Wednesday, May 5, 2021

ಆಕ್ಸಿಜನ್ - ಈ ಹೊತ್ತಿನ ಸಂಜೀವಿನಿ

ಸಂದೀಪ್ ಎಸ್ ರಾವಣೀಕರ್    ಅರಿವಿಲ್ಲದೆಯೇ ಉಸಿರಾಡುತ್ತಿದ್ದ ಪ್ರತಿಯೊಬ್ಬರು, ಇಂದು ಹೌದು ನಾವು  ಉಸಿರಾಡುತ್ತಿರುವುದು ಆಕ್ಸಿಜನ್ನೇ ಎಂದು ಉದ್ಗರಿಸುತ್ತಿದ್ದಾರೆ.  ಆಮ್ಲಜನಕವು, ಜೀವವಾಯು - ಪ್ರಾಣವಾಯು ಎಂಥೆಲ್ಲಾ ಪ್ರೈಮರಿ ಸ್ಕೂಲ್ ನಿಂದಲೂ ಓದಿದ್ದ ನಾವು, ಪ್ರತಿದಿನ ಒಂದು ಅಂದಾಜಿನ ಪ್ರಕಾರ 20,000 ದಿಂದ 22,000 ಬಾರಿ ಉಸಿರಾಡುತ್ತಲೇ ಇರುತ್ತೇವೆ. ನಮಗೆ ಗೊತ್ತಿಲ್ಲದೆಯೇ ನಡೆಯುವ ಪ್ರಕ್ರಿಯೆಯು ನಮ್ಮಗಳ ಬದುಕಿನ ಮಹಾ ಪ್ರಾಣ ವಾಯುವಾಗಿರುವುದಂತು ಸತ್ಯ.

      ಆದರೆ, ಇಂಥಹ ಮಹಾ ಪ್ರಾಣವಾಯುವಿನ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಇಂದು ನಾವಿದ್ದೇವೆ. ಕೊರೋನಾದಂತಹ ಒಂದು ವರ್ಷದ ಹಳೆಯ ಕಾಯಿಲೆಯು ಇಂದು ಉಸಿರಾಡುವುದಕ್ಕೂ ಕೃತಕ ಆಮ್ಲಜನಕದ ಮೊರೆಹೋಗುವಂತೆ ಮಾಡುತ್ತಿದೆ. 2020 ಮೊದಲ ಕೊರೋನ ಅಲೆಯು ಭಾರತದ ಮಟ್ಟಿಗೆ ಅಷ್ಟೇನು ಗಂಭೀರ ಸ್ವರೂಪದ್ದಾಗಿರಲಿಲ್ಲವಾದರೂ, ತನ್ನ ಉಳಿವಿಗಾಗಿ ಕರೋನ ವೈರಸ್, ಹೊಸ ರೂಪದೊಂದಿಗೆ 2021 ಹೊತ್ತಲ್ಲಿ ಎರಡನೆಯ ಅಲೆಯು ಮಾರಣಾಂತಿಕವಾಗಿ ಇಡೀ ಭಾರತಕ್ಕೆ ಅಪ್ಪಳಿಸಿದೆಅವ್ಯವಸ್ಥೆಗಳೊಟ್ಟಿಗೆ ಭಾರತವನ್ನು ಲಾಕ್ಡೌನ್ ಮಾಡಿದ್ದರಿಂದಾಗಿ, ಕಳೆದ ವರ್ಷ ಶ್ರೀಸಾಮಾನ್ಯರು ನೈಜ ಸ್ವಾತಂತ್ರ್ಯವನ್ನು ಕಳೆದುಕೊಂಡಂಥ ಸ್ಥಿತಿಯನ್ನು ಅನುಭವಿಸಬೇಕಾಯಿತು. ಇನ್ನೇನು ಕೊರೋನಾ ಮಾಯವಾಯಿತು ಎಂಬಂತೆ ತನ್ನ ಸಹಜ ಸ್ಥಿತಿಗೆ ಮರಳಿದ ಭಾರತ, ರಾಜಕೀಯದವರ ಮತ್ತು ಆಡಳಿತಗಾರರ ದೂರದೃಷ್ಟಿಯಿಲ್ಲದ ನೀತಿ-ನಿಯಮಗಳಿಂದಾಗಿ ಈಗ ಕಳೆದ ಬಾರಿಗಿಂತ ಹೆಚ್ಚು ವಿಷಮ ಸ್ಥಿತಿಯನ್ನು ದೇಶದಾದ್ಯಂತ ಎದುರಿಸುವಂತಾಗಿದೆ.

 ಅಷ್ಟಕ್ಕೂ ಏನಿದು ಆಮ್ಲಜನಕ ಕೊರತೆ?

    ಸಾಮಾನ್ಯವಾಗಿ ಆಮ್ಲಜನಕವನ್ನು  ಕಬ್ಬಿಣ ಮತ್ತು ಉಕ್ಕಿನ ಉದ್ಯಮ, ಆಸ್ಪತ್ರೆಗಳು, ಔಷಧೀಯ ಘಟಕಗಳು ಮತ್ತು ಗಾಜಿನ ಉದ್ಯಮಗಳಲ್ಲಿ ಬಳಸಲಾಗುತ್ತದೆ. ಕೈಗಾರಿಕ ಮತ್ತು ವೈದ್ಯಕೀಯ ಆಮ್ಲಜನಕವು ಲಭ್ಯವಿರುವ ಎರಡು ಆಮ್ಲಜನಕದ ವಿಭಾಗಗಳಾಗಿದ್ದು, ಸದ್ಯಕ್ಕೆ ಕೈಗಾರಿಕಾ ಆಮ್ಲಜನಕವನ್ನು ದಹನ, ಆಕ್ಸಿಡೀಕರಣ, ಕತ್ತರಿಸುವುದು ಮತ್ತು ರಾಸಾಯನಿಕ ಪ್ರಕ್ರಿಯೆಗಳು ಸೇರಿದಂತೆ ಕೈಗಾರಿಕಾ ಸ್ಥಾವರಗಳ ಬಳಕೆಯಲ್ಲಿ ಉಪಯೋಗಿಸಲಾಗುತ್ತದೆ. ಆಮ್ಲಜನಕದ ಶುದ್ಧತೆಯ ಮಟ್ಟವು ಮಾನವ ಬಳಕೆಗೆ ಸೂಕ್ತವಾಗಿರುವುದಿಲ್ಲ. ಆದರೆ, ವೈದ್ಯಕೀಯ ಆಮ್ಲಜನಕವು ಹೆಚ್ಚಿನ ಶುದ್ಧತೆಯಿಂದ ಕೂಡಿದ್ದು ವೈದ್ಯಕೀಯ ಚಿಕಿತ್ಸೆಗೆ ಬಳಸಲು ಅಭಿವೃದ್ಧಿಪಡಿಸಲಾಗಿದೆಇದನ್ನು ಅರವಳಿಕೆಪ್ರಥಮ ಚಿಕಿತ್ಸೆಯಂತಹ ತುರ್ತುಪರಿಸ್ಥಿತಿಯಲ್ಲಿ ರೋಗಿಗಳನ್ನು ಪುನಶ್ಚೇತನಗೊಳಿಸಲು, ಉಸಿರಾಡಲು ಸಾಧ್ಯವಾಗದ ರೋಗಿಗಳಿಗೆ ಜೀವ ವಾಯುವನ್ನು ಬೆಂಬಲವಾಗಿ ನೀಡಲು ಮತ್ತು ಆಮ್ಲಜನಕ ಚಿಕಿತ್ಸೆಯ ಸಂದರ್ಭಗಳಲ್ಲಿ  ಬಳಸಲಾಗುತ್ತದೆ.

    ಪ್ರಸ್ತುತ ಸಂದರ್ಭದ ಆಮ್ಲಜನಕ ಕೊರತೆಯು ಕೋವಿಡ್ ಕಾರಣಗಳಿಗಾಗಿ ಉಲ್ಬಣಗೊಂಡಿದ್ದು, ಕಳೆದ ಕೆಲವು ವಾರಗಳಿಂದ ಆರೋಗ್ಯ ವ್ಯವಸ್ಥೆಯು ದೇಶದಲ್ಲಿ ಆಘಾತಕಾರಿ ಮತ್ತು ಸ್ಮಶಾನ ಸ್ಥಿತಿಯನ್ನು ಸೃಷ್ಟಿಸಿದೆ. ರಕ್ತದಲ್ಲಿನ ಆಮ್ಲಜನಕದ ಮಟ್ಟವು ತುಂಬಾ ಕಡಿಮೆಯಾದಾಗ ಅಂದರೆ ಹೈಪೋಕ್ಸೆಮಿಯಾ (Hypoxemia) ಹೊಂದಿರುವ, ತೀವ್ರತೆಯ ಲಕ್ಷಣದ ಕೋವಿಡ್ ರೋಗಿಗಳಿಗೆ ಆಮ್ಲಜನಕ ಚಿಕಿತ್ಸೆಯು ನಿರ್ಣಾಯಕವಾಗಿದ್ದು,   ಈಗ ಇದರ ಅಲಭ್ಯತೆಯು ಕೋವಿಡ್ ನಿಂದ ಬಳಲುತ್ತಿರುವವರ ಬದುಕುವ ಹಕ್ಕನ್ನೇ ಕಿತ್ತುಕೊಳ್ಳುತ್ತಿದೆ. ಕೆಲವು ಕ್ಲಿನಿಕಲ್ ಅಧ್ಯಯನಗಳ ಪ್ರಕಾರ ಕೋವಿಡ್ ಕಾರಣದಿಂದ ಆಸ್ಪತ್ರೆಗೆ ದಾಖಲಾದ ಕಾಲು ಭಾಗದಷ್ಟು ಮತ್ತು ತೀವ್ರ ನಿಗಾ ಘಟಕಗಳಲ್ಲಿರುವ ಮೂರನೇ ಎರಡರಷ್ಟು ರೋಗಿಗಳಿಗೆ ಆಮ್ಲಜನಕ ಚಿಕಿತ್ಸೆಯ ಅಗತ್ಯವಿದೆಯೆಂದು ಹೇಳಲಾಗುತ್ತಿದೆ. ಕಾರಣಕ್ಕಾಗಿಯೇ, ಆಸ್ಪತ್ರೆಗಳಲ್ಲಿ ಆಮ್ಲಜನಕ ಪೂರೈಕೆಯ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದು ಇವತ್ತಿನ ಜರೂರಾಗಿದೆ. ಇಲ್ಲಿ ಮರೆಯಲೇಬಾರದ ವಿಷಯವೇನೆಂದರೇ, ಕೊರೋನಾ ರೋಗವು ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ.   ಮೂಲಕ ಸೋಂಕಿಗೆ ಒಳಪಟ್ಟ ರೋಗಿಯ ಉಸಿರಾಟವನ್ನು ನಿಲ್ಲಿಸುತ್ತದೆ ಎಂಬುದು.

 ಭಾರತದಲ್ಲಿ ಪ್ರಸ್ತುತ ಆಮ್ಲಜನಕ ಸ್ಥಿತಿ!

          CRISIL ಸಂಸ್ಥೆಯ ತಜ್ಞರ ಪ್ರಕಾರ ಕೋವಿಡ್ - 19 ಮೊದಲು ವೈದ್ಯಕೀಯ ಆಮ್ಲಜನಕದ ಅವಶ್ಯಕತೆಯು 2020 ಆರ್ಥಿಕ ವರ್ಷದಲ್ಲಿ ಭಾರತದಲ್ಲಿ ದಿನಕ್ಕೆ ಸುಮಾರು 700 ರಿಂದ 800 ಟನ್ ಗಳಷ್ಟಿತ್ತು. ಪ್ರಸ್ತುತ ಏಪ್ರಿಲ್ ಎರಡನೇ ವಾರದಲ್ಲಿ ಪ್ರತಿದಿನ ಇದು 3500 - 4000 ಟನ್ಗಳಿಗೆ ಹೆಚ್ಚಾಗಿದ್ದು, ಕೋವಿಡ್ ಎರಡನೇ ಅಲೆಯ ತೀವ್ರತೆಯು ಹೀಗೆ ಮುಂದುವರಿದರೆ, ಆಮ್ಲಜನಕದ ಅವಶ್ಯಕತೆಯು ದಿನಕ್ಕೆ 6000 - 7000 ಟನ್ ಗಳಿಗೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಿದ್ದಾರೆ.  ಆದಾಗ್ಯೂ ಭಾರತದಲ್ಲಿ ಈಗ ಸುಮಾರು 7000 ಟನ್ ಗಳಷ್ಟು ಕೃತಕ ಆಮ್ಲಜನಕ ಉತ್ಪಾದನೆಗೊಳ್ಳುತ್ತಿದ್ದು, ಬಹುತೇಕ ಉತ್ಪಾದನೆಯು ಕೈಗಾರಿಕ ಬಳಕೆಗೆ ಮೀಸಲಾಗಿದೆ.

    ಭಾರತವು ಕೋವಿಡ್ ಮೊದಲ ಅಲೆಯಲ್ಲಿದ್ದಾಗಲೇ, ಸರ್ಕಾರವು 150 ಪ್ಲೆಶರ್ ಸ್ಟಿಂಗ್ ಅಡ್ಸ್ ರ್ಪ್ಷನ್ (PSA) ಆಮ್ಲಜನಕ ಸ್ಥಾವರಗಳಿಗೆ ಟೆಂಡರ್ ಆಹ್ವಾನಿಸಿತ್ತು. ಪ್ರತಿ ನಿಮಿಷಕ್ಕೆ 80,500 ಲೀಟರ್ ಸಾಮರ್ಥ್ಯದ ಆಧಾರದ ಮೇಲೆ ಆಸ್ಪತ್ರೆ ಆವರಣದಲ್ಲೇ ಇವುಗಳನ್ನು ನಿರ್ಮಿಸುವುದು ಇದರ ಯೋಜನೆಯಾಗಿತ್ತು. ಇದರೊಟ್ಟಿಗೆ PM CARES ನಿಂದ ಸುಮಾರು 201.58 ಕೋಟಿ ರೂಗಳನ್ನು ಮೀಸಲಿಟ್ಟು ದೇಶದಾದ್ಯಂತ ಸುಮಾರು 162 PSA ಗಳನ್ನು 154.19 ಮೆಟ್ರಿಕ್ ಟನ್ ಸಾಮರ್ಥ್ಯದೊಂದಿಗೆ ಸ್ಥಾಪಿಸುವುದಾಗಿ 2021 ಜನವರಿಯಲ್ಲಿ ಘೋಷಿಸಿತು.  ಆದರೆ ಏಪ್ರಿಲ್ 18 ತನ್ನ ಟ್ವೀಟ್ ನಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಇವುಗಳಲ್ಲಿ ಕೇವಲ 33 PSA ಗಳನ್ನು ಮಾತ್ರ ಸ್ಥಾಪಿಸಲಾಗಿದೆ ಎಂದು ಘೋಷಿಸಿತು.  ಅಂತೆಯೇ ಏಪ್ರಿಲ್ ಅಂತ್ಯದ ವೇಳೆಗೆ 59 ಮತ್ತು ಮೇ ಕೊನೆಗೆ 80 PSA ಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಿದೆ.  ಹೊತ್ತಿನಲ್ಲೆ ಅಂದರೇ, ಏಪ್ರಿಲ್ 2020 ಮತ್ತು ಜನವರಿ 2021 ನಡುವೆ ಭಾರತವು ವಿಶ್ವದಾದ್ಯಂತ 9,301 ಮೆಟ್ರಿಕ್ ಟನ್ ಆಮ್ಲಜನಕವನ್ನು ರಪ್ತು ಮಾಡಿತ್ತು ಎಂಬುದು ಗಮನಿಸಬೇಕಾದ ಅಂಶ.

ಆಮ್ಲಜನಕದ ಕೊರತೆ ಮತ್ತು ಸಾವು

      ಕೊರೋನಾ ಎರಡನೇ ಅಲೆಯ ಭೀಕರತೆಯು ಪ್ರಾಣವಾಯುವಿನ ಕೊರತೆಯನ್ನು ಇನ್ನಷ್ಟು ಹೆಚ್ಚಿಸಿರುವುದು ಆತಂಕಕ್ಕೀಡುಮಾಡಿರುವುದಂತು ಸುಳ್ಳಲ್ಲ. ಇದಕ್ಕೆ ಸಾಕ್ಷಿಯಾಗಿ ಒಂದೇ ದಿನದಲ್ಲಿ ಚಾಮರಾಜನಗರ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ 24 ಜನರ ಸಾವು, ಶನಿವಾರ 1ರಂದು ದೆಹಲಿಯ ಬಾತ್ರ ಆಸ್ಪತ್ರೆಯಲ್ಲಿ 12 ಜನರ ಸಾವು, ಕಲಬುರ್ಗಿಯ ಅಫ್ಜಲ್ಪುರ ದಲ್ಲಿ 4 ಜನರ ಸಾವು, 6 ಜನರ ಸಾವು ಬೆಂಗಳೂರಿನಲ್ಲಿ  ಮತ್ತು ಪ್ರತಿನಿತ್ಯ ಆಮ್ಲಜನಕದ ಕೊರತೆಯಿಂದ ಸಾಯುತ್ತಿರುವವರ ಪ್ರಮಾಣ ಹೆಚ್ಚುತ್ತಲೇ ಇದೆ.  ಕೊರೋನಾ ಮತ್ತು ಇನ್ನಿತರ ವೈದ್ಯಕೀಯ ಕಾರಣಗಳಿಗಾಗಿ ಆಮ್ಲಜನಕ ಕೊರತೆಯು ಹೇಗೆ ಸಾವಿಗೆ ಕಾರಣವಾಗುತ್ತದೆಯೋ, ಹಾಗೆಯೇ ಇಂಟರ್ ಡಿಸಿಪ್ಲಿನರಿ ಜರ್ನಲ್ ಲ್ಯಾನ್ಸೆಟ್ ಪ್ಲನೆಟರಿ ವರದಿಯ ಪ್ರಕಾರ 2019 ರಲ್ಲಿ ಭಾರತದಲ್ಲಿ ವಾಯುಮಾಲಿನ್ಯದಿಂದ 17 ಲಕ್ಷ ಜನ ಸಾವನ್ನಪ್ಪಿದ್ದಾರೆ ಎಂಬುದನ್ನು ಗಮನಿಸಬೇಕಾಗಿದೆ.

    ಒಟ್ಟಿನಲ್ಲಿ ಆಮ್ಲಜನಕದ ಅವಶ್ಯಕತೆಯು ವೈದ್ಯಕೀಯ ಕಾರಣಕ್ಕಾಗಿ ಅತ್ಯಂತ ತುರ್ತಾಗಿ ಬೇಕಾಗಿದೆ. ಕೊರೋನಾ ಸಾಂಕ್ರಾಮಿಕ ರೋಗವು ಅವಶ್ಯ ಆಮ್ಲಜನಕದ ಬೇಡಿಕೆಯನ್ನು ಹೆಚ್ಚಿಸುತ್ತಲೇ ಇದ್ದು, ಸಂಬಂಧಪಟ್ಟ ಸರ್ಕಾರಗಳು ಮತ್ತು ಇಲಾಖೆಗಳು ನಿಟ್ಟಿನಲ್ಲಿ ಕ್ರಮವಹಿಸುವುದು ಇಂದಿನ ಜರೂರಾಗಿದೆ. 2017 ರಲ್ಲಿ  ಉತ್ತರಪ್ರದೇಶದ ಗೋರಕ್ ಪುರದಲ್ಲಿ ಇದೇ ಆಮ್ಲಜನಕದ ಕೊರತೆಯಿಂದ ನೂರಾರು ಮಕ್ಕಳು ಒಂದೇ ಬಾರಿಗೆ ಸಾವನ್ನಪ್ಪಿದ್ದಾಗಿನಿಂದ, ಇಂದಿನ ರೋಗ ಲಕ್ಷಣದವರೆಗೆ ವೈದ್ಯಕೀಯ ಕ್ಷೇತ್ರದ ಆಮ್ಲಜನಕ ಬೇಡಿಕೆಯು ಈಡೇರದೆ ಇರುವುದಂತು,  ರಾಜಕಾರಣಿಗಳ ಮತ್ತು ಆಡಳಿತಗಾರರ ಅದಕ್ಷತೆಯನ್ನು ಎತ್ತಿ ತೋರಿಸುತ್ತಿದೆ.

      ಅಂದಹಾಗೆ, ನಮ್ಮ ವಾತವರಣದಲ್ಲಿ ನಾವು 100 ಪ್ರತಿಶತ ಆಮ್ಲಜನಕವನ್ನು ಉಸಿರಾಡುತ್ತಿದ್ದೇವೆ ಎಂಬುದು ಒಂದು ಸಾಮಾನ್ಯ ನಂಬಿಕೆ. ಆದರೆ ಇದು ನಿಜವಲ್ಲ. ನಾವು ಉಸಿರಾಡುವ ಗಾಳಿಯು ಸುಮಾರು 21% ಆಮ್ಲಜನಕ ಮತ್ತು 78% ಸಾರಜನಕದಿಂದ ಕೂಡಿದ್ದು, ಕೊನೆಯ 1% ಇಂಗಾಲದ ಡೈಯಾಕ್ಸೈಡ್ ಮತ್ತು ಹೈಡ್ರೋಜನ್ ನಂತಹ ಇತರ ಅನಿಲಗಳ ಮಿಶ್ರಣವಾಗಿದೆಒಟ್ಟಾರೆಯಾಗಿ ಪ್ರಕೃತಿದತ್ತವಾಗಿ ಸಿಗುವ ಪ್ರಾಣವಾಯು ಹಲವು ಅಂಶಗಳ ಒಟ್ಟು ಮೊತ್ತವಾಗಿದ್ದು, ಬೆಲೆತೆತ್ತು ಉಸಿರಾಡುವಂತಹ ಸ್ಥಿತಿಗೆ ತಲುಪಿರುವುದು ಕಾಲದ ದೊಡ್ಡ ದುರಂತ.


11 comments:

 1. ಖಂಡಿತವಾಗಿ ಸಂದೀಪ್ ಜೀ ನಮ್ಮ ದೇಶದಲ್ಲಿ ದೊಡ್ಡ ದುರಂತ ಅಂದರೆ ಶಿಕ್ಷಣ ಮತ್ತು ವೈದ್ಯಕೀಯ ಕ್ಷೇತ್ರಕ್ಕೆ ಹೆಚ್ಚು ಒತ್ತು ಕೊಡಬೇಕು ಆದರೆ ಅದನ್ನು ಬಿಟ್ಟು ಬೇರೆ ಎಲ್ಲ ಕೆಲಸ ಮಾಡ್ತ ಇದ್ದಾರೆ ನಮ್ಮ ರಾಜಕಾರಣಿಗಳು ಚೆ..ಚೆ..ಎಂತ ದುರಂತ

  ReplyDelete
 2. ನಮ್ಮ ರಾಜಕೀಯ ವೆವಸ್ತೆ ಉತ್ತಮ ರೀತಿಯ ನಿರ್ಣಯ ಕೈಗೊಳ್ಳೋ ವರೆಗೂ ಈ ಸಮಸ್ಯೆ ಬಗೆಹರಿಯೆಲ್ಲಾ ಸರ್

  ReplyDelete
 3. Super ji....keep writing 💐

  ReplyDelete
 4. ತುಂಬಾ ಉಪಯುಕ್ತವಾದ ಮಾಹಿತಿ.... ಆದ್ರೇ ಸರ್ ಕೃತಕವಾಗಿ ಆಮ್ಲಜನಕವನ್ನ ಹೇಗೆ ಸೃಷ್ಟಿ ಮಾಡ್ತರೆ

  ReplyDelete
 5. Heart touching explanation of every single moments of present pandemic situation... thank u sir..

  ReplyDelete
 6. ತುಂಬಾ ಉಪಯುಕ್ತವಾದ ಮಾಹಿತಿ...
  ಅದ್ಭುತವಾದ ಲೇಖನ ಅಣ್ಣ

  ReplyDelete
 7. Sir Clear understanding of nuances of Government and oxygen production

  ReplyDelete