Wednesday, October 7, 2020

ಪ್ರೀತಿ ಮತ್ತು ನಾವು

      - ಸಂದೀಪ್ ಎಸ್ ರಾವಣೀಕರ್ಪ್ರೀತಿಯ ಒತ್ತಾಸೆಯಲ್ಲಿ ಕನಸು ಕಟ್ಟಿಕೊಳ್ಳುವ ನಾವುಗಳು, ಜೀವನದ ಪ್ರತಿಗಳಿಗೆಯನ್ನು ಪ್ರೀತಿ ಹುಟ್ಟಿದ ಮೊದಲ ಸಮಯದ ಅನುಭವದಂತೆ ಬಯಸುತ್ತಾ ಆಶಾವಾದಿಯಾಗಿರುವುದು ಸರ್ವೇಸಾಮಾನ್ಯ. ಪ್ರೀತಿಸುವ ಸಮಯದಲ್ಲಿ ಕಾಣುವ ಕೇವಲ ಪ್ರೀತಿಯನ್ನಷ್ಟೆ ಜೀವನ ಕ್ರಮವೆಂದು ಭ್ರಮಿಸುವ ನಾವುಗಳು, ಜೀವನ ಕ್ರಮದ ಹಲವು ಹಂತಗಳನ್ನು ಲೆಕ್ಕಿಸುವುದೇ ಇಲ್ಲ. ಪ್ರೀತಿಗೆ ಎಲ್ಲವನ್ನೂ ಮತ್ತು ಎಲ್ಲರನ್ನೂ ಸೋಲಿಸುವ ಶಕ್ತಿ ಇದೆ ಎಂದೇ ಭಾವಿಸುವ ನಾವುಗಳು, ಪ್ರೀತಿಯಾಚೆಗಿನ ಪ್ರತಿ ಬದುಕಿನ ಅನುಕ್ರಮಗಳನ್ನು ಅಷ್ಟೇ ಪ್ರೀತಿಯಿಂದ ನೋಡುವುದಿಲ್ಲ ಹಾಗೂ ಅನುಸರಿಸುವುದಿಲ್ಲ ಅನ್ನೋದು ಅಷ್ಟೇ ಸತ್ಯ ಕೂಡ. ಪ್ರೀತಿಯಲ್ಲಿ ಪ್ರೀತಿಯಷ್ಟೇ ಇರಬೇಕೆನ್ನುವುದು ಸರ್ವವಿಧಿತ, ಆದರೆ ಭಿನ್ನ ಆಲೋಚನಾ ಕ್ರಮಗಳನ್ನು, ಪ್ರತಿಯೊಬ್ಬರ ಅಭಿರುಚಿ-ಅಭಿಪ್ರಾಯಗಳನ್ನು ಗೌರವಿಸುವ, ಇಷ್ಟಕ್ಕೇ ಬಾರದ ಎಷ್ಟೋ ಒಳ್ಳೆ ವಿಷಯಗಳನ್ನು ಅಷ್ಟೇ ಪ್ರೀತಿಯಿಂದ ಕಾಣುವ ಮತ್ತು ಅನುಸರಿಸುವ ಕಾರ್ಯಕ್ಕೆ ಮಾತ್ರ ಬೆನ್ನು ತೋರಿಸುವುದು ಸಾಧುವಲ್ಲ. ಏಕೆಂದರೆ ಪ್ರೀತಿಯಲ್ಲಿ  ದ್ವೇಷಕ್ಕೆ, ಗರ್ವಕ್ಕೆ, ಅಸ್ವಾರಸ್ಯಕ್ಕೆ(ego) ಜಾಗವಿಲ್ಲವಲ್ಲ!

ಅಹಂಮಿಕೆಯ ಆಲೋಚನೆಗಳಿಗೆ ಬುದ್ದಿ ಕೊಡುವ ಪ್ರತಿಯೊಬ್ಬರೂ ನಾನು-ನನ್ನ ಎಂಬ ವೈಯಕ್ತಿಕತೆಯನ್ನು ಪ್ರದರ್ಶಿಸುವ ಬದಲಿಗೆ  ನಾವು-ನಮ್ಮ ಎಂಬ ಒಟ್ಟಾರೆ ಒಳಗೊಳ್ಳುವಿಕೆಯನ್ನು ಅನುಸರಿಸಬೇಕಾಗಿರುವುದು ಹೊತ್ತಿನ ಜರೂರು. ಪ್ರತಿಯೊಂದು ಬದುಕಿನ ಜೀವನವನ್ನು ಜೀವಂತಿಕೆಯಾಗಿಡುವ ಅದಮ್ಯಶಕ್ತಿ ಪ್ರೀತಿಗಿದೆ, ಆದರೆ ಅದು ಕೇವಲ ವೈಯಕ್ತಿಕತೆಷ್ಟೆ ಮೀಸಲಾಗಬಾರದು. ವೈಯಕ್ತಿಕ ಬದುಕಿನಾಚೆಗಿನ ಅದೆಷ್ಟೋ ಜೀವನಾನುಭವಗಳಿಗೆ ಪ್ರೀತಿಯ ಕೈಚಾಚಿದರಷ್ಟೆ ಪ್ರೀತಿ ತುಂಬಿದ ಬದುಕಿಗೆ ಅರ್ಥ ಬರುವುದು. ಮದುವೆಯಾದ ಮೂರು, ನಾಲ್ಕು ವರ್ಷಗಳು ತುಂಬುವ ಹೊತ್ತಿಗೆ ನೈಜ ಪ್ರಾಯೋಗಿಕ(practical) ಬದುಕಿನ ನಿಜ ದರ್ಶನವಾಗಿ, ಜವಾಬ್ದಾರಿಗಳ ಹಿಂದೆ ಬಿದ್ದು ಮೊದಲ ಪ್ರೀತಿಯ ಅನುಭವವನ್ನೇ ಮರೆಯುವ ಹಂತಕ್ಕೆ ಬಂದಾಗ ವೈಯಕ್ತಿಕ ಬದುಕಿನ ಮೇಲಿನ ಅಲ್ಪ ನಿರಾಸಕ್ತಿಯು ಕೂಡ ದೊಡ್ಡ ವ್ಯತ್ಯಾಸವನ್ನೇ ತಂದೊಡ್ಡಬಲ್ಲದು. ಬದುಕಿನ ಓಟದಲ್ಲಿ ವೈಯಕ್ತಿಕ ಬದುಕಿನ ಬಗೆಗಿನ ಜವಾಬ್ದಾರಿಯಲ್ಲಿ ಪ್ರೀತಿ ಕಾಣಿಸದ ಹಾಗೆ ಬದುಕುತ್ತಿರುವ ಅದೆಷ್ಟೋ ಸಾವಿರಾರು ಉದಾಹರಣೆಗಳು ನಮ್ಮ ಮುಂದಿವೆ. ಇದೇ ಸಂದರ್ಭದಲ್ಲಿ ಅರ್ಥೈಸಿಕೊಳ್ಳಲಾಗದ ಹಲವು ಮನಸ್ಸುಗಳು ದೂರಾಗುವ ಸಂಖ್ಯೆಗಳಿಗೇನು ಕಡಿಮೆ ಇಲ್ಲ. ಆದ್ದರಿಂದ ಬದುಕಿಗೆ ಅರ್ಥ ನೀಡುವ, ವೈಯಕ್ತಿಕ ಜೀವನದ ಸರಿ ಕ್ರಮಗಳಿಗೆ ಆಸರೆಯಾಗಿ ನಿಲ್ಲುವ, ಅಭಿರುಚಿ- ಅಭಿಪ್ರಾಯಗಳಿಗೆ ಮನ್ನಣೆ ನೀಡಬೇಕಾಗಿದೆ. ಏಕೆಂದರೆ ಇವುಗಳಷ್ಟೇ ಪ್ರೀತಿಯನ್ನು ಸದಾಕಾಲ ಜೀವಂತವಾಗಿ ಇರುವಂತೆ ನೋಡಿಕೊಳ್ಳಲು ಸಾಧ್ಯ.  ಭಿನ್ನಾಭಿಪ್ರಾಯಗಳು ಮತ್ತು ಭಿನ್ನ ಆಲೋಚನಾ ಕ್ರಮಗಳು ವೈಯಕ್ತಿಕ ಬದುಕಿನೊಟ್ಟಿಗೆ ಬಹುದೂರ ಸಾಗಲಾವು. ಏಕೆಂದರೆ ಅಲ್ಲಿ ಪ್ರೀತಿ ಮತ್ತು ಪರಸ್ಪರ ಗೌರವ ಗೌಣವಾಗಿರುತ್ತವೆ.  ಒಪ್ಪಿತವಲ್ಲದ ಬಲವಂತದ ಒಪ್ಪಿಗೆಯಿಂದ ಸಂಬಂಧಗಳು ಗಟ್ಟಿಯಾಗುವುದಿಲ್ಲ. ಅಂತೆಯೇ ಗಟ್ಟಿಗೊಳ್ಳದ ಯಾವ ಸಂಬಂಧಗಳು ದೀರ್ಘಕಾಲ ಉಳಿಯುವುದಿಲ್ಲ. ಹಾಗೆಯೇ ಕಾಂಪ್ರಮೈಸ್ ಎನ್ನುವುದು ಕಡಿಮೆ ಆಯಸ್ಸಿನ ಕ್ರಮವಾಗಿದ್ದು, ಒಂದು ಸಣ್ಣ ಮನಸ್ತಾಪ ಇದನ್ನು ಹಾಳುಗೆಡವುದರಲ್ಲಿ ಅನುಮಾನವೇ ಬೇಡ. ಕವಿ ಎಚ್.ಎಸ್ ವೆಂಕಟೇಶಮೂರ್ತಿ ಅವರ ಇಷ್ಟು ಕಾಲ ಒಟ್ಟಿಗಿದ್ದು  ಎಷ್ಟು ಬೆರೆತರು, ಅರಿತೆವೇನು ನಾವು ನಮ್ಮ ಅಂತರಾಳವ ಎಂಬ ಕವಿತೆಯ ಸಾಲುಗಳು ಸಹ ಪರಸ್ಪರರನ್ನು ಅರಿಯುವುದು ಮತ್ತು ಗೌರವಿಸಿ ಒಟ್ಟಿಗೆ ನಡೆಯುವುದನ್ನೇ ಹೇಳುತ್ತವೆ.

              ಆದ್ದರಿಂದ, ಬದುಕನ್ನು ಬಂದಂತೆ ಸ್ವೀಕರಿಸುವುದಕ್ಕಿಂತ, ಅಂದುಕೊಂಡಂತೆ ಬದಲಾಯಿಸಿಕೊಳ್ಳುವುದು ಜೀವಂತಿಕೆಯ ನಮ್ಮತನದ ಲಕ್ಷಣ. ಹಾಗೆಯೇ ಮಾರ್ಗದಲ್ಲಿ ಗಟ್ಟಿತನ ಇರಬೇಕಾಗಿರುವುದು ಸಹ ಅಷ್ಟೇ ಮುಖ್ಯ. ವೈಯಕ್ತಿಕ ಬದುಕು ಮತ್ತು ಅದರಾಚೆಗಿನ ಬೇರೆ ಬೇರೆ ಅಭಿರುಚಿ-ಆಸಕ್ತಿಯನ್ನು ಪೋಷಿಸಿ, ಸಾಮಾಜಿಕ ಜವಾಬ್ದಾರಿಯನ್ನು ಎತ್ತಿ ಹಿಡಿಯುವ ಮೂಲಕ emotions ಗೆ ಒಳಗಾಗದೆ, ನಾವು ನಾವು ಗಳಾಗಿ ಬದುಕಬೇಕಿದೆ.

3 comments:

  1. Very true and everyone should understand this fact then only we can give some meaning to life and we can create our life beautifully..

    ReplyDelete
  2. Well said sir👏.. These words tell us the reality of life and we should live in practical life.😊

    ReplyDelete