Friday, May 8, 2020

"ಅಂತ್ಯದ ಪ್ರಾರಂಭವಾಗದಿರಲಿ COVID-19"


- ಪದ್ಮನಾಭ ಹೆಚ್. ಎಸ್
ಭಾರತೀಯ ಅರಣ್ಯ ಸೇವೆ.

- ಸಂದೀಪ್ ಎಸ್ ರಾವಣೀಕರ್
ಸಂಶೋಧನಾ ವಿದ್ಯಾರ್ಥಿ, ಮೈ.ವಿ.ವಿ




         ಇತಿಹಾಸದುದ್ದಕ್ಕೂ ಮಾನವ ತನ್ನ ಇರುವಿಕೆಯ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಯುದ್ದ ಮತ್ತು ರಾಜಕೀಯ ನೀತಿಗಳನ್ನಷ್ಟೆ ಅವಲಂಬಿಸಿ, ತನ್ನನ್ನು ತಾನು ಸರ್ವಶ್ರೇಷ್ಠನೆಂದು ಈವರೆಗೂ ಅಂದುಕೊಂಡಿದ್ದಾನೆ. ಆದರೇ, ಮಾನವನ  ಅಸಹಜ ಕಾರ್ಯ ನೀತಿಗಳಿಂದ  ಬದುಕಿನ ಬೇರೆ-ಬೇರೆ ಆಯಾಮಗಳನ್ನು  ರೂಪಿಸುವಲ್ಲಿ ಹೊಸ ಬಗೆಯ ರೋಗಲಕ್ಷಣಗಳು ಆಗಾಗ ಕಾಣಿಸುತ್ತಲೇ ಇವೆ.  ಪ್ರಮುಖವಾಗಿ 6ನೇ ಶತಮಾನದ ಜಸ್ಟಿನಿಯನ್ ಪ್ಲೇಗ್ ನಿಂದ ಹಿಡಿದು ಇಂದಿನ ಕೊರೋನಾವರೆಗೂ ಹಲವು ಬಗೆಯ ಸಾಂಕ್ರಾಮಿಕ ರೋಗಗಳು ನಾನಾ ಸಾಮ್ರಾಜ್ಯಗಳ ಕುಸಿತಕ್ಕೆ ಕಾರಣವಾಗಿದೆ, ಯುದ್ಧಗಳ ದಿಕ್ಕನ್ನೇ ಬದಲಿಸಿವೆ ಹಾಗೂ ಹೊಸ ಸಾಮಾಜಿಕ ಕ್ರಾಂತಿಯನ್ನೇ ಸೃಷ್ಟಿಸಿವೆ. ಇದಾವೂಗಳಿಂದಲೂ ಪಾಠ ಕಲಿತಂತೆ ಕಾಣದ ನಾವು ಮತ್ತೆ ಮಾನವ ಕೇಂದ್ರಿತ ಪರಿಕಲ್ಪನೆಯ ಸುತ್ತ ಗಿರಕಿಹೊಡೆಯುತ್ತಿದ್ದೇವಷ್ಟೆ.

ಸೃಷ್ಟಿಯ ಹಲವು ಬಗೆಗಳಲ್ಲಿ ಭುಗಿಲೆದ್ದ ಮಾರಕ ರೋಗಗಳಿಂದ ಆಗಬಹುದಾದ ಅವಘಡಗಳನ್ನು  ನೋಡುವುದಾದರೆ ಮೊದಲಿಗೆ, ಇತಿಹಾಸದಲ್ಲಿ ದಾಖಲಾದ ಮಾರಕ ಸಾಂಕ್ರಾಮಿಕ ರೋಗವು  6ನೇ ಶತಮಾನದಲ್ಲಿ ಈಜಿಪ್ಟ್ ನಲ್ಲಿ ಭುಗಿಲೆದ್ದಿತ್ತು. "ಜಸ್ಟಿನಿಯನ್ ಪ್ಲೇಗ್" ಎಂದು ಬೈಜಾಂಟೈನ್ ಚಕ್ರವರ್ತಿ ಜಸ್ಟಿನಿಯನ್ ಹೆಸರಿನಿಂದ ಕರೆದ ಸಾಂಕ್ರಾಮಿಕ ರೋಗವು, ಅವತ್ತಿನ ಮಟ್ಟಿಗೆ 25 ರಿಂದ 100 ಮಿಲಿಯನ್ ಜನರ ಸಾವಿಗೆ ಕಾರಣವಾಗಿತ್ತಂತೆ. ಕಾರಣದಿಂದಲೇ, ಸೈನ್ಯ ಸೇರಲು ಜನರಿಲ್ಲದೆ ಅಂದಿನ ರೋಮನ್ ಸಾಮ್ರಾಜ್ಯವು ಹಲವು ಪ್ರದೇಶಗಳನ್ನು  ಅರಬ್ಬರಿಗೆ ಸೋಲಬೇಕಾಯಿತು.

ಎರಡನೆಯದಾಗಿ, 14ನೇ ಶತಮಾನದಲ್ಲಿ ಯುರೋಪ್ ಮತ್ತು ಏಷ್ಯಾವನ್ನು ಅಪ್ಪಳಿಸಿದ  "ಬ್ಲಾಕ್ ಡೆತ್", ಮಾನವ ಇತಿಹಾಸದಲ್ಲಿ ದಾಖಲಾದ ದೊಡ್ಡ ಮಾರಕ ಸಾಂಕ್ರಾಮಿಕ ರೋಗವಾಗಿದೆ.  ವಿವಿಧ ಅಂದಾಜಿನ ಪ್ರಕಾರ ಸುಮಾರು 75 ರಿಂದ 200 ಮಿಲಿಯನ್ ಜನರು ರೋಗದಿಂದ ಹತರಾಗಿದ್ದರು. ಕ್ರಿ. 1340 ಹೊತ್ತಿನಲ್ಲಿ ಚೀನಾ, ಭಾರತ, ಸಿರಿಯಾ ಮತ್ತು ಈಜಿಪ್ಟ್ ನಲ್ಲಿ ಕಾಣಿಸಿಕೊಂಡಿದ್ದ  ರೋಗವು, 1347 ಹೊತ್ತಿಗೆ ಯುರೋಪ್ ಖಂಡಕ್ಕೆ ಹರಡಿ ಅಲ್ಲಿನ ಜನಸಂಖ್ಯೆಯ ಶೇಕಡ 50 ರಷ್ಟು ಜನರ ಸಾವಿಗೆ ಕಾರಣವಾಗಿತ್ತು. 

ಮೂರನೆಯದು, ಮೊದಲ ಮಹಾಯುದ್ದದ ಕೊನೆಯ ಹಂತದಲ್ಲಿ ಭುಗಿಲೆದ್ದ  "ಸ್ಪ್ಯಾನಿಸ್ ಜ್ವರವು" ಕಳೆದ ಶತಮಾನದ ಮಾರಕ ಸಂಕ್ರಾಮಿಕ ರೋಗವಾಗಿದ್ದು, ಸುಮಾರು 50 ಮಿಲಿಯನ್ ಜನರನ್ನು ಬಲಿ ಪಡೆದಿತ್ತು. ಯುರೋಪ್ ನಲ್ಲಿ ಮೊದಲು ಕಾಣಿಸಿಕೊಂಡ ರೋಗವು, ನಂತರ ಅಮೆರಿಕ ಮತ್ತು ಏಷ್ಯಾಕ್ಕೆ ವೇಗವಾಗಿ ಹರಡಿತ್ತು. ಸಾಂಕ್ರಾಮಿಕ ರೋಗದಿಂದ ಹೆಚ್ಚು ಹಾನಿಗೊಳಗಾಗಿದ್ದ ಭಾರತವು 17 ರಿಂದ 18 ಮಿಲಿಯನ್ ಜನರನ್ನು ಕಳೆದುಕೊಂಡಿದ್ದು, ಸಂಖ್ಯೆಯು ಅಂದಿನ ಜನಸಂಖ್ಯೆಯ ಸುಮಾರು 6% ನಷ್ಟಿತ್ತು. ನವೆಂಬರ್ 11, 1918 ರಂದು ಮಾನವ ಪ್ರೇರಿತ ಮಹಾಯುದ್ಧದ ಕದನ ವಿರಾಮಕ್ಕೆ ಸಹಿಹಾಕಿದ್ದಾಗಿಯೂ ಸಹ, ಜ್ವರವು ಹಲವು ತಿಂಗಳುಗಳವರೆಗೂ ವಿಶ್ವದ ಕೆಲವು ಭಾಗಗಳನ್ನು ಧ್ವಂಸ ಮಾಡಿದ್ದಂತು ಸುಳ್ಳಲ್ಲ.
 
ನಾಲ್ಕನೆಯದಾಗಿ, ಈಗಾಗಲೇ ಸುಮಾರು 4 ಮಿಲಿಯನ್ (08-5-2020 ರವರೆಗೆ) ನಷ್ಟು ಜನರಿಗೆ ಸೋಂಕು ತಗುಲಿ, 2.5 ಲಕ್ಷಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿರುವ COVID-19 ವಿಶ್ವವ್ಯಾಪಿಯಾಗಿದ್ದು, ಜಗತ್ತಿನ ಎಲ್ಲಾ ವ್ಯವಸ್ಥೆಗಳನ್ನು ಅಸ್ಥಿರಗೊಳಿಸಿದೆ. ಇದರ ಮುಂದಿನ ಪರಿಣಾಮಗಳ ಹಲವು ಪ್ರತಿಬಿಂಬಕಗಳನ್ನು ಈಗಾಗಲೇ ಬೇರೆ-ಬೇರೆ ಸ್ತರದ ವ್ಯಕ್ತಿಗಳು ಮತ್ತು ಸಂಘ-ಸಂಸ್ಥೆಗಳು ನೀಡುತ್ತಿದ್ದಾಗಿಯೂ, ಆಗಬಹುದಾದ ಮುಂದಿನ ಬದಲಾವಣೆಗಳನ್ನು ಊಹಿಸುವುದು ಮಾತ್ರ ಕಷ್ಟಸಾಧ್ಯವಾಗಿದೆ.

ಪ್ರಾಕೃತಿಕವಾಗಿ ಸೃಷ್ಟಿಯಾಗಿರದ ಎಲ್ಲಾ ಮಾರಕ ಸಾಂಕ್ರಾಮಿಕ ರೋಗಗಳ ಅಂಕಿ-ಅಂಶಗಳ ಚಿತ್ರಣ, ಭೂಮಿಯ ಮೇಲೆ ಶ್ರೇಷ್ಠ ಜೀವಿ ಎಂದೆನಿಸಿಕೊಂಡಿರುವ ಮಾನವನ ಸ್ವಾರ್ಥ ಬದುಕಿನಿಂದಷ್ಟೆ ಆಗಿರುವ ಹಾನಿಗಳಾಗಿವೆ. ಇದಕ್ಕೆ ಹುವಾನ್ ನಲ್ಲಿ ಸೃಷ್ಟಿಯಾದ COVID-19 ಉದಾಹರಣೆಯಾಗಿ ನಮ್ಮ ಕಣ್ಣಮುಂದಿದೆ. ಹೀಗೆ ಅತ್ಯಂತ ಘೋರ ಎನಿಸಬಹುದಾದ ಇಂತಹ ಘಟನೆಗಳು ಇತಿಹಾಸದುದದಕ್ಕೂ ನಡೆದು ಅಪಾರ ಎನಿಸಬಹುದಾದ ಮನುಷ್ಯ ಹಾನಿಯಾಗಿದ್ದಾಗಿಯೂ ಸಹಾ, ಇಂದಿನ COVID-19  ಪರಿಣಾಮವನ್ನು ಸಮರ್ಥವಾಗಿ ಎದುರಿಸಲು ವಿಶ್ವವೇ ಸಜ್ಜಾಗಿರುವುದಂತು ಸುಳ್ಳಲ್ಲ.  ಮಾಧ್ಯಮ,  ವಿಷಯ ವಿನಿಮಯ,  ಕಟ್ಟುನಿಟ್ಟಿನ ಕ್ರಮ ಪಾಲಿಸುವಿಕೆಯ ಯಾವ ಕಾನೂನುಗಳು ಇರದ ಹಾಗೂ ಸಾಮಾಜಿಕ ಅಂತರ ಎಂಬ ಪರಿಕಲ್ಪನೆಯು ಇಲ್ಲದಿದ್ದ ಕಾಲದಲ್ಲಿ ಉಂಟಾದ ವಿಕೋಪಗಳಿಂದ ಎಚ್ಚತ್ತಿರುವ ಮಾನವ, ಇಂದಿನ ಆಧುನಿಕ  ಸಮಯದ ಎಲ್ಲಾ ಪರಿಕರಗಳೊಂದಿಗೆ ಈಗಿನ ಕೊರೋನಾ ವೈರಸ್ಸನ್ನು ಎದುರಿಸಲು ತಕ್ಕಮಟ್ಟಿಗೆ ಸಿದ್ಧನಾಗಿದ್ದಾನೆ. ಕಾರಣಕ್ಕಾಗಿಯೇ ಹಿಂದಿನ ಘಟನೆಗಳಿಗೆ ಹೋಲಿಸಿದರೆ ವಿಶ್ವವ್ಯಾಪಿಯಾಗಿ ಹಬ್ಬಿರುವ ಇಂದಿನ COVID-19 ನಿಂದ ಇನ್ನೂ ಅಪಾರ ಮಾನವ ಹಾನಿ ಸಂಭವಿಸಿಲ್ಲ ಎಂಬುದನ್ನು ನೆನಪಿಡಬೇಕು ಹಾಗೂ ಮುಂದೊಂದು ದಿನ ಇದಲ್ಲವನ್ನೂ ಮರೆಯುವ ಮಾನವ ತಾನು ಮೊದಲಿದ್ದ  ಮಾನವ ಕೇಂದ್ರಿತ ಅಭಿವೃದ್ಧಿಯ ಕಡೆಗೆ ಮತ್ತೆ ಮರಳುವುದರಲ್ಲಿ ಯಾವ ಅನುಮಾನವೂ ಬೇಡ. ಆದರೆ ಹೊತ್ತಿನಲ್ಲಿ ಗಮನಿಸಬೇಕಿರುವುದು, ಪ್ರಶ್ನಿಸಬೇಕಿರುವುದು, ವಿಶ್ಲೇಷಿಸಬೇಕಿರುವುದು, ವಿಮರ್ಶಿಸಬೇಕಿರುವುದು ಸಹಾ ಕೇವಲ ಇದೇ ಮನುಷ್ಯ ಕೇಂದ್ರಿತ ಅಭಿವೃದ್ಧಿ (Human Centric Development) ಎಂಬುದನ್ನು ಮರೆಯುವಂತಿಲ್ಲ.

ಗಮನಿಸಿ, ಮೂರು ವರ್ಷಗಳ ಹಿಂದೆ ವರ್ಲ್ಡ್ ವೈಡ್ ಫಂಡ್ ಫಾರ್ ನೇಚರ್ (WWF) ಹೊಸ ವರದಿಯಲ್ಲಿ, ಭಾರತವು ತನ್ನ ಅಭಿವೃದ್ಧಿಗಾಗಿ ಇರುವ ನೈಸರ್ಗಿಕ ಸಂಪನ್ಮೂಲಗಳ ಬಳಕೆಯನ್ನು ಪ್ರಸ್ತುತದಂತೆ ಮುಂದುವರಿಸಿದರೇ, ಅದರ ಬಳಕೆಯ ಮಟ್ಟವು ಕೇವಲ 14 ವರ್ಷಗಳಲ್ಲಿ ಎಲ್ಲಾ 36 OECD (Organisation for Economic Co-operation and Development) ರಾಷ್ಟ್ರಗಳ ಒಟ್ಟು ಬಳಕೆಯ ಮಟ್ಟಕ್ಕೆ ಏರುತ್ತದೆ ಎಂದು ಎಚ್ಚರಿಸಿತ್ತು.

ಇತ್ತೀಚಿನ "ಲಿವಿಂಗ್ ಪ್ಲಾನೆಟ್" ವರದಿಯು ಭವಿಷ್ಯದ ಸುಸ್ಥಿರತೆಯ (Sustainability) ಬಗ್ಗೆ ಕಳವಳ ವ್ಯಕ್ತಪಡಿಸಿದ್ದು ಪ್ರಸ್ತುತ ಸಂಪನ್ಮೂಲಗಳ ಬಳಕೆ ಈಗಾಗಲೇ ಸಾಮರ್ಥ್ಯಕ್ಕಿಂತ ಶೇಕಡ 70 ರಷ್ಟು ಹೆಚ್ಚಾಗಿದೆ ಎಂದು ಹೇಳಿದೆ.

ಹಾಗೆಯೇ, ಗ್ಲೋಬಲ್ ಔಟ್ ಲುಕ್  ವರದಿಯ ಪ್ರಕಾರ ಮಾನವ ಜೀವನ ಕ್ರಮ ಮತ್ತು ಪರಿಸರದ ಮೇಲಿನ ಒತ್ತಡದಿಂದಾಗಿ 2020 ವೇಳೆಗೆ ಜಾಗತಿಕ ವನ್ಯಜೀವಿ ಜನಸಂಖ್ಯೆಯ ಮೂರನೇ ಎರಡರಷ್ಟು ನಾಶವಾಗಲಿದೆ ಎಂದು ಅಂದಾಜಿಸಿದೆ.

ಅಂತರಾಷ್ಟ್ರೀಯ ವಿಜ್ಞಾನಿಗಳ ತಂಡವೊಂದು ಪ್ರಕಟಿಸಿರುವ "Global deal for Nature" ದಲ್ಲಿ ಹೇಳಿರುವಂತೆ ಭೂಮಿಯ ಮೇಲಿನ ಜೀವನದ ಉಗಮ ಮತ್ತು ವೈವಿಧ್ಯೀಕರಣ, ಪ್ರಬೇಧಗಳ ಸಾಮೂಹಿಕ ಅಳಿವಿನ ಐದು ಪ್ರಸಂಗಗಳು (five episodes of mass extinction) ಸುದೀರ್ಘ ಅವಧಿಯದ್ದಾಗಿದ್ದು (>3ಶತಕೋಟಿ ವರ್ಷಗಳು) ಪ್ರಸ್ತುತ ಆರನೇ ಅಳಿವು ಭಿನ್ನವಾಗಿದ್ದು,  ಮಾನವ ಚಟುವಟಿಕೆಗಳ ವೇಗವು ಪೂರ್ವ-ಮಾನವ ಕಾಲಕ್ಕೆ ಹೋಲಿಸಿದರೆ 100 ರಿಂದ 1000 ಪಟ್ಟು ವೇಗವೆಂದು ಅಂದಾಜಿಸಲಾಗಿದೆ. ಹಾಗೆಯೇ  ಸದ್ಯದ  ಪ್ರವೃತ್ತಿ ಮುಂದುವರಿದರೆ, ಭೂಮಿಯ ಮೇಲಿನ ಸುಮಾರು ಅರ್ಧದಷ್ಟು ಪ್ರಭೇದಗಳು ಮುಂದಿನ ನೂರು ವರ್ಷಗಳಲ್ಲಿ ನಾಶವಾಗಬಹುದು ಎಂದು ತಿಳಿಸಿದ್ದಾರೆ.

ಲಿವಿಂಗ್ ಪ್ಲಾನೆಟ್ ರಿಪೋರ್ಟ್ 2018ರಲ್ಲಿ ಹೇಳಿರುವಂತೆ ಸಸ್ತನಿಗಳು, ಪಕ್ಷಿಗಳು, ಮೀನುಗಳು, ಸರೀಸೃಪಗಳು ಮತ್ತು ಉಭಯಚರಗಳ ಸಂಖ್ಯೆಯೂ 1970 ಮತ್ತು 2004 ನಡುವೆ ಸರಾಸರಿ 60% ರಷ್ಟು ಕಡಿಮೆಯಾಗಿದೆ.

ಕಾಡುಗಳು ಇನ್ನೂ ವಿಶ್ವದ ಶೇಕಡ 30ರಷ್ಟು ಭೂಪ್ರದೇಶವನ್ನು ಹೊಂದಿದೆ. ಆದರೆ ವಿಶ್ವಬ್ಯಾಂಕಿನ ವರದಿಯ ಪ್ರಕಾರ 1990 ಮತ್ತು 2016 ನಡುವೆ ಸುಮಾರು 1.3 ಮಿಲಿಯನ್ ಚದರ ಕಿ.ಮೀ ಅರಣ್ಯ ನಾಶವಾಗಿದ್ದು, ಪ್ರಮಾಣ ದಕ್ಷಿಣ ಆಫ್ರಿಕಾಗಿಂತ ದೊಡ್ಡದಾಗಿದೆ ಎಂದು ತಿಳಿಸಿದೆ.

ಅಮೆಜಾನ್ ಕಾಡು ಕೇವಲ ಐವತ್ತು ವರ್ಷಗಳಲ್ಲಿ 17% ನಷ್ಟು ಕಣ್ಮರೆಯಾಗಿದೆ. ಹಾಗೆಯೇ ಮಾನವ, ಮರಗಳನ್ನು ಕಡಿಯಲು ಪ್ರಾರಂಭಿಸಿದಾಗಿನಿಂದ ಜಾಗತಿಕವಾಗಿ 46% ನಷ್ಟು ಮರಗಳನ್ನು ಕಡಿದು ಹಾಕಲಾಗಿದೆ ಎಂದು ನೇಚರ್ ಜರ್ನಲ್ 2015 ಅಧ್ಯಯನ, ವರದಿ ಮಾಡಿತ್ತು ಎಂಬುದನ್ನು ಮರೆಯಬಾರದು. 

ನೈಸರ್ಗಿಕವಾಗಿ ಸಂಭವಿಸದಿರುವ ಮೇಲಿನ ಎಲ್ಲಾ ವಿಕೋಪಗಳು ಮನುಷ್ಯ ಸೃಷ್ಟಿಯ ಪರಿಣಾಮಗಳಾಗಿದ್ದು, ಬಹಳ ಹಿಂದಿನಿಂದಲೂ ಮನುಷ್ಯ ತನ್ನಮೂಲಸೌಕರ್ಯಗಳ ಬೆಳವಣಿಗೆಗೆ, ಯುದ್ಧ ಗಾಹಿ ಮನಸ್ಥಿತಿಗೆ, ತನ್ನ ಸಂಶೋಧನೆಗಳ ಸಹಾಯಕ್ಕೆ ನೈಸರ್ಗಿಕ ಕ್ರಮಗಳನ್ನು ಬಳಸದ ಪರಿಣಾಮ, ಅವಶ್ಯಕತೆಗಿಂತ ಹೆಚ್ಚು ಬಳಸಿದ್ದರಿಂದಾಗಿ ಇಡೀ ಪ್ರಾಕೃತಿಕ ಸಂಕುಲದ ಭವಿಷ್ಯದ ಅಳಿವಿಗೆ ನಾವೆಲ್ಲರೂ ಸೇರಿ ಮುನ್ನುಡಿ ಬರೆಯುತ್ತಿದ್ದೇವೆ. ಇದರಿಂದ ಬದುಕಿನ ಜೀವ ಸೆಲೆಯಾಗಿರುವ ಉಸಿರಾಟಕ್ಕೂ ಬೆಲೆ ತರಬೇಕಾದ ಪರಿಸ್ಥಿತಿ ಬಹಳ ದೂರವಿಲ್ಲ ಮತ್ತು ಈಗಾಗಲೇ ನೀರನ್ನು ಕೊಂಡು ಕುಡಿಯುತ್ತಿರುವುದನ್ನು ಮರೆಯಬಾರದು. ಹೀಗೆ ಮಾನವಕೇಂದ್ರಿತ ಅಭಿವೃದ್ಧಿಯ ಯೋಜನೆಯನ್ನಷ್ಟೇ ರೂಪಿಸಿದ ಪರಿಣಾಮದು ಸಾಮೂಹಿಕ ವಿನಾಶಕ್ಕೆ ಎಡೆಮಾಡಿಕೊಟ್ಟಿದೆ.

    ಆದರೆ ಭೂಮಿಯು ಕೆಲವೊಮ್ಮೆ ತನ್ನ ಸಮತೋಲನ ಕಾಪಾಡಿಕೊಳ್ಳುವ ಸಲುವಾಗಿಯೇ,  ಪ್ರವಾಹಗಳು, ಭೂಕುಸಿತ, ಸುನಾಮಿ, ಚಂಡಮಾರುತ, ಶೀತಗಾಳಿ, ಉಷ್ಣಾಂಶದಲ್ಲಿ ಹೆಚ್ಚಳದಂತಹ ಪ್ರಯೋಗಗಳನ್ನು ಮತ್ತು  ಜಾಗತಿಕವಾಗಿ ದಾಖಲಾಗಿರುವ ಅತಿದೊಡ್ಡ ಮಾರಕಗಳು ಸಂಭವಿಸಿದ 6ನೇ, 14ನೇ, 19ನೇ ಮತ್ತು 21ನೇ ಶತಮಾನದ ರೋಗಗಳು ಮತ್ತು ದಾಖಲಾತಿಗೆ ದೊರೆಯದ ಅದೆಷ್ಟೋ ಪ್ರಕರಣಗಳನ್ನು ಪ್ರಾಕೃತಿಕವಾಗಿಯೋ ಇಲ್ಲವೋ, ಮಾನವ ಸೃಷ್ಟಿಯಾಗಿಯೋ ಜಗತ್ತಿನ ಹಲವು ಭಾಗಗಳಲ್ಲಿ ಆಗಾಗ ಪ್ರಯೋಗಿಸುತ್ತಲೇ ಇದೆ ಹಾಗೂ ಇಂದಿನ COVID-19 ಸಹ ಪ್ರಕೃತಿಯ ಮತ್ತೊಂದು ಪ್ರಯೋಗವಾಗಿರಬಹುದಾಗಿದೆಇದು ಅಂತ್ಯದ ಪ್ರಾರಂಭವಾಗಿದ್ದು ಇನ್ನಷ್ಟು ಭಯಾನಕಗಳನ್ನು ನಾವು ನೋಡಲಿದ್ದೇವೆ.

ಹಾಗಾದರೆ  ಇವತ್ತಿನ ಜರೂರೇನು ? ಎಂಬುದಕ್ಕೆ ಉತ್ತರ, ಸರ್ವವನ್ನು ಒಳಗೊಳ್ಳುವ ಕಟ್ಟುನಿಟ್ಟಿನ ಸುಸ್ಥಿರ ಅಭಿವೃದ್ಧಿ (sustainable development) ಮತ್ತು ಹಸಿರು ಅರ್ಥವ್ಯವಸ್ಥೆ (Green Economy) ಯನ್ನು ಒಳಗೊಂಡ ಬೆಳವಣಿಗೆಯಷ್ಟೆ ಆಗಿದೆ. ಸುಮಾರು 700 ಕೋಟಿ ಜನರಿಗೆ ಆಶ್ರಯ ನೀಡಿರುವ ಪ್ರಕೃತಿಯು, ಜಾಗತಿಕವಾಗಿ ವಾರ್ಷಿಕ ಸುಮಾರು 125 ಟ್ರಿಲಿಯನ್ ಡಾಲರ್ ನಷ್ಟು ಅಂದರೆ, 125 ಲಕ್ಷ ಕೋಟಿ ಮೌಲ್ಯದ ಸೇವೆಗಳನ್ನು ಒದಗಿಸುತ್ತದೆ. ಜೊತೆಗೆ ಪ್ರತಿಫಲಾಪೇಕ್ಷೆಯಿಲ್ಲದೆ ಉಚಿತವಾಗಿ ನೀಡುವ ಶುದ್ಧ ಗಾಳಿ, ನೀರು, ಆಹಾರ, ಶಕ್ತಿ, ಔಷಧಿ ಮತ್ತು ಇತ್ಯಾದಿಗಳನ್ನು ಉಪಯೋಗಿಸಿ ನಾವು ಮತ್ತದೇ ಮಾನವಕೇಂದ್ರಿತ ಯೋಜನೆಗಳನ್ನು ಹೇಗೆ ರೂಪಿಸಬೇಕು? ನಮ್ಮ ಹಿಂದಿನ ಸಹಜಸ್ಥಿತಿಗೆ ಹೇಗೆ ಕೊಂಡೊಯ್ಯಬೇಕು? ಎಂಬುದಕ್ಕೆ ಅಣಿಯಾಗುವ ಬದಲು, ವಿಜ್ಞಾನಿಗಳ ಮತ್ತು ಪರಿಸರ ತಜ್ಞರ ಅಭಿಪ್ರಾಯಗಳಿಗೆ ಮನ್ನಣೆ ನೀಡಿ ಪರಿಸರ ಸಂರಕ್ಷಣೆ ಅರಿವಿನ ತಿಳುವಳಿಕೆಯ ಮಹತ್ವವನ್ನು ಇನ್ನಾದರೂ ಅತ್ಯಂತ ಜರೂರಾಗಿ ಮಾಡಬೇಕಿದೆ. ಏಕೆಂದರೆ, ಪರಿಸರವನ್ನು ನಾವು ರಕ್ಷಿಸಿದರೆ - ಪರಿಸರ ನಮ್ಮನ್ನು ರಕ್ಷಿಸುತ್ತದೆ.


12 comments:

  1. ಮನುಷ್ಯನಿಗೆ ಪ್ರಕೃತಿಯ ಅಗತ್ಯವಿದೆಯೇ ಹೊರತು ಪ್ರಕೃತಿಗೆ ಮನುಷ್ಯನ ಯಾವ ಅಗತ್ಯವೂ ಇಲ್ಲ.. ಉಳಿಸಿ ಬೆಳೆಸುವ ಬದಲು ಬಳಸಿ ಬಿಸಾಡುವ ಮನೋ ಪ್ರವೃತ್ತಿಯುಳ್ಳ ಮನುಷ್ಯನಿಗೆ ಇಂದು ಪ್ರಕೃತಿಯೇ ಪಾಠ ಕಲಿಸುತ್ತದೆ..... ಪರಿಸರವನ್ನು ನಾವು ರಕ್ಷಿಸಿದರೆ ಪರಿಸರ ನಮ್ಮನ್ನು ರಕ್ಷಿಸುತ್ತದೆ ಎಂಬ ನಿಮ್ಮ ಮಾತು ಅಕ್ಷರ ಶ ನಿಜ...... ನಿಜಕ್ಕೂ ಇದು ಎಚ್ಚೆತ್ತುಕೊಳ್ಳಬೇಕಾದ ಸಮಯವೇ ಸರಿ... ಪರಿಸರದ ಬಗೆಗಿನ ನಿಮ್ಮ ಕಾಳಜಿ ನಿಜಕ್ಕೂ ಶ್ಲಾಘನೀಯ.... ಇದೊಂದು ಅತ್ಯುತ್ತಮ ಲೇಖನ..... ಲೇಖನದ ಮೂಲಕ ವಾಸ್ತವ ಸಂಗತಿಗಳ ಬಗ್ಗೆ ಅರಿವು ಮೂಡಿಸುವ ನಿಮ್ಮ ಪ್ರಯತ್ನಕ್ಕೆ ಸ್ನೇಹಿತರಿಬ್ಬರಿಗೂ ಅಭಿನಂದನೆಗಳು.........💐💐💐shilpa narayan......

    ReplyDelete
  2. This artical is really truthful...

    ReplyDelete
  3. ಅದ್ಭುತವಾದ ಸಂದೇಶ.ಎಲ್ಲರೂ ತಿಳಿಯಲೇ ಬೇಕಾದ ವಿಷಯವಿದು.thank you sir.

    ReplyDelete
  4. It's fantastic article Sandeep sir

    ReplyDelete
  5. ಮಾನವ ಸ್ವಾವಲಂಬಿನೂ ಹೌದು ಸಂಘಜೀವಿನೂ ಹೌದು.ಆದರೆ ಪರಿಸರ ಬಿಟ್ಟು ಎಂದಿಗು ಬದುಕಿರಲಾರ...ಇದನ್ನೂ ತಿಳಿದು ಕೂಡ ತನ್ನ ಅವಶ್ಯಕತೆ ಗಿಂತ ಹೆಚ್ಚಾಗಿ ಪರಿಸರವನ್ನು ನಾಶ ಮಾಡುತ್ತಾ ಹೋದರೆ ಕೊನೆಗೆ ಅದರ ಪ್ರತಿಫಲವು ಅವನದ್ದೆ ಆಗಿರುತ್ತದೆ.. ಅದಕ್ಕೆ ಉದಾಹರಣೆ ಇವತ್ತಿನ ಸ್ಥಿತಿ ...ನಿಜಕ್ಕೂ ನಿಮ್ಮ ಈ ಲೇಖನವು ವಾಸ್ತವ ಸಂಗತಿಯ ಬಗ್ಗೆ ತಿಳಿಸಿಕೊಟ್ಟಿದೆ....nice sir

    ReplyDelete