Sunday, February 28, 2021

ಗ್ಯಾಡ್ಜೆಟ್ ಮತ್ತು ನಾವು

ಸಂದೀಪ್ ಎಸ್ ರಾವಣೀಕರ್



ತಂತ್ರಜ್ಞಾನದೊಂದಿಗೆ ತಳುಕು ಹಾಕಿಕೊಂಡಿರುವ ಇಂದಿನ ಬದುಕು, ಶರವೇಗದ ಫಲಿತಾಂಶವನ್ನು ಪಡೆಯುವಲ್ಲಿ ಯಾವುದೇ ಕಷ್ಟ ಪಡುತ್ತಿಲ್ಲ. ಕ್ಷಣಮಾತ್ರದ ಬದಲಾವಣೆಗೆ ಕಂಡು ಕೊಳ್ಳಬೇಕಾದ ಯಾವುದೇ ವಿಷಯವನ್ನು ಒಂದು ಕ್ಲಿಕ್ಕಿನಲ್ಲಿ ಪಡೆದುಕೊಳ್ಳುವ ಸಾಕಷ್ಟು ಬುದ್ಧಿಮತ್ತೆಯನ್ನು ಮನುಷ್ಯ ತನಗಾಗಿ ಆವಿಷ್ಕರಿಸಿಕೊಂಡಾಗಿದೆ. ಹಾಗೆಯೇ ನನ್ನ ನಿಲುವಿಗೆ ಯಾವುದು ಸರಿಸಾಟಿಯಿಲ್ಲವೆಂಬಂತೆ, ಎಲ್ಲವನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಕಂಡುಕೊಳ್ಳುವ ಹಾಗೂ ಬದಲಾಯಿಸಿಕೊಳ್ಳುವ ತಂತ್ರಜ್ಞಾನವನ್ನು ಆಗಿಂದಾಗ್ಗೆ ಅಭಿವೃದ್ಧಿಪಡಿಸುತ್ತಲೇ ಇದ್ದಾನೆ.

                ಇಂತಹ ಜೀವನ ಕ್ರಮದ ಯಾವುದೇ ಮನುಷ್ಯ ಸಂಬಂಧಿ ಕ್ರಿಯೆಯಲ್ಲಿ ಮಾನವ ಸಹಭಾಗಿತ್ವವು ಸಂಬಂಧಗಳ ಒಳಗೊಳ್ಳುವಿಕೆಯ ಭಾಗವಾಗಿರದೆ, ಗ್ಯಾಡ್ಜೆಟ್(Gadget) ಲೋಕಕಷ್ಟೆ ಸೀಮಿತವಾಗಿರುವುದನ್ನು ಕಾಣಬಹುದಾಗಿದೆ. ಸಹಕುಟುಂಬ ವಾಸಿಯಾಗಿದ್ದ ಸಂದರ್ಭವು ತಾತ-ಅಜ್ಜಿ, ದೊಡ್ಡಪ್ಪ-ದೊಡ್ಡಮ್ಮ,  ಅಪ್ಪ-ಅಮ್ಮ, ಚಿಕ್ಕಪ್ಪ-ಚಿಕ್ಕಮ್ಮ, ಮಾವ-ಅತ್ತೆ, ಅಣ್ಣ-ತಮ್ಮ, ಅಕ್ಕ-ತಂಗಿ ಹೀಗೆ ಹಲವು ಬಗೆಯ ಕುಟುಂಬ ಸಂವೇದನೆಯನ್ನು ಹೊಂದಿತ್ತು. ಅಂತೆಯೇ ಶಾಲಾ-ಕಾಲೇಜುಗಳಲ್ಲಿ, ಕೆಲಸ ನಿರ್ವಹಿಸುವ ಸ್ಥಳಗಳಲ್ಲಿ, ಪರಊರಿನ ಪರಿಚಯಿಸ್ಥರಲ್ಲಿ, ಓಡಾಟ ಸಂದರ್ಭದ ಪರಿಚಯಗಳಲ್ಲಿ ಮತ್ತು ವಿಚಾರ ವಿನಿಮಯಗಳ ವೇದಿಕೆಗಳಲ್ಲಿ ಒಂದಾಗುವ ಯಾವುದೇ ಸಂದರ್ಭವು ಸ್ನೇಹ ಸಂಬಂಧದಿಂದ ಕೂಡಿರುತ್ತಿತ್ತು. ಆದರೆ ಇದು ಇಂದು ಕೇವಲ ವಾಟ್ಸಾಪ್, ಫೇಸ್ಬುಕ್, ಇನ್ಸ್ಟಾಗ್ರಾಮ್ ಗಳಂತಹ ಸಾಮಾಜಿಕ ಜಾಲತಾಣಗಳಿಗಷ್ಠೆ ಸೀಮಿತಗೊಂಡಿರುವುದು "ಮನುಷ್ಯನು ಸಂಘಜೀವಿ" ಎಂಬ ಸಾಮಾಜಿಕ ಪರಿಕಲ್ಪನೆಯನ್ನು ಅಣಕಿಸುವಂತಿದೆ.

                ವೇಗದ ಬದುಕಿಗೆ ಒಗ್ಗಿರುವ ಮನುಷ್ಯನ ಪಾಲಿಗೆ ಸಾಮಾಜಿಕ ಜಾಲತಾಣ ಅತ್ಯಂತ ಆತ್ಮೀಯ ಸ್ನೇಹಿತನೇ ಆಗಿದೆ. ಕ್ಷಣಮಾತ್ರದಲ್ಲೇ ಎಲ್ಲಾ ಕೆಲಸಗಳು ಮುಗಿದೋಗುವಂತೆ ಪ್ರೇರೇಪಿಸುವ, ಅಂತೆಯೇ ನಮ್ಮಗಳ ಬದುಕನ್ನು ರೂಪಿಸುವ ಹಲವು ಬಗೆಯ ಕಾರ್ಯಚಟುವಟಿಕೆಗಳಿಗೇನು ಕಡಿಮೆ ಇಲ್ಲ ಹಾಗೂ ಇಂಥವುಗಳನ್ನು ನಿರ್ವಹಿಸಲೆಂದೇ ಶುರುವಾಗಿರುವ ಅಪ್ಲಿಕೇಶನ್ಗಳು ಮತ್ತು ಸಂಸ್ಥೆಗಳಿಗೆ ಕೊರತೆ ಇಲ್ಲವೆಂಬಂತೆ ಇಡೀ ವ್ಯವಸ್ಥೆ ಬದಲಾಗಿದೆ.

ಉದಾಹರಣೆಗೆ: ಒಂದು ಬಸ್ಸು ಹತ್ತು ನಿಮಿಷ ತಡವಾದರೆ ಸಹಿಸಲಾಗದ ನಾವು ನಮ್ಮ ಸ್ಥಳ ತಲುಪಲು ಕೂಡಲೇ OLA, UBER, RAPIDO ಗಳಂತಹ ಹಾಗೂ ಒಂದೊತ್ತಿನ ಊಟಕ್ಕೆ ಕೂತಲ್ಲೇ ಕರೆ ತರಿಸುವ ZOMATO, UBER EATS, SWIGGY ಗಳಂತಹ ಅಪ್ಲಿಕೇಶನ್ಗಳನ್ನು ಸುಮ್ಮನೆ ಒಪ್ಪಿಬಿಟ್ಟಿದ್ದೇವೆ

 ಇಂಟರ್ನೆಟ್, ಸ್ಮಾರ್ಟ್ ಫೋನ್, ಟ್ಯಾಬ್ಲೆಟ್ ಮತ್ತು ಅಪ್ಲಿಕೇಶನ್ ಗಳಂತಹ ಆಧುನಿಕ ಸ್ಮಾರ್ಟ್ ಉಪಕರಣಗಳ ಇಂದಿನ ಬದುಕು ಒಗ್ಗುವ ಮುನ್ನ, ಮನುಷ್ಯನ ಎಲ್ಲಾ ಕ್ರಿಯೆಗಳಲ್ಲೂ ಮನುಷ್ಯ ಸಂಬಂಧವನ್ನು ಕಾಣಲು ಸಾಧ್ಯವಾಗಿತ್ತು. ನಿರಂತರ ಪ್ರಕ್ರಿಯೆಯಾಗಿ ರೂಪುಗೊಂಡಿದ್ದ ಬಸ್ ಕಂಡಕ್ಟರ್, ಬ್ಯಾಂಕ್ ಉದ್ಯೋಗಿ, ಹಾಲು ದಿನಸಿ ವ್ಯಾಪಾರಿಯೊಟ್ಟಿಗಿನ ಒಡನಾಟ. ಮೂಲೆಯೊಂದರಲ್ಲಿ ಇಡ್ಲಿ ಬೇಯಿಸುತ್ತಿದ್ದ ಹೋಟೆಲ್ ಉದ್ಯೋಗಿ, ಇಸ್ತ್ರಿ ಮಾಡುವವ, ಕಟಿಂಗ್ ಶಾಪ್ ಒಟ್ಟಿಗಿನ ಮಾತುಕತೆ. ಆಗಿಂದಾಗ್ಗೆ  ಜರುಗುತ್ತಿದ್ದ ಜಾತ್ರೆಯಂತಹ ಸನ್ನಿವೇಶಗಳು, ಮದುವೆ ಸಮಾರಂಭಗಳಲ್ಲಿನ ಪಾಲ್ಗೊಳ್ಳುವಿಕೆ, ಸಾಮೂಹಿಕ ಭೋಜನದಂತಹ ಎಲ್ಲಾ ಸನ್ನಿವೇಶಗಳಲ್ಲೂ ಮನುಷ್ಯನ ಸಹಭಾಗಿತ್ವವು ಎಲ್ಲಾ ಬಗೆಯ ಸಂಬಂಧಗಳನ್ನು ಗಟ್ಟಿಗೊಳಿಸುವುದೇ ಆಗಿತ್ತು. ಇಂಥಹ ಅದೆಷ್ಟೋ ಸಂದರ್ಭಗಳು ಮನುಷ್ಯನ ಶಾರೀರಿಕ ಮತ್ತು ಬೌದ್ಧಿಕ ಗಟ್ಟಿತನಕ್ಕೆ ಸಹಕಾರಿಯಾಗಿ ನಿಲ್ಲುತ್ತಿದ್ದವು.

                ಆಧುನಿಕ ಬದುಕಿನ ಗ್ಯಾಜೆಟ್ ಲೋಕದ ಇಂತಹ ಸಂದರ್ಭವು ಹಲವು ಬಗೆಯ ವಿಚಾರಗಳಿಗೆ ನಮಗೆ ವೇಗವಾಗಿ ಪ್ರತಿಕ್ರಿಯಿಸಿದ್ದಾಗಿಯೂ ಸಹ, ಮನುಷ್ಯ ತಾನು ಹೊಂದಿರುತ್ತಿದ್ದ ಸ್ನೇಹ-ಪ್ರೀತಿ ಸಂಬಂಧಗಳಿಂದ ದೂರವಾಗುತ್ತಿರುವುದಂತು ವಿಷಾದನೀಯ. ಅನಿವಾರ್ಯತೆಯೆನಿಸುವಷ್ಟು ಧಾವಂತದ ಬದುಕಿಗೆ ಒಗ್ಗಿರುವ ನಾವು, ಮನುಷ್ಯ ಸಹಭಾಗಿತ್ವಕ್ಕಿಂತ ಅಜೀವ ವಸ್ತುಗಳೊಟ್ಟಿಗೆ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ತಾತ್ಕಾಲಿಕ ನಿರಾಳತೆಯನ್ನು ಕೊಡುವ ಗ್ಯಾಜೆಟ್ ಶಾಶ್ವತ ಸಮಸ್ಯೆಯನ್ನು ತಂದೊಡ್ಡಬಲ್ಲ ಆತಂಕ ನಮ್ಮ ಮುಂದಿರುವುದಂತು ಸುಳ್ಳಲ್ಲ

ಇಂದು, ಬ್ಯಾಂಕರ್ ಒಟ್ಟಿಗಿನ ಸ್ನೇಹಪರತೆಯ ವ್ಯವಹಾರವನ್ನು Googlepay, Phonepe, BHIM ಅಂತಹ ಅಪ್ಲಿಕೇಶನ್ಗಳು ಕಿತ್ತುಕೊಳ್ಳುತ್ತಿವೆ.

- ತಿಂಗಳಿಗೊಮ್ಮೆ ಕಾದು ಕುಳಿತು, ಎಲ್ಲಾ ಬಗೆಯ ವಿಚಾರಗಳಿಗೆ ಸಾಕ್ಷಿಯಾಗುತ್ತಿದ್ದ ಬಾರ್ಬರ್ ಶಾಪ್ ಈಗ ಮನೆಗೆ ಆನ್ಲೈನ್ ಬುಕಿಂಗ್ ಮೂಲಕ ಬರುವಂತಾಗಿದೆ.

- ಮನೆಗೆ ಬೇಕಾದ ದಿನಸಿ, ಮನೆ ಸಂಬಂಧಿ ವಸ್ತುಗಳನ್ನು ಹೊರಗಿನ ಮಾರುಕಟ್ಟೆಯಲ್ಲಿ ಮೊದಲು ಖರೀದಿಸುತ್ತಿದ್ದರೆ, ಈಗ ಮನೆಯಲ್ಲೇ ಕೂತು ಒಂದೇ ಕ್ಲಿಕ್ಕಿನಲ್ಲಿ bigbasket, Nature basket, Amazon, Paytm mall, Reliance smart, Flipkart, Myntra ಗಳಂತಹುಗಳಿಂದ ಸಾಧ್ಯವಾಗಿಸಿದೆ.

- ತಿಂಡಿ,ತಿನಿಸು, ಊಟಗಳಲ್ಲಿನ ಮನೆಯ ವೈವಿಧ್ಯತೆಯೂ ಮಾಯವಾಗಿ ಇಂದು ಆನ್ಲೈನ್ ಖರೀದಿ ಅಪ್ ಗಳಾದ ZOMATO, UBER EATS,SWIGGY, KFC, PIZZA HUT  ಗಳಿಂದ ಬರಲಾರಂಭಿಸಿವೆ.

- ಆಗಿಂದಾಗೆ ಆಗುತ್ತಿದ್ದ ಒಂದಷ್ಟು ಭೇಟಿಗಳು ಈಗ Group calling, video calling ಗಳಿಗೆ ಸೀಮಿತವಾಗುತ್ತಿದೆ.

- ಹಬ್ಬ, ಪೂಜೆ, ಹುಟ್ಟಿದ ದಿನ, ಮದುವೆಯಂತಹ ಹಲವು ಸಂದರ್ಭಗಳಿಗೆ WhatsApp Group ಗಳಲ್ಲಿಯೇ ಶುಭಾಶಯ ಕೋರುವುದು ರೂಢಿಯಲ್ಲಿದ್ದರೇಸಾವಿನಂತಹ ದುಃಖದ ವಿಷಯಗಳಿಗೆ ಅದೇ ಗ್ರೂಪ್ ಗಳಲ್ಲಿ RIP ಎಂದು ಮೂರು ಅಕ್ಷರದ ಮೆಸೇಜ್ ಕಾಣಿಸಿಕೊಳ್ಳುತ್ತಿವೆ.

- ಸಂತೋಷ-ದುಃಖದ ಸಂದರ್ಭಗಳಿಗೆ ಸಂಬಂಧಿ - ಸ್ನೇಹಿತರ ವಿಳಾಸ ಹುಡುಕಿ ಕೊಡುತ್ತಿದ್ದ ಆಮಂತ್ರಣ ಈಗ ಕೇವಲ Whatsapp, Messenger ಗಳಿಂದಲೇ ಆಗುತ್ತಿವೆ.

- ಮೊದಲು ಅಜ್ಜಿ ಕಥೆ, ತಾಯಿ ಹಾಡಿನೊಂದಿಗೆ ಊಟ ಮಾಡುತ್ತಿದ್ದ ಮಕ್ಕಳಿಗೆ ಇಂದು  YouTube ನಲ್ಲಿ ಬರುವ Chota Bheem ಹಾಗೂ ಇನ್ನಿತರೇ Animation ವಿಡಿಯೋ ನೋಡಿದರಷ್ಟೆ ಊಟ ಸೇರುವಂತಾಗಿದೆ

- ದೇಸೀಯವಾಗಿದ್ದ ಮರಕೋತಿ, ಚಿನ್ನಿದಾಂಡು, ಗೋಲಿ ಆಟ, ಅಣೆಕಲ್ಲು, ಕೆರೆ ದಡ, ಕಲ್ಲು ಕುಟಿ-ಕುಟಿ, ಲಗೋರಿ, ಕಳ್ಳ-ಪೊಲೀಸ್, ಅಳಿಗುಳಿಮನೆ ಗಳಂತಹ ನೂರಾರು ಬಗೆಯ ಗುಂಪು ಆಟೋಟಗಳು ಇಂದು ಮಾಯವಾಗಿ, ಒಬ್ಬರೇ ಒಂದು ಮೂಲೆಯಲ್ಲಿ ಮೊಬೈಲ್ ಮೂಲಕ ಆಡುವ Gaming app ಗಳು ಸಿಗುತ್ತಿವೆ.

- ಕುಟುಂಬ ಸಮೇತರಾಗಿ ಅಪರೂಪಕ್ಕೆ ಹೋಗುತ್ತಿದ್ದ ಸಿನಿಮಾಗಳು ಈಗ Amazon prime, Hotstar, Netflix ಗಳಲ್ಲಿ ದೊರೆಯುವಂತಾಗಿ ಹೊರಹೋಗುವುದೇ ಕಷ್ಟವಾಗಿದೆ.

- ಕಣ್ತುಂಬಿಕೊಳ್ಳುತ್ತಿದ್ದ ಪ್ರವಾಸಿ ತಾಣಗಳು ಈಗ Virtual scenes ಗಳಿಂದ ಇದ್ದಲ್ಲೆ ನೋಡುವಂತಾಗಿದ್ದು, ಮಾನಸಿಕ-ದೈಹಿಕ ನೆಮ್ಮದಿ ಇಲ್ಲದಂತಾಗಿದೆ.

- ಹಲವು ಬಗೆಯಲ್ಲಿ ಓದುವುದಕ್ಕೆ ಸಿಗುತ್ತಿದ್ದ ಪುಸ್ತಕಗಳು, ಇಂದಿನ ಕಾಲಘಟ್ಟಕ್ಕೆ ಆನ್ಲೈನಲ್ಲಿ ಯಾರೋ ಓದಿದ ಧ್ವನಿ ಕೇಳಿಸಿಕೊಳ್ಳುವ ಪರಿಸ್ಥಿತಿಗೆ ಬಂದಿದೆ. ಮೂಲಕ ಓದುವ ಅಭ್ಯಾಸಕ್ಕೆ ತಿಲಾಂಜಲಿ ಇಟ್ಟಾಗಿದೆ.

- ದೇಸೀಯವಾಗಿದ್ದ ಸೋಬಾನೆ ಪದ, ಜನಪದ ಗೀತೆ, ಗಾದೆ, ಒಗಟುಗಳು ಮಾಯವಾಗಿ YouTube, Google ಗಳಲ್ಲಿ ಹುಡುಕಬೇಕಾದ ಸ್ಥಿತಿಯಲ್ಲಿ ನಾವಿದ್ದೇವೆ.

ಇಂತಹ ಮಾನವ ಸಂಪರ್ಕವನ್ನು ಕಂಡುಕೊಳ್ಳದ ಕಾರ್ಯಚಟುವಟಿಕೆಗಳು ಮನುಷ್ಯನ ವಯಕ್ತಿಕ ಮತ್ತು ಸಹಜೀವನದ ಮೇಲೆ ಬೀರಬಲ್ಲ ಪರಿಣಾಮವನ್ನು ಲೆಕ್ಕಿಸುವುದು ಇಂದಿನ ಜರೂರಾಗಿದೆ. ಬದುಕಿನ ಬಹುದೊಡ್ಡ ಭಾಗವಾಗಿ ರೂಪಿತವಾಗಿರುವ ಇಂದಿನ ಅಭ್ಯಾಸದಿಂದ, ಯಾವುದೇ ಸಂಬಂಧವು ಗಟ್ಟಿಕೊಳ್ಳಬೇಕಾದ ಬದುಕಿನಲ್ಲಿ ಹತಾಶೆ, ಏಕಾಂಗಿತನ, ನೋವು, ದ್ವೇಷ, ಅಸೂಯೆ, ಸ್ವಾರ್ಥ ಗಳಷ್ಟೇ ಮೇಲ್ಪಂಕ್ತಿಯಲ್ಲಿವೆ.  ಇದಕ್ಕೆ ಪುಷ್ಟಿ ನೀಡುವಂತೆ ಆಧುನೀಕರಣದ ಹಲವು ಬಗೆಯ ಉಪಕರಣಗಳು ನಮ್ಮನ್ನು ಒಪ್ಪಿಸಿ ಒಗ್ಗಿಸಿಕೊಳ್ಳುತ್ತಿವೆ.

                ಮನುಷ್ಯ ಕೇಂದ್ರಿತವಾಗಿಯೇ ರೂಪುಗೊಂಡ ಎಲ್ಲ ಬಗೆಯ ಅನ್ವೇಷಣೆಗಳು ಮನುಷ್ಯನ ಅಭಿವೃದ್ಧಿಗೆ ಪೂರಕವಾಗಿರುವುದಕ್ಕೆ ರೂಪಿತಗೊಂಡವು ಎಂಬುದು ಸರ್ವವಿಧಿತ. ಆದರೆ ಅಭಿವೃದ್ಧಿ ಹೆಸರಿನಲ್ಲಿ ಮನುಷ್ಯ ಸಂಬಂಧವನ್ನು ಹಾಳು ಮಾಡಿಕೊಳ್ಳುವಷ್ಟು ದೂರವಾಗುವುದು ಮಾತ್ರ ಬದುಕಿನ ದೊಡ್ಡ ದುರಂತವೇ ಸರಿ. ಜೀವನವ ಜೀವಿಸಬೇಕೆನಿಸುವಷ್ಟು ಜೀವಂತಿಕೆಯನ್ನು ನಮ್ಮ ಸುತ್ತಮುತ್ತಲಿನಲ್ಲೇ ಕಂಡುಕೊಂಡು ತಾತ್ಕಾಲಿಕ ಬದುಕಿನ ಒಡನಾಡಿಯಾದ ಉಪಕರಣಗಳನ್ನು ಮಿತವಾಗಿ ಬಳಸುವುದು ಸೂಕ್ತ ಮಾರ್ಗವೆನಿಸುತ್ತದೆ. ಏನಂತೀರಾ?

24 comments:

  1. Sir This is very informative, necessary and awareness to the modern generation super sir.

    ReplyDelete
  2. ಖಂಡಿತವಾಗಿ ಅಣ್ಣ ಈ ತಂತ್ರಜ್ಞಾನಗಳನ್ನು ಅವಶ್ಯಕತೆಗೆ ತಕ್ಕಂತೆ ಮಿತವಾಗಿ ಬಳಸುವುದು ಸೂಕ್ತ.

    ReplyDelete
  3. Naavu ಮೊಬೈಲ್ olago ಮೊಬೈಲ್ Nammolago

    ReplyDelete
  4. Exactly sir.. these words are very true..

    ReplyDelete
  5. Sir It's inured Article glimpse on how indigenous human relations seamlessly haggled with Gadgets. Sir ಹೀಗೆ ಸಾಗಲಿ ನಿಮ್ಮ ಬೆಳಕು ಚೆಲ್ಲುವ ಹಾದಿ.

    ReplyDelete
  6. As usual outstanding writings and thoughts sir.

    ReplyDelete
  7. 'ಈ ಸಮಯ ಕಳೆದುಹೋಗುತ್ತಿದೆ' ಅಂಕಣದಲ್ಲಿ ನಾವು ಈಗಾಗಲೇ ಕಳೆದುಕೊಂಡಿರುವ ಸಂಬಂಧಗಳ ಬಗ್ಗೆ ಮೇಲಿನ ಅಕ್ಷರಗಳಲ್ಲಿ ಕಟ್ಟಿಕೊಟ್ಟಿರುವುದು ಅದ್ಬುತ.
    ಹೀಗೆ ಸದಾ ಬೆಳಕು ಚೆಲ್ಲುವ ಹಾದಿ ಮುಂದುವರಿಯಲಿ ಅಣ್ಣ.
    -ಸಚಿನ್ ಮೌರ್ಯ

    ReplyDelete
  8. ನಿಮ್ಮ ಲೇಖನ ಅತ್ಯಂತ ಸಮಯೋಚಿತವಾದುದು ಮತ್ತು ಸಾಂದರ್ಭಿಕ ವಾದದ್ದು.... Man is a social Animal ಎಂದು ಅಂದು ಅರಿಸ್ಟಾಟಲ್ ಹೇಳಿದ್ದರು. ನೀವಿಂದು Man is a social networking animal ಎಂದು ಹೇಳುತ್ತಿದ್ದೀರಿ.. ಅದು ಸತ್ಯವೂ ಹೌದು. ಬದಲಾವಣೆ ಪ್ರಕೃತಿ ನಿಯಮ ಆದರೆ ಮನುಷ್ಯ ತನ್ನವರ ಜೊತೆಗೆ ತನ್ನನ್ನೇ ಮರೆಯುತ್ತಿದ್ದಾನೆ.. ಸಮಯ ಕೊಟ್ಟಾಗ ಮಾತ್ರ ಸಂಬಂಧಗಳು ಉಳಿಯಲು ಸಾಧ್ಯ.. ಇನ್ನಾದರೂ ಮನುಷ್ಯ ಮೊಬೈಲ್ ನೆಟ್ವರ್ಕ್ ಗಳನ್ನು ಹುಡುಕುವ ಬದಲು ಸಂಬಂಧಗಳ ನೆಟ್ವರ್ಕ್ ಗಳನ್ನು ಗುರುತಿಸುವಂತಾಗಲಿ..... ಬಹಳ ದಿನಗಳ ನಂತರ ಅತ್ಯುತ್ತಮ ಲೇಖನವೊಂದು ನಿಮ್ಮ ಲೇಖನಿಯಿಂದ ಮೂಡಿ ಬಂದಿದೆ... ಅಭಿನಂದನೆಗಳು..,💐💐💐

    ReplyDelete
  9. ನಮ್ಮ ಜೀವನ ಶೈಲಿಯನ್ನ ನಮಗೆ ತೋರಿಸಿದಿರಿ....
    ಅಧ್ಭುತವಾದ ಲೇಖನ.

    ReplyDelete
  10. ಅದ್ಭುತವಾದ ಲೇಖನ...

    ReplyDelete