Sunday, November 15, 2020

ಅಂತಿಮಗೊಳ್ಳದ ಅನಿವಾರ್ಯತೆಗಳು !

        ಸಂದೀಪ್ ಎಸ್ ರಾವಣೀಕರ್



 ಅನಿವಾರ್ಯ ಏನು ಮಾಡಲು ಸಾಧ್ಯವಿಲ್ಲ..! ಎಂಬುದರಿಂದಲೇ ಪ್ರಾರಂಭವಾಗುವ ಅದೆಷ್ಟೋ ಮಾತುಗಳಲ್ಲಿ, ಅನಿವಾರ್ಯತೆಯು ನಮ್ಮಗಳ ಬದುಕಿನಲ್ಲಿ ಆಹ್ವಾನವಿಲ್ಲದ ಅತಿಥಿಯಂತೆ ಪ್ರವೇಶಿಸಿರುತ್ತದೆ.  ನಮ್ಮಗಳ ಆಯ್ಕೆಯೇ ಅಲ್ಲದ ಕಾರಣವಾಗಿ ಬರುವ 'ಅನಿವಾರ್ಯತೆ' ಅಪರಿಮಿತ ಆಕಾಶದಷ್ಟೇ ಅಗಲ, ಭೂಮಿಯ ಅಂತರಾಳದಷ್ಟೇ ಆಳವಿರುವ ಅಂತಿಮಗೊಳ್ಳದ ಸೃಷ್ಟಿಯಾಗಿದೆ. ಒಂದನ್ನು ಪಡೆದಾಕ್ಷಣ ಮತ್ತೊಂದರ ಬಯಕೆಯ ಕಡೆಗೆ ಓಡುವ ನಾವು ಯಾವುದರಲ್ಲೂ ಅಂತಿಮಗೊಳ್ಳುವುದಿಲ್ಲ. ಮನುಷ್ಯನ ಉಗಮದಿಂದ ಇಲ್ಲಿಯವರೆಗೂ, ಬೇರೆ ಬೇರೆ ಸಮಯ-ಸಂದರ್ಭಗಳ ಕಾರಣಗಳಿಗಾಗಿ ರೂಪುಗೊಂಡ ಅನಿವಾರ್ಯತೆಗಳು ಹಲವುಗಳ ಉಗಮಕ್ಕೆ ಕಾರಣವಾಗಿರುವುದಂತು ಸುಳ್ಳಲ್ಲ.

ಬದುಕಿನ ಕ್ರಮದಲ್ಲಿನ ಅವಶ್ಯಕಗಳನ್ನು ನಿರ್ಧರಿಸಿ, ಪಟ್ಟಿಮಾಡಿ ಪಡೆಯುತ್ತಿದ್ದ ಹಿಂದಿನ ವಸ್ತುಗಳ ಅನಿವಾರ್ಯಕ್ಕೂ, ಸೃಷ್ಟಿಯಾಗುತ್ತಿರುವ ವಸ್ತುಗಳಿಗಾಗಿಯೇ ಬದುಕಿನ ಕ್ರಮವನ್ನು ಬದಲಾಯಿಸಿಕೊಳ್ಳಬೇಕಾದ ಇಂದಿನ ಅನಿವಾರ್ಯತೆಗೂ ಹೋಲಿಸಿದಾಗ, ಅನಿವಾರ್ಯತೆ ಎಂಬುದು ಆಯಾ ಕಾಲಘಟ್ಟದ ಅನುಕೂಲ ಸಿಂಧುವಾಗಿ ಕಾಣಿಸುತ್ತದೆ. ಕೇವಲ ವಸ್ತುವಿನ ಭಾಗವಾಗಿ ಇರದ ಅನಿವಾರ್ಯತೆಯು, ಬದುಕಿನ ಪ್ರತಿ ಹೆಜ್ಜೆಯಲ್ಲೂ ಸೃಷ್ಟಿಯಾಗಿ ತನ್ನ ಕೊನೆ ಫಲಿತಾಂಶದ ಹೊರತಾಗಿಯೂ ತನ್ನದೇ ಇನ್ನೊಂದು ಅನಿವಾರ್ಯತೆಯನ್ನು ಸೃಷ್ಟಿಸದೇ ಇರಲಾರದು. ಅಂದರೇ, ಅನಿವಾರ್ಯತೆಗಳಿಗೆ ಒಳಗಾಗುವ ಪ್ರತಿಯೊಬ್ಬರೂ ತೆಗೆದುಕೊಳ್ಳುವ ನಿರ್ಧಾರಗಳು ಒಂದಲ್ಲ ಒಂದು ಕಾರಣ ಮತ್ತು ಸಂದರ್ಭಗಳಿಗೆ ಸಂಬಂಧಿಸಿದ್ದಾದರೂ ಸಹ, ಅದೇ ಕಾರಣ ಮತ್ತು ಸಂದರ್ಭಗಳು ಒಂದು ರೀತಿಯ ಅನಿವಾರ್ಯವೇ ಆಗಿರುತ್ತವೆ.

                ಯೋಚಿಸಿ-ಯೋಜಿಸಿ ಕಟ್ಟಿಕೊಳ್ಳುವ ಚೌಕಟ್ಟಿನ ಬದುಕು ಸಹ ಅನಿವಾರ್ಯ ಕಾರಣಗಳಿಂದ ಚೌಕಟ್ಟಿನಾಚೆಗೆ ತೆರೆದುಕೊಳ್ಳುತ್ತದೆ. ಜೀವಿಸುವುದರಲ್ಲಿನ ಬಯಕೆ, ಗೊಂದಲ, ಕಷ್ಟ, ಅವಮಾನ, ಅನುಮಾನ,  ದ್ವೇಷ, ಅಸೂಹೆ, ಮನಸ್ತಾಪ, ಬೇಜಾರು, ನೋವುಗಳನ್ನು ಇಟ್ಟುಕೊಂಡೆ ಇಡೀ ಜೀವನವ ಅಪರಿಪೂರ್ಣವಾಗಿಯೇ ದೂಡುವ  ಅನಿವಾರ್ಯತೆಯ ಸಂದರ್ಭಗಳಿಗೆ,  ಪರಿಹಾರವಾಗಿ ಕಾಣುವ ಸ್ಪಷ್ಟತೆ, ಹೊಂದಬಹುದಾದ ಬಯಕೆ, ಸನ್ಮಾನ, ನಂಬಿಕೆ, ಮಮತೆ, ಸುಖ, ನೆಮ್ಮದಿಗಳ ಸೃಷ್ಟಿಯ ಪರಿಪೂರ್ಣತೆಯ ಅನಿವಾರ್ಯತೆ   ಹೊತ್ತಿಗೆ ಜರೂರಿದೆ.

ವಿವಿಧ ಆಯಾಮ-ಕ್ರಮಗಳಾಚೆಗಿನ ಎಲ್ಲಾ ಸಂದರ್ಭಗಳಿಗೂ ಯಾವುದೇ ಬಗೆಯ ಉತ್ತರವಾಗಿ ನಿಲ್ಲುವ 'ಅನಿವಾರ್ಯತೆಯು' ಕೇವಲ ವಾಸ್ತವವಾಗಿಯಷ್ಟೇ ನಮ್ಮ ಮುಂದಿದೆ. ಅನಿವಾರ್ಯತೆಗೆ ಒಳಗಾಗದ ಸಂದರ್ಭ ಸೃಷ್ಟಿಯು ಕಾಲಘಟ್ಟದಲ್ಲಿ ಅನುಮಾನವೇ ಸರಿ. ಏಕೆಂದರೆ ಅನಿವಾರ್ಯ ಬದುಕಿದ್ದೀನಿ! ಅನ್ನುವುದರಿಂದ ಅನಿವಾರ್ಯವಾಗಿ ಸಾಯಲೇಬೇಕು! ಅನ್ನುವುದರಲ್ಲಿನ ಅಂತರದಲ್ಲಿ ಜರುಗಬಹುದಾದ ಹಲವು ಪರಿಸ್ಥಿತಿಗಳಿಗೆ ಮತ್ತದೇ 'ಅನಿವಾರ್ಯ' ಕಾರಣವಾಗಿರುತ್ತದಲ್ಲವೇ ? ಒಟ್ಟಿನಲ್ಲಿ, ಯಾರ ಕೊನೆಯಲ್ಲೂ ಅಂತಿಮಗೊಳ್ಳದ ಅನಿವಾರ್ಯತೆಗಳು, ಅನಿವಾರ್ಯತೆಗಳಾಗಿಯೇ ಉಳಿದುಬಿಡುತ್ತವೆ!

18 comments:

  1. ಅರಿವಿರದ ಅವಶ್ಯಕತೆಗಳು, ಅಂತ್ಯವಿಲ್ಲದ ಅನಿವಾರ್ಯತೆಗಳ..,😀

    ReplyDelete
  2. ಹೌದು ಸರ್ ನಿಜ, ಅನಿವಾರ್ಯತೆಯೇ ಜೀವನ

    ReplyDelete
  3. Nice article bro it says present human life.

    ReplyDelete