜೆಟ್ ಸಹ ಇವರುಗಳ ವ್ಯಾಪ್ತಿಗೆ ಬರುವಂತಹುದು. ಅದನ್ನು ಸಹ ಒಮ್ಮೆ ಗಮನಿಸಿಯೇ ಬಿಡಿ.  

ದೇಶದ ಸಮಗ್ರ ವಲಯಗಳ ಅಭಿವೃದ್ಧಿ ಮತ್ತು ಬೆಳವಣಿಗೆಯನ್ನು ಗಮನದಲ್ಲಿರಿಸಿಕೊಂಡು ಪ್ರತಿ ವರ್ಷವೂ ಸಹ ಒಂದು ಆರ್ಥಿಕ ವರ್ಷಕ್ಕೆ ಆಗುವಷ್ಟು ಬಜೆಟ್ ಯೋಜನೆಯನ್ನು ಕೇಂದ್ರ ಸರ್ಕಾರ, 28 ರಾಜ್ಯ ಸರ್ಕಾರಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳು ರೂಪಿಸುತ್ತವೆ. ಈಗಾಗಲೇ 2020-21 ನೇ ಸಾಲಿನಲ್ಲಿ, ಕೇಂದ್ರಸರ್ಕಾರ ಸುಮಾರು 30.42 ಲಕ್ಷಕೋಟಿಯಷ್ಟು ಬಜೆಟ್ ರೂಪಿಸಿದೆ ಹಾಗೂ ಎಲ್ಲಾ ರಾಜ್ಯಗಳ ಬಜೆಟ್ನ ಸರಾಸರಿಯನ್ನು 1.5 ಲಕ್ಷ ಕೋಟಿ ಎಂದು ಅಂದಾಜಿಸಿದರೆ, 28 ರಾಜ್ಯಗಳ ಬಜೆಟ್ ಗಾತ್ರ ಸುಮಾರು 42 ಲಕ್ಷ ಕೋಟಿಯಷ್ಟಾಗಲಿದೆ [ಉತ್ತರಪ್ರದೇಶ ದಂತಹ ದೊಡ್ಡ ರಾಜ್ಯ 5 ಲಕ್ಷ ಕೋಟಿ ಮತ್ತು ಸಿಕ್ಕಿಂ ನಂತಹ  ಸಣ್ಣ ರಾಜ್ಯ 7 ಸಾವಿರ ಕೋಟಿ ಹೊಂದಿರುವುದರಿಂದ ಎಲ್ಲಾ ರಾಜ್ಯಗಳ ಸರಾಸರಿ ಮೊತ್ತವನ್ನಷ್ಟೇ ಪರಿಗಣಿಸಲಾಗಿದೆ]. ಇನ್ನು, ಸ್ಥಳೀಯ ಸರ್ಕಾರಗಳಾದ ಮಹಾನಗರಪಾಲಿಕೆಗಳು, ಜಿಲ್ಲಾ ಪಂಚಾಯತ್ ಗಳು, ಪಟ್ಟಣ-ಪುರಸಭೆ, ತಾಲೂಕು ಪಂಚಾಯಿತಿಗಳು ಮತ್ತು ಗ್ರಾಮಪಂಚಾಯಿತಿಗಳು ಸಹ ಸ್ಥಳೀಯವಾಗಿ ವಾರ್ಷಿಕ  ಹಣಕಾಸಿನ ಯೋಜನೆಗಳನ್ನು ತಯಾರಿಸುತ್ತಾರೆ. ಎಲ್ಲಾ ಹಂತಗಳ ಬಜೆಟ್ಟನ್ನು ಒಟ್ಟುಗೂಡಿಸಿದರೆ ಸರಿಸುಮಾರು ≤ 80 ಲಕ್ಷ ಕೋಟಿಯಷ್ಟು ಬೃಹತ್ ಬಜೆಟ್, ಅಖಂಡ ಭಾರತದ ಒಟ್ಟಾರೆ ಆರ್ಥಿಕ ಯೋಜನೆಯಾಗಲಿದೆ.

ಇಲ್ಲಿ ಎಲ್ಲಾ ಹಂತಗಳಲ್ಲಿಯೂ ತಯಾರಿಸಲಾದ, ಬಜೆಟ್  ಪೂರಕವಾಗಿ ಆದಾಯ ಕ್ರೋಡೀಕರಣ ಸಾಧ್ಯವಿಲ್ಲದಿದ್ದರೂ ಸಹ ಕೊರತೆ ಬಜೆಟ್ ಅನ್ನು ಸರಿದೂಗಿಸುವ ಕೆಲಸವನ್ನಂತೂ ಆಯಾಯ ಮಟ್ಟದಲ್ಲಿ ಮಾಡಲಾಗುತ್ತದೆ. ಒಟ್ಟಾರೆ  ಒಬ್ಬ ಜನಪ್ರತಿನಿಧಿ ತನ್ನ ವ್ಯಾಪ್ತಿಯೊಳಗೆ ಎಲ್ಲರ  ಆಶೋತ್ತರಗಳನ್ನು ಈಡೇರಿಸಬಲ್ಲ ಚೈತನ್ಯ ಶಕ್ತಿಯಾಗಿಯಾಗಿರುವ  ಇಷ್ಟೊಂದು ಬೃಹತ್ ಹಣಕಾಸಿನ ಸೌಲಭ್ಯವನ್ನು ಬಳಸಿಕೊಳ್ಳಲು ಯಾವುದೇ ಅಡ್ಡಿ ಇರುವುದಿಲ್ಲ. ಆದರೆ ಇಲ್ಲಿ ಯೋಜನೆ ಅನುಷ್ಠಾನದ ಬದ್ಧತೆಯಷ್ಟೇ ಬೇಕಾಗಿದೆ. ಕಳೆದ 70 ವರ್ಷಗಳ, ಸ್ವಾತಂತ್ರ್ಯ ನಂತರದ ಭಾರತದಲ್ಲಿ ಇಂತಹ ಅವಕಾಶಗಳ ಬಳಕೆಯಿಂದಾಗಿ ಒಂದಷ್ಟು ಕೆಲಸಗಳು ಸಾಧ್ಯವಾಗಿದೆಯಾದರೂ, ಮಾಡಬೇಕಾದ ಕೆಲಸಗಳ ದೊಡ್ಡ ಪಟ್ಟಿಯೇ  ನಮ್ಮೆಲ್ಲರ ಕಣ್ಣಮುಂದಿದೆ.

ಬದುಕು ಕಟ್ಟಿಕೊಳ್ಳಲು ಸ್ವಕ್ಷೇತ್ರ ಬಿಟ್ಟು ಬೇರೆ ಜಿಲ್ಲೆ, ರಾಜ್ಯ, ದೇಶಗಳಿಗೆ ವಲಸೆ ಹೋಗಿದ್ದ ಜನರು  ಕೋರೋನಾದ ಸಮಯದಲ್ಲಿ ತಮ್ಮ- ತಮ್ಮ ಗೂಡು ಸೇರುತ್ತಿದ್ದಾರೆ ಮತ್ತು ಉದ್ಯೋಗವಿಲ್ಲದೆ ಹಾಗೆ ಉಳಿದುಬಿಟ್ಟಿದ್ದಾರೆ.  ಇಂತಹ ಸಂದರ್ಭದಲ್ಲಿ,  ತಾನು ಪ್ರತಿನಿಧಿಸುವ ಕ್ಷೇತ್ರದ ಉನ್ನತಿಗಾಗಿಯೇ ಗೆದ್ದು ಬರುವ ಜನಪ್ರತಿನಿಧಿಗೆ, ಸುವರ್ಣಾವಕಾಶವೊಂದು ಒಲಿದುಬಂದಿದ್ದು, ತನ್ನ ಕ್ಷೇತ್ರದ ದುಡಿಯುವ ಕೈಗಳಿಗೆ  ಕೆಲಸ ಸೃಷ್ಟಿಸಿ, ತನ್ನಂತೆಯೇ ಸ್ವಾವಲಂಬಿಯಾಗಿ ಬದುಕಲು  ಜನರಿಗೆ  ಅವಕಾಶಗಳನ್ನು ಸೃಷ್ಟಿಸುವ  ಕಾಲ ಸನ್ನಿಹಿತವಾಗಿದೆ.  

ಬದುಕಿದರಷ್ಟೇ ಸಾಕು, ಎಂದು ಹಂಬಲಿಸುವ ಸ್ಥಿತಿ ಸೃಷ್ಟಿಯಾಗಿರುವ ಹೊತ್ತಿನಲ್ಲಿ, ಎಲ್ಲರ ಸರ್ವ ದುಃಖಗಳ ವಿಮೋಚನೆಯ ಶಕ್ತಿ ರಾಜ್ಯಾಧಿಕಾರಕ್ಕೆ ಇದೆ ಎಂಬುದನ್ನು ಅರಿಯಬೇಕಿದೆ. ಹಾಗೆಯೇ ಪ್ರತಿಯೊಬ್ಬ ಜನಪ್ರತಿನಿಧಿಯು ತನ್ನ ಕ್ಷೇತ್ರ ವ್ಯಾಪ್ತಿಗೆ ಬರುವ ನೂರಾರು ವಿಭಾಗಗಳು [Departments] ಮತ್ತು ಸಾವಿರಾರು ಸರ್ಕಾರಿ ನೌಕರರನ್ನು ಬಳಸಿಕೊಂಡು, ವಲಸೆ ಬದುಕಿನ ಎಲ್ಲ ರೀತಿಯ ಕಷ್ಟಗಳನ್ನು ಸಹಿಸಿಕೊಂಡು ಕೊನೆಗೆ ಊರು ಸೇರಿರುವ ಬಡ ಕೂಲಿ ಕಾರ್ಮಿಕರ ಬದುಕಿಗೆ ಉದ್ಯೋಗದ ಆಸರೆಯಾಗುವ, ಉತ್ತಮವಾದ ಶಿಕ್ಷಣ ಇಲ್ಲವೆಂದು ನಗರಗಳಿಗೆ ಮುಖಮಾಡುವ ವಿದ್ಯಾರ್ಥಿಗಳಿಗೆ ಕ್ಷೇತ್ರಕ್ಕೊಂದು ಮಾದರಿ ಶಾಲೆ-ಕಾಲೇಜುಗಳನ್ನು ಸ್ಥಾಪಿಸುವ, ಅತ್ಯುತ್ತಮವಾದ ಆಸ್ಪತ್ರೆಗಳನ್ನು ನಿರ್ಮಿಸುವ, ಮೂಲಭೂತ ಸೌಕರ್ಯಗಳಾದ ಉತ್ತಮವಾದ ಕುಡಿಯುವ ನೀರಿನ ವ್ಯವಸ್ಥೆ, ರಸ್ತೆ ನಿರ್ಮಾಣ, ಮನೆ ನಿರ್ಮಾಣ, ಕಾಡುಗಳ ರಕ್ಷಣೆ, ವೈಜ್ಞಾನಿಕ ಕೃಷಿ ಪದ್ಧತಿ ಅಭಿವೃದ್ಧಿ, ಹೀಗೆ ಹತ್ತಾರು ಕಷ್ಟಗಳಿಗೆ ತಮ್ಮ ವ್ಯಾಪ್ತಿಗೆ ಸೀಮಿತವಾದಂತೆ ಪ್ರತಿಯೊಬ್ಬ ಜನಪ್ರತಿನಿಧಿಯೂ ತನ್ನ ಜನರ ಕಷ್ಟಗಳಿಗೆ ಕಿವಿಗೊಡಬಹುದಾದ ಸುವರ್ಣಾವಕಾಶವನ್ನು ಬಳಸಿಕೊಳ್ಳುವಂತಾಗಲಿ. ಆಗ ಮಾತ್ರ ತಿಂಗಳಿಗೆ ಲಕ್ಷಾನುಗಟ್ಟಲೆ ತೆಗೆದುಕೊಳ್ಳುವ ಸಂಬಳಕ್ಕೆ, ಯೋಜನೆಗಳ ಅನುಷ್ಠಾನಕ್ಕೆ ಬಿಡುಗಡೆಯಾಗುವ ನೂರು-ಸಾವಿರಾರು ಕೋಟಿ ಅನುದಾನಗಳಿಗೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ತನ್ನನ್ನು ಗೆಲ್ಲಿಸಿ ಕಳುಹಿಸಿದ ಜನಸಾಮಾನ್ಯರ ಋಣಕ್ಕೆ ನ್ಯಾಯ ಒದಗಿಸಿದಂತಾಗುತ್ತದೆ. ಇಲ್ಲವಾದರೆ, ಇಂತಹ  ಸ್ಥಿತಿಯಲ್ಲೂ ಏನೂ ಮಾಡದೇ, ಅಶಕ್ತವಾಗಿರುವ ಅದೇ ಜನಪ್ರತಿನಿಧಿಗಳನ್ನು ಬದಲಿಸುವ ಸುವರ್ಣಾವಕಾಶವನ್ನು ಮುಂದೆ ಜನರೇ ಬಳಸಿಕೊಳ್ಳಲಿ.